
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ರನ್ ನಿಯಂತ್ರಿಸುವುದರೊಂದಿಗೆ 28 ವಿಕೆಟ್ಗಳನ್ನೂ ಸಹ ಪಡೆದಿದ್ದರು. ಭುವನೇಶ್ವರ್ ಕುಮಾರ್ ಅವರ ಈ ಭರ್ಜರಿ ಯಶಸ್ಸಿಗೆ ಕಾರಣ ವೋಬ್ಲಿ ಸೀಮ್ ಕೌಶಲ್ಯವೇ ಎಂದಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಬೌಲಿಂಗ್ನೊಂದಿಗೆ ಅತ್ಯುತ್ತಮ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಸ್ವಿಂಗ್ ಮಾಡಲು ಬೌಲರ್ಗಳು ಚೆಂಡಿನ ಸೀಮ್ (ಚೆಂಡಿನ ಸ್ಟಿಚ್) ಮೇಲೆ ಹಿಡಿತ ಹೊಂದಿರುತ್ತಾರೆ. ಇದನ್ನು ಬ್ಯಾಟರ್ಗಳು ಸುಲಭವಾಗಿ ಗ್ರಹಿಸಿ ರನ್ಗಳಿಸುತ್ತಾರೆ”.
“ಆದರೆ ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಕೌಶಲ್ಯದ ಮೂಲಕ ದಾಳಿ ಸಂಘಟಿಸಿದ್ದಾರೆ. ಅಂದರೆ ಭುವಿ ಚೆಂಡಿನ ಸೀಮ್ ಮೇಲೆ ತುಸು ವಕ್ರವಾಗಿ ಬೆರಳನ್ನಿಟ್ಟು ಬೌಲಿಂಗ್ ಮಾಡಿದ್ದಾರೆ. ಇದರಿಂದ ಚೆಂಡು ಬಿದ್ದ ಮೇಲೆ ಎತ್ತ ಸಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದು ಇನ್ ಸ್ವಿಂಗ್ ಆಗಬಹುದು, ಇಲ್ಲಾ ಔಟ್ ಸ್ವಿಂಗ್ ಆಗಬಹುದು. ಹೀಗೆ ಬರುವ ಚೆಂಡನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟ”.
“ಏಕೆಂದರೆ ಬಾಲ್ ಪಿಚ್ ಆದ ನಂತರ ಬ್ಯಾಟರ್‌ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹದೊಂದು ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ಗೆ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ಆಫ್-ಸ್ಟಂಪ್ ಲೈನ್‌ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದಾರೆ. ಇದುವೇ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಸಿಕ್ರೇಟ್” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ವೋಬ್ಲಿ ಸೀಮ್ ದಾಳಿಯೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ಪಡೆದಿರುವುದು ಬರೋಬ್ಬರಿ 28 ವಿಕೆಟ್ಗಳು. ಹಾಗೆಯೇ 16 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 378 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 501 ರನ್ಗಳು ಮಾತ್ರ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!
ಅಂದರೆ ಪ್ರತಿ ಓವರ್ನಲ್ಲಿ 7.95 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಕನಿಷ್ಠ 100 ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 28 ವಿಕೆಟ್ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.