Mohammed Shami: 9896 ಎಸೆತಗಳಲ್ಲಿ ಹೊಸ ದಾಖಲೆ ನಿರ್ಮಿಸಿದ ಮೊಹಮ್ಮದ್ ಶಮಿ..!
India vs South Africa Test: ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರುಗಳು 3ನೇ ದಿನದಾಟದಲ್ಲೇ ದಕ್ಷಿಣ ಆಫ್ರಿಕಾವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ (Team India) 3 ವಿಕೆಟ್ ನಷ್ಟಕ್ಕೆ 272 ರನ್ಗಳಿಸಿತ್ತು. 2ನೇ ದಿನದಾಟವು ಮಳೆಗೆ ಅಹುತಿಯಾದರೆ, ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 55 ಸೇರಿಸುವಷ್ಟರಲ್ಲಿ ಸರ್ಪಪತನ ಕಂಡಿತು. ಅದರಂತೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 327 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಶಮಿ (Mohammed Shami) ಅವರ ಮಾರಕ ದಾಳಿಗೆ ತರಗೆಲೆಯಂತೆ ಉದುರಿದವು.
ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರುಗಳು 3ನೇ ದಿನದಾಟದಲ್ಲೇ ದಕ್ಷಿಣ ಆಫ್ರಿಕಾವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಅದರಂತೆ 62.3 ಓವರ್ನಲ್ಲಿ 197 ರನ್ಗಳಿಸಿ ಸೌತ್ ಆಫ್ರಿಕಾ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು. ಟೀಮ್ ಇಂಡಿಯಾ ಕರಾರುವಾಕ್ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 44 ರನ್ಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಇನ್ನೊಂದೆಡೆ ಜಸ್ಪ್ರೀತ್ ಬುಮ್ರಾ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.
ಈ ಐದು ವಿಕೆಟ್ನೊಂದಿಗೆ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪೂರೈಸಿದ್ದಾರೆ. ಅದು ಕೂಡ ಅತೀ ಕಡಿಮೆ ಬಾಲ್ಗಳ ಮೂಲಕ ಎಂಬುದು ವಿಶೇಷ. ಹೌದು, ಟೀಮ್ ಇಂಡಿಯಾ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 200 ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಇದೀಗ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರು.
ಅಶ್ವಿನ್ 10248 ಎಸೆತಗಳ ಮೂಲಕ 200 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 9896 ಎಸೆತಗಳಲ್ಲಿ ಇನ್ನೂರು ವಿಕೆಟ್ ಪಡೆದು ಹೊಸ ದಾಖಲೆ ಬರೆದರು. ಇನ್ನು 11066 ಎಸೆತಗಳಲ್ಲಿ 200 ವಿಕೆಟ್ ಪಡೆದಿರುವ ಕಪಿಲ್ ದೇವ್ 3ನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 11989 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 10 ಸಾವಿರ ಎಸೆತಗಳ ಒಳಗೆ 200 ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಶಮಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(SA vs IND: Mohammed Shami Created New Record)