ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆಗುತ್ತಿದ್ದಂತೆಯೇ ರೋಹಿತ್ ಶರ್ಮಾ ಮನದಾಳದ ಮಾತು

ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತೊಮ್ಮೆ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇದರಿಂದಾಗಿ ಮುಂಬೈ ಇಂಡಿಯನ್ಸ್ ಹಾಗೂ ಅಭಿಮಾನಿಗಳಲ್ಲಿ ಸಂತೋಷದ ವಾತಾವರಣ ಮನೆ ಮಾಡಿದೆ. ಮತ್ತೊಮ್ಮೆ ನಾಯಕರಾಗಿದ್ದಕ್ಕೆ ರೋಹಿತ್ ಶರ್ಮಾ, ತಂಡದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತಂಡದ ಓನರ್ ಸಹ ರೋಹಿತ್​​ ಅವರನ್ನು ಕೊಂಡಾಡಿದ್ದಾರೆ.

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆಗುತ್ತಿದ್ದಂತೆಯೇ ರೋಹಿತ್ ಶರ್ಮಾ ಮನದಾಳದ ಮಾತು
Rohit Sharma

Updated on: Nov 27, 2026 | 9:05 PM

ಮುಂದಿನ ವರ್ಷದ ಐಪಿಎಲ್ (IPL) 20ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮತ್ತೆ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಘೋಷಿಸಿದೆ. ಫ್ರಾಂಚೈಸಿಯು ತನ್ನ ಮಹತ್ವದ 20ನೇ ಆವೃತ್ತಿಯನ್ನು ಸಂಭ್ರಮಿಸಲು ಸಜ್ಜಾಗುತ್ತಿರುವಾಗ, ತಂಡದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಾಯಕರೆನಿಸಿರುವ ರೋಹಿತ್ ಶರ್ಮಾ, ‘ನೀಲಿ ಮತ್ತು ಚಿನ್ನದ ಬಣ್ಣ’ದ ಪಡೆಯನ್ನು ಮತ್ತೊಂದು ರೋಚಕ ಹೊಸ ಅಧ್ಯಾಯದತ್ತ ಮುನ್ನಡೆಸಲಿದ್ದಾರೆ.

ಮುಂಬೈ ಇಂಡಿಯನ್ಸ್ ಜೊತೆಗಿನ ರೋಹಿತ್ ಅವರ ಪಯಣ ಅತ್ಯಂತ ವಿಶೇಷವಾದುದು. 2011ರಲ್ಲಿ ತಂಡವನ್ನು ಸೇರಿದಾಗಿನಿಂದಲೂ ಅವರು ತಂಡದ ಅನೇಕ ಐತಿಹಾಸಿಕ ಕ್ಷಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸುವಲ್ಲಿ ಮತ್ತು ತಂಡದಲ್ಲಿ ‘ಗೆಲುವಿನ ಸಂಸ್ಕೃತಿ’ಯನ್ನು ರೂಪಿಸುವಲ್ಲಿ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರ ನಾಯಕತ್ವ, ಯುವ ಪ್ರತಿಭೆಗಳ ಮೇಲಿನ ನಂಬಿಕೆ ಮತ್ತು ಅಭಿಮಾನಿಗಳೊಂದಿಗೆ ಅವರಿಗಿರುವ ಆಳವಾದ ಬಾಂಧವ್ಯವು ಅವರನ್ನು ಮುಂಬೈ ಇಂಡಿಯನ್ಸ್‌ನ ಅವಿಭಾಜ್ಯ ಅಂಗವನ್ನಾಗಿ ಮಾಡಿದೆ.

Loading...

