IPL 2022: ಸೋಲಿನ ಬೆನ್ನಲ್ಲೇ ಮುಂಬೈ ತಂಡಕ್ಕೆ ಹಾಗೂ ರೋಹಿತ್ ಶರ್ಮಾಗೆ ದಂಡ..!
IPL 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಪಂಜಾಬ್ ಪರ ಶಿಖರ್ ಧವನ್ 50 ಎಸೆತಗಳಲ್ಲಿ 70 ಹಾಗೂ ನಾಯಕ ಮಯಾಂಕ್ ಅಗರ್ವಾಲ್ 32 ಎಸೆತಗಳಲ್ಲಿ 52 ರನ್ ಗಳಿಸಿದರು.
ಸತತ ಐದು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಸೋಲಿನ ಬೆನ್ನಲ್ಲೇ ದಂಡ ಬರೆ ಬಿದ್ದಂತಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ಗಾಗಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಹಾಗೂ ತಂಡಕ್ಕೆ ದಂಡ ವಿಧಿಸಲಾಗಿದೆ. ಅದರಂತೆ ರೋಹಿತ್ ಶರ್ಮಾಗೆ 24 ಲಕ್ಷ ರೂ. ಹಾಗೂ ತಂಡಕ್ಕೆ 6 ಲಕ್ಷ ರೂ. ಫೈನ್ ಹಾಕಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಪ್ರಕಾರ, ಕನಿಷ್ಠ ಓವರ್ ರೇಟ್ಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ತಂಡ 2ನೇ ಬಾರಿ ಈ ತಪ್ಪಸೆಗಿದೆ. ಹೀಗಾಗಿ ಹಿಟ್ಮ್ಯಾನ್ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಇದೀಗ ಮತ್ತದೇ ತಪ್ಪನ್ನು ಪುನರಾವರ್ತಿಸಿರುವ ಕಾರಣ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ 2ನೇ ಬಾರಿ ತಪ್ಪೆಗಿಸಿರುವುದರಿಂದ ಇಡೀ ತಂಡಕ್ಕೂ ಫೈನ್ ಹಾಕಲಾಗಿದೆ. ಅದರಂತೆ ತಂಡವು 6 ಲಕ್ಷ ರೂಪಾಯಿ ಅಥವಾ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ಪಾವತಿಸಬೇಕಿದೆ. ಇತ್ತ ಸತತ ಐದು ಸೋಲುಗಳಿಂದ ನಿರಾಸೆ ಮೂಡಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಸೋಲಿನ ಬೆನ್ನಲ್ಲೇ ದಂಡವು ಬರೆ ಪಾವತಿಸಬೇಕಾದ ಅನಿವಾರ್ಯತೆ ಬಂದಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಪಂಜಾಬ್ ಪರ ಶಿಖರ್ ಧವನ್ 50 ಎಸೆತಗಳಲ್ಲಿ 70 ಹಾಗೂ ನಾಯಕ ಮಯಾಂಕ್ ಅಗರ್ವಾಲ್ 32 ಎಸೆತಗಳಲ್ಲಿ 52 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಕೂಡ 15 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 186 ರನ್ ಗಳಿಸಿ 12 ರನ್‌ಗಳಿಂದ ಸೋಲನುಭವಿಸಿತು. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. 17 ಎಸೆತಗಳಲ್ಲಿ 28 ರನ್ ಗಳಿಸಿ ಹಿಟ್ಮ್ಯಾನ್ ಔಟಾಗಿದ್ದರು.
ಮುಂಬೈ ಪರ ಬ್ರೆವಿಸ್ ಅಬ್ಬರ: ಬೇಬಿ ಎಬಿ ಖ್ಯಾತಿಯ ಯುವ ದಾಂಡಿಗ ಡೆವಲ್ಡ್ ಬ್ರೆವಿಸ್ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸುವ ಮೂಲಕ ಗಮನ ಸೆಳೆದರು. ಕೇವಲ 25 ಎಸೆತಗಳಲ್ಲಿ 49 ರನ್ ಗಳಿಸಿ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು. ಬ್ರೆವಿಸ್ ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದ್ದರು. ಈ ಮೂಲಕ ಬೇಬಿ ಎಬಿ ಐಪಿಎಲ್ನಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?
Published On - 3:50 pm, Thu, 14 April 22