Rohit Sharma: ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಭಾರತದ ನಂಬರ್ 1 ಕ್ರಿಕೆಟಿಗ..!
Team India: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್, ಹನುಮ ವಿಹಾರಿ, ಗಿಲ್, ರಿಷಭ್ ಪಂತ್, ಕೆಎಸ್ ಭರತ್, ಅಶ್ವಿನ್, ರವೀಂದ್ರ ಜಡೇಜಾ.
ಭಾರತದ ನಂಬರ್ 1 ಕ್ರಿಕೆಟಿಗ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ…ಹೀಗೆ ಹೇಳಿದ್ದು ಮತ್ಯಾರೂ ಅಲ್ಲ, ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ. ಹೌದು, ಭಾರತ ಟೆಸ್ಟ್ ತಂಡದ ನಾಯಕನ ಘೋಷಣೆ ವೇಳೆ ರೋಹಿತ್ ಶರ್ಮಾಗಿಂತ ಉತ್ತಮ ಮತ್ತೊಂದು ಆಯ್ಕೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಚೇತನ್ ಶರ್ಮಾ ಹೀಗೆ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕಾರಣಗಳೂ ಕೂಡ ಇದೆ. ಏಕೆಂದರೆ ನಾಯಕತ್ವದ ರೇಸ್ನಲ್ಲಿ ಈ ಬಾರಿ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದರು. ಇದಾಗ್ಯೂ ಆಯ್ಕೆ ಸಮಿತಿ ಮೂರು ಸ್ವರೂಪಗಳ ತಂಡಕ್ಕೂ ಏಕೈಕ ನಾಯಕನನ್ನು ಆಯ್ಕೆ ಮಾಡಲು ನಿರ್ಧರಿಸಿತು. ಅತ್ತ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಇದೇ ಬೇಕಾಗಿತ್ತು. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕ ಯಾರಾಗಬೇಕೆಂಬ ಬಿಸಿಸಿಐ ಪ್ರಶ್ನೆಗೆ ರಾಹುಲ್ ದ್ರಾವಿಡ್ ಅವರ ಮೊದಲ ಆಯ್ಕೆ ರೋಹಿತ್ ಶರ್ಮಾ ಅವರ ಹೆಸರಾಗಿತ್ತು. ಅದರಂತೆ ಇದೀಗ ಮೂರು ತಂಡ, ಒಬ್ಬ ನಾಯಕ ಎಂಬ ತತ್ವವನ್ನು ಬಿಸಿಸಿಐ ಮುಂದುವರೆಸಿದೆ.
ಇತ್ತ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಯಾವುದೇ ಸರಣಿ ಸೋತಿಲ್ಲ ಎಂಬುದು ವಿಶೇಷ. ಪೂರ್ಣ ಪ್ರಮಾಣದ ನಾಯಕರಾದ ಬಳಿಕ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ನಡುವಣ ಸರಣಿಗಳನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದೀಗ ಹಿಟ್ಮ್ಯಾನ್ ಟೆಸ್ಟ್ ತಂಡದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ. ಅದು ಕೂಡ ಶ್ರೀಲಂಕಾ ವಿರುದ್ದ ಎಂಬುದು ವಿಶೇಷ.
ತವರಿನಲ್ಲಿ ನಡೆಯಲಿರುವ ಲಂಕಾ ವಿರುದ್ದದ ಸರಣಿಯೊಂದಿಗೆ ರೋಹಿತ್ ಶರ್ಮಾ ಹೊಸ ಇನಿಂಗ್ಸ್ವೊಂದನ್ನು ಆರಂಭಿಸಲಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಬಳಿಕ ಮೂರು ಮಾದರಿಯ ತಂಡಗಳನ್ನು ಮುನ್ನಡೆಸಿದ ಹೆಗ್ಗಳಿಕೆ ಕೂಡ ಹಿಟ್ಮ್ಯಾನ್ ಪಾಲಾಗಲಿದೆ. ಈಗಾಗಲೇ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ನಾಯಕತ್ವ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗರಿಂದ ಉತ್ತಮ ಅಭಿಪ್ರಾಯಗಳು ಕೇಳಿ ಬಂದಿವೆ.
ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ದಂತಕಥೆ ಸುನಿಲ್ ಗವಾಸ್ಕರ್, ರೋಹಿತ್ ಮಾತನಾಡುವ ರೀತಿಯಿಂದ, ಆಟಗಾರರು ತಮ್ಮ ಪಾತ್ರವನ್ನು ತಿಳಿದಿದ್ದಾರೆಂದು ತೋರುತ್ತದೆ. ತಂಡವು ಅವರಿಂದ ಏನನ್ನೂ ನಿರೀಕ್ಷಿಸುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಅದರಲ್ಲೂ ನಾಯಕನು ಇತರರಿಂದ ಏನನ್ನು ನಿರೀಕ್ಷಿಸುತ್ತಿದ್ದಾನೆ ಎಂಬುದರ ಬಗ್ಗೆ ಆಟಗಾರರಲ್ಲೂ ಅರಿವಿದೆ ಎಂದು ರೋಹಿತ್ ನಾಯಕತ್ವದ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಭಾರತದ ನೂತನ ಟೆಸ್ಟ್ ನಾಯಕನಿಗೆ ಥಂಬ್ಸ್-ಅಪ್ ನೀಡುವ ಟ್ವಿಟರ್‌ನಲ್ಲಿ “ಉತ್ತಮ ಆಯ್ಕೆ” ಎಂದು ಬರೆದುಕೊಂಡಿದ್ದಾರೆ. ಸದಾ ಟೀಮ್ ಇಂಡಿಯಾದ ಕಾಲೆಳೆಯುವ ಮೈಕೆಲ್ ವಾನ್ ಕೂಡ ರೋಹಿತ್ ಶರ್ಮಾ ಉತ್ತಮ ಆಯ್ಕೆ ಎಂದಿರುವುದು ಇಲ್ಲಿ ಉಲ್ಲೇಖಾರ್ಹ.
ಹಾಗೆಯೇ ಹಿರಿಯ ಪತ್ರಕರ್ತ ಅಯಾಜ್ ಮೆಮನ್ ಟ್ವೀಟ್ ಮಾಡಿ, “ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕನನ್ನಾಗಿ ಮಾಡಿದವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಂದರೆ ಆಯ್ಕೆ ಸಮಿತಿ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ಖ್ಯಾತ ಪತ್ರಕರ್ತ ಶ್ಲಾಘಿಸಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ, “ರೋಹಿತ್ ಶರ್ಮಾ ನಮ್ಮ ದೇಶದ ನಂಬರ್ 1 ಕ್ರಿಕೆಟಿಗ. ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಅವರಂತಹ ದೊಡ್ಡ ಆಟಗಾರ ನಾಯಕರಾದಾಗ, ತಂಡವನ್ನು ಮುನ್ನಡೆಸುವುದು ಕೂಡ ಸುಲಭವಾಗುತ್ತದೆ” ಎಂದು ತಿಳಿಸಿದ್ದಾರೆ. ಇದರೊಂದಿಗೆ ಹಿಟ್ಮ್ಯಾನ್ ನಾಯಕತ್ವದ ಮೇಲೆ ಬಹುತೇಕ ಮಾಜಿ ಆಟಗಾರರಲ್ಲಿ ಹೊಸ ಭರವಸೆ ಇದೆ.
ಈ ಭರವಸೆಯು ಇದೀಗ ಮುಗಿಲೆತ್ತರಕ್ಕೆ ಏರಿದೆ. ಏಕೆಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ಮೂರು ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಜಯ ಸಾಧಿಸಿದೆ. ಒಟ್ಟಿನಲ್ಲಿ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಲಿರುವ ಹಿಟ್ಮ್ಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಯುಗಕ್ಕೆ ನಾಂದಿಯಾಡಲಿದ್ದಾರಾ ಕಾದು ನೋಡಬೇಕಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್, ಹನುಮ ವಿಹಾರಿ, ಗಿಲ್, ರಿಷಭ್ ಪಂತ್, ಕೆಎಸ್ ಭರತ್, ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್