ಇದನ್ನೂ ಓದಿ: ಹಿಟ್ ಮ್ಯಾನ್ ಈಸ್ ಬ್ಯಾಕ್: ರೋಹಿತ್‌ ಶರ್ಮಾಗೆ ಮತ್ತೆ ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್ ಪಟ್ಟ

ಮನದಾಳದ ಮಾತು ಬಿಚ್ಚಿಟ್ಟ ಹಿಟ್‌ಮ್ಯಾನ್

ಮುಂಬೈ ತಂಡದ  ಮತ್ತೆ ನಾಯಕರಾಗಿ ನೇಮಕಗೊಂಡಿದ್ದಕ್ಕೆ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದು,  “ಮುಂಬೈ ಇಂಡಿಯನ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ಯಾವಾಗಲೂ ಹೆಮ್ಮೆಯ ವಿಷಯವೆಂದು ನಾನು ಪರಿಗಣಿಸಿದ್ದೇನೆ. ಮುಂಬರುವ ಆವೃತ್ತಿ ಕುರಿತು ನೀತಾ ಭಾಭಿ ಮತ್ತು ಆಕಾಶ್ ಅವರೊಂದಿಗೆ ನಡೆಸಿದ ಮಾತುಕತೆಗಳು ಬಹಳ ಉತ್ಸಾಹದಾಯಕವಾಗಿದ್ದವು. ನಾವು ಸಾಧಿಸಬಲ್ಲ ವಿಷಯಗಳ ಬಗ್ಗೆ ನನಗೆ ಅಪಾರ ನಂಬಿಕೆಯಿದೆ. ನಾನು 20ನೇ ಆವೃತ್ತಿಗೆ, ಮುಂದಿರುವ ಸವಾಲುಗಳಿಗೆ ಮತ್ತು ನಮ್ಮ ಅಭಿಮಾನಿ ಬಳಗಕ್ಕೆ ಸಂಭ್ರಮಿಸಲು ಸಾಕಷ್ಟು ಕ್ಷಣಗಳನ್ನು ಒದಗಿಸಿಕೊಡಲು ಸಿದ್ಧನಿದ್ದೇನೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಗ್ಗಟ್ಟಿನಿಂದ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದರ ಮೇಲೆ ನಮ್ಮ ಗಮನವಿರುತ್ತದೆ” ಎಂದು ಹೇಳಿದ್ದಾರೆ.

ರೋಹಿತ್ ಬಗ್ಗೆ  ತಂಡದ ಓನರ್ ನೀತಾ ಅಂಬಾನಿ ಹೇಳಿದ್ದಿಷ್ಟು

“ನಾವು 2011ರಲ್ಲಿ ರೋಹಿತ್‌ಗಾಗಿ ಬಿಡ್ ಮಾಡಿದೆವು, ಅಂದಿನಿಂದಲೇ ಅವರು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದ ಪ್ರಮುಖ ಭಾಗವಾಗಿದ್ದಾರೆ. ನಮ್ಮನ್ನು ಸೇರಿದ ಆ ಯುವ ರೋಹಿತ್ ಇಂದಿಗೂ ನೆನಪಿದ್ದಾರೆ. ಒಬ್ಬ ಕ್ರಿಕೆಟಿಗನಾಗಿ, ಚಾಂಪಿಯನ್ ಆಗಿ, ನಾಯಕನಾಗಿ ಮತ್ತು ಅದ್ಭುತ ಕುಟುಂಬಸ್ಥನಾಗಿ ಅವರು ಹಲವು ವರ್ಷಗಳ ಕಾಲ ಬೆಳೆದು ಬಂದಿರುವುದನ್ನು ನೋಡುವುದು ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಮುಂಬೈ ಇಂಡಿಯನ್ಸ್‌ನ 20ನೇ ಆವೃತ್ತಿಯನ್ನು ನಾವು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ರೋಹಿತ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುವುದನ್ನು ನೋಡುವುದು ನಮ್ಮೆಲ್ಲರಿಗೂ ಅತ್ಯಂತ ವಿಶೇಷ ಕ್ಷಣವಾಗಿದೆ. ಅವರು ಕಳೆದ ವರ್ಷಗಳಲ್ಲಿ ನಮಗೆ ಅನೇಕ ಸುಂದರ ನೆನಪುಗಳನ್ನು ನೀಡಿದ್ದಾರೆ ಮತ್ತು ನಮ್ಮ ಅಭಿಮಾನಿಗಳಿಗೆ ಅವರು ಎಷ್ಟು ಮುಖ್ಯ ಎಂಬುದನ್ನು ನಾನು ಬಲ್ಲೆ. ಈ ಹೊಸ ಅಧ್ಯಾಯವು ಅವರಿಗೂ, ನಮ್ಮ ತಂಡಕ್ಕೂ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರೀತಿಸುವ ಕೋಟ್ಯಾಂತರ ಅಭಿಮಾನಿಗಳಿಗೂ, ಇನ್ನೂ ಅನೇಕ ಹೆಮ್ಮೆಯ ಕ್ಷಣಗಳನ್ನು ತರಲಿ ಎಂದು ನಾನು ಹಾರೈಸುತ್ತೇನೆ. ರೋಹಿತ್, ನಾವೆಲ್ಲರೂ ನಿಮ್ಮನ್ನು ಹುರಿದುಂಬಿಸಲಿದ್ದೇವೆ” ಎಂದು ನೀತಾ ಎಂ. ಅಂಬಾನಿ ಹೇಳಿದ್ದಾರೆ.


