‘ಭಾರತದಿಂದ ಸಿಗುವ ಗೌರವ ನಮಗೆ ಪಾಕಿಸ್ತಾನದಿಂದ ಸಿಗುವುದಿಲ್ಲ’: ಸ್ಟೋಕ್ಸ್ ಉದಾತ್ತ ಕಾರ್ಯಕ್ಕೆ ಅಫ್ರಿದಿ ಶ್ಲಾಘನೆ
Shahid Afridi: ಸ್ಟೋಕ್ಸ್ ಹೃದಯ ವೈಶಾಲ್ಯತೆಯನ್ನು ಕೊಂಡಾಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಈಗ ಅಂತರರಾಷ್ಟ್ರೀಯ ಆಟಗಾರರು ಪರಸ್ಪರ ಹೆಚ್ಚು ಸ್ನೇಹಪರರಾಗಿರುವುದರಿಂದ ಈ ರೀತಿಯ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿರುತ್ತವೆ ಎಂದಿದ್ದಾರೆ.
ಪ್ರಸ್ತುತ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (England vs Pakistan) ನಡುವಿನ ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಇಂದಿನಿಂದ ಆರಂಭವಾಗಿದೆ. ಮೊದಲ ದಿನವೇ ಪಾಕ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡ ಕೇವಲ 4 ವಿಕೆಟ್ ಕಳೆದುಕೊಂಡು 504 ರನ್ ಬಾರಿಸಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes), ಪಾಕ್ ಪ್ರವಾಸದಲ್ಲಿ ಪಂದ್ಯದ ಶುಲ್ಕ ರೂಪದಲ್ಲಿ ಬರುವ ಪೂರ ಹಣವನ್ನು ಪಾಕ್ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಸ್ಟೋಕ್ಸ್ ಅವರ ಈ ನಡೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸ್ಟೋಕ್ಸ್ ಹೃದಯ ವೈಶಾಲ್ಯತೆಯನ್ನು ಕೊಂಡಾಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಕೂಡ ಈ ಕುರಿತು ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶಾಹಿದ್ ಅಫ್ರಿದಿ, ಸ್ಟೋಕ್ಸ್ ಅವರ ಇಂಗಿತವನ್ನು ಶ್ಲಾಘಿಸಿದ್ದು, ಈಗ ಅಂತರರಾಷ್ಟ್ರೀಯ ಆಟಗಾರರು ಪರಸ್ಪರ ಹೆಚ್ಚು ಸ್ನೇಹಪರರಾಗಿರುವುದರಿಂದ ಈ ರೀತಿಯ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿರುತ್ತವೆ ಎಂದಿದ್ದಾರೆ. ಅಲ್ಲದೆ ವಿಶ್ವಕಪ್‌ಗಾಗಿ ಭಾರತದ ಪ್ರವಾಸ ಮಾಡಿದ್ದ ವೇಳೆ ನಡೆದಿದ್ದ ಘಟನೆಯೊಂದನ್ನು ಸಹ ಅಫ್ರಿದಿ ಈ ಘಟನೆಯೊಂದಿಗೆ ತಾಳೆ ಹಾಕಿದ್ದಾರೆ.
