ಇಂಗ್ಲೆಂಡ್ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡಕ್ಕೆ ಹೊಸ ನಾಯಕ ಆಯ್ಕೆ?
India vs Bangladesh: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿಯು ಆಗಸ್ಟ್ 17 ರಿಂದ ಶುರುವಾಗಲಿದೆ. ಈ ಸಿರೀಸ್ನಲ್ಲಿ ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಾಗುತ್ತದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾದ ಏಕದಿನ ತಂಡದ ನಾಯಕನ ಬದಲಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನ್ನು ಆಯ್ಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಏಕದಿನ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಿದ್ದು, ಅವರ ಬದಲಿಗೆ ಯುವ ಆಟಗಾರನಿಗೆ ಕ್ಯಾಪ್ಟನ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
39 ವರ್ಷದ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇನ್ನುಳಿದಿರುವುದು ಏಕದಿನ ಕ್ರಿಕೆಟ್ನಲ್ಲಿ ಮಾತ್ರ. ಆದರೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಲು ಹಿಟ್ಮ್ಯಾನ್ಗೆ ಬಿಸಿಸಿಐ ಸೂಚಿಸಿದ್ದರು ಎನ್ನಲಾಗಿದೆ. ಇದಾಗ್ಯೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯಲು ಬಯಸಿದ್ದಾರೆ. ಅಲ್ಲದೆ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಗುರಿಯನ್ನು ಹೊಂದಿದ್ದಾರೆ.
ಆದರೆ ಅಷ್ಟರಲ್ಲಿ ರೋಹಿತ್ ಶರ್ಮಾ ಅವರ ವಯಸ್ಸು 40 ದಾಟಲಿದೆ. ಅಷ್ಟೇ ಅಲ್ಲದೆ ಅಲ್ಲಿಯವರೆಗೆ ಅವರು ಫಿಟ್ ಆಗಿರಲಿದ್ದಾರೆ ಅಥವಾ ಫಾರ್ಮ್ ಉಳಿಸಿಕೊಳ್ಳಲಿದ್ದಾರಾ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಮುಂಬರುವ ಸರಣಿಗೂ ಮುನ್ನ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ.
ಅದರಂತೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಏಕದಿನ ತಂಡದ ನಾಯಕನ ಘೋಷಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತ ತಂಡದ ಮುಂದಿನ ಏಕದಿನ ಸರಣಿಯು ಆಗಸ್ಟ್ 17 ರಿಂದ ಶುರುವಾಗಲಿದೆ.
ಇತ್ತ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಗಿಯುವುದು ಆಗಸ್ಟ್ 4 ರಂದು. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾರತಕ್ಕೆ ಮರಳಲಿದ್ದು, ಈ ತಂಡದಲ್ಲಿರುವ ಕೆಲ ಆಟಗಾರರು ಮಾತ್ರ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಆಟಗಾರರನ್ನು ಒಳಗೊಂಡಂತೆ ಆಗಸ್ಟ್ 2ನೇ ವಾರದಲ್ಲಿ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಿದ್ದಾರೆ. ಇದೇ ವೇಳೆ ಭಾರತ ಏಕದಿನ ತಂಡದ ನೂತನ ನಾಯಕನ ಘೋಷಣೆಯಾಗುವ ಸಾಧ್ಯತೆಯಿದೆ.
ನಾಯಕತ್ವದ ರೇಸ್ನಲ್ಲಿ ಇರುವವರು ಯಾರು?
ಭಾರತ ಟೆಸ್ಟ್ ತಂಡದ ನಾಯಕನಾಗಿರುವ ಶುಭ್ಮನ್ ಗಿಲ್ ಏಕದಿನ ಕ್ಯಾಪ್ಟನ್ ರೇಸ್ನಲ್ಲೂ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಗಿಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಹೆಸರು ಕೂಡ ಕೇಳಿ ಬರುತ್ತಿದ್ದು, ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: MLC 2025: 16 ಸಿಕ್ಸ್, 18 ಫೋರ್… ಒಂದೇ ದಿನದಲ್ಲಿ ದಾಖಲೆ ಉಡೀಸ್
ಒಟ್ಟಿನಲ್ಲಿ 39 ವರ್ಷದ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಶೀಘ್ರದಲ್ಲೇ ಅಂತ್ಯವಾಗುವುದು ಖಚಿತ. ಏಕೆಂದರೆ 41ನೇ ವಯಸ್ಸಿನಲ್ಲಿ ಹಿಟ್ಮ್ಯಾನ್ ಅವರನ್ನು 2027ರ ಏಕದಿನ ವಿಶ್ವಕಪ್ಗೆ ಆಯ್ಕೆ ಮಾಡುವ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೆ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈಗಲೇ ತಂಡವನ್ನು ರೂಪಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಹೀಗಾಗಿ ಇಂಗ್ಲೆಂಡ್-ಭಾರತ ನಡುವಣ ಟೆಸ್ಟ್ ಸರಣಿಯ ಬಳಿಕ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.
Published On - 11:54 am, Tue, 24 June 25