ಈ ಬಗ್ಗೆ ಆಕಾಶ್ ಅಂಬಾನಿ ಪ್ರತಿಕ್ರಿಯಿಸಿದ್ದು, “ನಮ್ಮ ಮಹತ್ವದ 20ನೇ ಆವೃತ್ತಿಯಲ್ಲಿ ‘ನೀಲಿ ಮತ್ತು ಚಿನ್ನದ ಬಣ್ಣ’ದ ಪಡೆಯನ್ನು ಮುನ್ನಡೆಸಲು ರೋಹಿತ್ ಮರಳಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮುಂಬೈ ಇಂಡಿಯನ್ಸ್ ಮತ್ತು ನಮ್ಮ ಅಭಿಮಾನಿಗಳ ಜೊತೆಗೆ ರೋಹಿತ್ ಹೊಂದಿರುವ ಬಾಂಧವ್ಯ ನಿಜವಾಗಿಯೂ ವಿಶೇಷವಾದುದು. ಮುಂಬರುವ ಆವೃತ್ತಿ ಕುರಿತು ನಾವು ನಡೆಸಿದ ಮಾತುಕತೆಗಳಲ್ಲಿ, ನಾವೆಲ್ಲರೂ ಒಟ್ಟಾಗಿ ಏನನ್ನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಹಂಚಿಕೊಂಡಿದ್ದೇವೆ. ರೋಹಿತ್ ಅವರ ಅನುಭವ ಮತ್ತು ನಾಯಕತ್ವ ಹಾಗೂ ನಾವು ರೂಪಿಸುತ್ತಿರುವ ಅತ್ಯುತ್ತಮ ತಂಡದೊಂದಿಗೆ, ಮುಂದಿನ ದಿನಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ನಮ್ಮ ಅಭಿಮಾನಿ ಬಳಗ (ಪಲ್ಟಾನ್) ಹೆಮ್ಮೆಪಡುವಂತಹ ಕ್ರಿಕೆಟ್ ಆಡಲು ಮತ್ತು ಒಟ್ಟಾಗಿ ಇನ್ನೂ ಅನೇಕ ವಿಶೇಷ ನೆನಪುಗಳನ್ನು ಸೃಷ್ಟಿಸಲು ನಾವು ಬಯಸುತ್ತೇವೆ” ಎಂದಿದ್ದಾರೆ.


ರೋಹಿತ್ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ 20ನೇ ಆವೃತ್ತಿಯಲ್ಲಿ ಕಣಕ್ಕಿಳಿಯಲಿದ್ದು, ಹೊಸ ಹುರುಪು, ಮಹತ್ವಾಕಾಂಕ್ಷೆ ಮತ್ತು ಅಭಿಮಾನಿ ಬಳಗದ ಅಚಲ ಬೆಂಬಲದೊಂದಿಗೆ 2027ರತ್ತ ಎದುರು ನೋಡುತ್ತಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us