ಭಾರತದಲ್ಲಿ ಸಿಗುವ ಗೌರವ ಪಾಕಿಸ್ತಾನದಲ್ಲಿ ಸಿಗುವುದಿಲ್ಲ
ಆ ಘಟನೆಯ ಬಗ್ಗೆ ಮಾತನಾಡಿರುವ ಅಫ್ರಿದಿ, ನಮ್ಮ ತಂಡ ವಿಶ್ವಕಪ್‌ಗಾಗಿ ಭಾರತ ಪ್ರವಾಸ ಮಾಡಿದ್ದಾಗ ನಾನು ತಂಡದ ನಾಯಕತ್ವವಹಿಸಿದೆ. ಆ ವೇಳೆ ಮಾತನಾಡಿದ್ದ ನಾನು, ಪಾಕ್ ಆಟಗಾರರಿಗೆ ಭಾರತದಲ್ಲಿ ಸಿಗುವ ಗೌರವ ಸ್ವತಃ ಪಾಕಿಸ್ತಾನದಿಂದ ನಮಗೆ ಸಿಗುವುದಿಲ್ಲ ಎಂದು ಹೇಳಿದ್ದೆ. ಆ ಸಮಯಕ್ಕೆ ಈ ಮಾತು ಬಹಳ ಸಕಾರಾತ್ಮಕ ಸಂದೇಶವಾಗಿತ್ತು. ಏಕೆಂದರೆ ಆ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧ ಹಾಳಾಗಿತ್ತು. ಹೀಗಾಗಿ ನಾವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆಯೂ ಅನುಮಾನವಿತ್ತು. ಒಬ್ಬ ಕ್ರೀಡಾಪಟುವಾಗಿ ಇಡೀ ಜಗತ್ತು ನಿಮ್ಮನ್ನು ನೋಡುತ್ತಿರುತ್ತದೆ. ಹೀಗಾಗಿ ನೀವು ಯಾವಾಗಲೂ ನಿಮ್ಮ ದೇಶದ ಖ್ಯಾತಿಯನ್ನು ಉಳಿಸುವ ನಿಟ್ಟಿನಲ್ಲಿ ವರ್ತಿಸಬೇಕು ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: BCCI: ಕ್ರಿಕೆಟ್ ಸಲಹಾ ಸಮಿತಿಗೆ ಮೂವರು ನೂತನ ಸದಸ್ಯರನ್ನು ನೇಮಕ ಮಾಡಿದ ಬಿಸಿಸಿಐ!
ಇದೇ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಹೊಗಳಿರುವ ಅಫ್ರಿದಿ, ಸ್ಟೋಕ್ಸ್ ಗೆಸ್ಚರ್ ಅದ್ಭುತವಾಗಿತ್ತು. ಅಲ್ಲದೆ ಅವರ ನಿರ್ಧಾರ ಉತ್ತಮ ಸಂದೇಶವಾಗಿದೆ. ಇಂತಹ ವಿಷಯಗಳು ಹೆಚ್ಚಾಗಿ ನಡೆಯಬೇಕು. ಇದಕ್ಕೆಲ್ಲ ಪ್ರಮುಖ ಕಾರಣ, ಆಟಗಾರರು ಈಗ ಹೆಚ್ಚು ಸ್ನೇಹಪರರಾಗಿರುವುದು ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ವಿವರ ಹೀಗಿದೆ
ಇನ್ನು ಈ ಟೆಸ್ಟ್ ಸರಣಿಯ ಬಗ್ಗೆ ಮಾತನಾಡುವುದಾದರೆ, ಬರೋಬ್ಬರಿ 17 ವರ್ಷಗಳ ನಂತರ ಇಂಗ್ಲೆಂಡ್ ತಂಡ ಪಾಕಿಸ್ತಾನದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡುತ್ತಿರುವುದು ಇದೇ ಮೊದಲು. ಸರಣಿಯ ಮೊದಲ ಪಂದ್ಯವು ಈಗಾಗಲೇ ರಾವಲ್ಪಿಂಡಿಯ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಾರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ತಂಡ ಮೊದಲ ದಿನವೇ ಪಾಕಿಸ್ತಾನದ ಮೇಲೆ ಸವಾರಿ ನಡೆಸಿದೆ. ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡಿರುವ ಸ್ಟೋಕ್ಸ್ ಪಡೆ ಬರೋಬ್ಬರಿ 504 ರನ್ ಬಾರಿಸಿದೆ.
ಅದರಲ್ಲೂ ಮೂವರು ಆರಂಭಿಕ ಆಟಗಾರರು ಪಾಕ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರೆ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿರುವ ಬ್ರೂಕ್ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಜಾಕ್ ಕ್ರೌಲಿ (122 ರನ್) ಹಾಗೂ ಬೆನ್ ಡೆಕೆಟ್ (107 ರನ್) ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಡೆಕೆಟ್ ವಿಕೆಟ್ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಓಲಿ ಪೋಪ್ ಕೂಡ ಭರ್ಜರಿ ಶತಕ ಸಿಡಿಸಿದರು. ಸದ್ಯ ಅಜೇಯ ಶತಕ ಸಿಡಿಸಿರುವ ಬ್ರೂಕ್ ಹಾಗೂ ನಾಯಕ ಸ್ಟೋಕ್ಸ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Thu, 1 December 22