ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ; ಗಿಲ್, ಗಂಭೀರ್ ಮೇಲೆ ‘ಲಾರ್ಡ್’ ಗಂಭೀರ ಆರೋಪ

Shardul Thakur allegations: ಶಾರ್ದೂಲ್ ಠಾಕೂರ್ ಭಾರತ ಕ್ರಿಕೆಟ್ ತಂಡದ ನಾಯಕ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಠಾಕೂರ್ ಆರೋಪಿಸಿದ್ದಾರೆ. ತಂತ್ರಗಳಲ್ಲಿ ದೋಷಗಳಿವೆ ಎಂದು ಹೇಳಿರುವ ಅವರು, ಮತ್ತೆ ಟೀಮ್ ಇಂಡಿಯಾಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ತಂಡದ ಆಂತರಿಕ ಭಿನ್ನಾಭಿಪ್ರಾಯವನ್ನು ಸೂಚಿಸುತ್ತವೆ.

ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ; ಗಿಲ್, ಗಂಭೀರ್ ಮೇಲೆ ‘ಲಾರ್ಡ್’ ಗಂಭೀರ ಆರೋಪ
Shardul Thakur

Updated on: Jul 02, 2026 | 9:16 PM

ಭಾರತ ಕ್ರಿಕೆಟ್ ತಂಡದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಭುಗಿಲೆದ್ದಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ. ನಾಯಕ ಶುಭ್​ಮನ್ ಗಿಲ್ (Shubman Gill) ಮತ್ತು ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ತಂತ್ರಗಳಿಂದಾಗಿ ನನ್ನನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಲಾರ್ಡ್ ಶಾರ್ದೂಲ್ ಠಾಕೂರ್ (Shardul Thakur) ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಸಮಯದಲ್ಲಿ ತಂಡದ ಆಡಳಿತ ಮಂಡಳಿ ತನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆರೋಪ ಮಾಡಿರುವ ಠಾಕೂರ್ ಇದರ ಹೊರತಾಗಿಯೂ, ಟೀಂ ಇಂಡಿಯಾ ಪರ ಮತ್ತೆ ಆಡುವ ಭರವಸೆ ವ್ಯಕ್ತಪಡಿಸಿದ್ದು, ಅವಕಾಶ ಸಿಕ್ಕರೆ ದೇಶಕ್ಕಾಗಿ ತಮ್ಮ ಅತ್ಯುತ್ತಮ ಕೊಡುಗೆ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ

ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ಶಾರ್ದೂಲ್ ಠಾಕೂರ್ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಡಿದ ಆ ಎರಡು ಪಂದ್ಯಗಳಲ್ಲೂ ಶಾರ್ದೂಲ್ ಅವರ ಪ್ರದರ್ಶನ ಮಿಶ್ರವಾಗಿತ್ತು. ಶಾರ್ದೂಲ್ ಆಡಿದ ಒಂದು ಟೆಸ್ಟ್​ನಲ್ಲಿ ಭಾರತ ಸೋತರೆ ಮತ್ತೊಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆ ಎರಡು ಪಂದ್ಯಗಳಲ್ಲಿ ಆಲ್‌ರೌಂಡರ್ ಆಗಿ ಆಡಿದ ಶಾರ್ದೂಲ್ ಠಾಕೂರ್ ಕೇವಲ 27 ಓವರ್‌ಗಳನ್ನು ಬೌಲ್ ಮಾಡಿದರು. ಇದೀಗ ಆ ಎರಡು ಟೆಸ್ಟ್ ಪಂದ್ಯಗಳ ಬಗ್ಗೆ ಅಭಿಪ್ರಾಯ ಹೊರಹಾಕಿರುವ ಠಾಕೂರ್, ‘ಇಂಗ್ಲೆಂಡ್‌ನಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನನಗೆ ಅನಿಸುತ್ತದೆ. ನನಗೆ ಬಹಳ ಕಡಿಮೆ ಓವರ್ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು ಮತ್ತು ತಪ್ಪು ಹಂತಗಳಲ್ಲಿ ನನ್ನನ್ನು ಬಳಸಲಾಯಿತು. ಹೀಗಾಗಿ ಆಡಳಿತ ಮಂಡಳಿಯ ತಂತ್ರಗಳಲ್ಲಿ ದೋಷಗಳಿವೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಕಷ್ಟಕರವಾದ ಪಿಚ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದೆ

ಆ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಿದ್ದರೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿದ್ದರು. ಇದೀಗ ಶಾರ್ದೂಲ್ ಠಾಕೂರ್ ನಾಯಕ ಮತ್ತು ಕೋಚ್ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ. ಆದಾಗ್ಯೂ ಈ ಪ್ರವಾಸದಲ್ಲಿ ಠಾಕೂರ್ ಬ್ಯಾಟಿಂಗ್‌ನಲ್ಲಿ 1, 4 ಮತ್ತು 41 ರನ್​ಗಳನ್ನಷ್ಟೇ ಕಲೆಹಾಕಿದ್ದು, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಠಾಕೂರ್, ‘ಲೀಡ್ಸ್‌ನಲ್ಲಿ ನನ್ನ ಬ್ಯಾಟಿಂಗ್ ಕೆಟ್ಟ ಹೊಡೆತಗಳಿಂದ ಕೂಡಿತ್ತು. ಆದರೆ ನಾನು ಮ್ಯಾಂಚೆಸ್ಟರ್‌ನಲ್ಲಿ ಕಷ್ಟಕರವಾದ ಪಿಚ್​ನಲ್ಲೂ ಚೆನ್ನಾಗಿ ಬ್ಯಾಟಿಂಗ್ ಮಾಡಿದೆ. ಏಕೆಂದರೆ ಮೋಡ ಕವಿದಿತ್ತು, ಚೆಂಡು ಸ್ವಿಂಗ್ ಆಗುತ್ತಿತ್ತು ಮತ್ತು ಪಿಚ್ ನಿರ್ದಿಷ್ಟವಾಗಿ ಪುಟಿಯುತ್ತಿರಲಿಲ್ಲ. ಆದಾಗ್ಯೂ ನಾನು ಆ ಕಷ್ಟಕರವಾದ ಪಿಚ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದೆ. ಇದರಿಂದ ಭಾರತ ತಂಡ ದೊಡ್ಡ ಮೊತ್ತ ಕಲೆಹಾಕಿ, ಪಂದ್ಯವನ್ನು ಡ್ರಾ ಮಾಡಿಕೊಂಡಿತು ಎಂದಿದ್ದಾರೆ.

ಟೀಮ್ ಇಂಡಿಯಾಗೆ ಮರಳುವ ಆಸೆ

ಶಾರ್ದೂಲ್ ಠಾಕೂರ್ ಸುಮಾರು 12 ತಿಂಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು, ಆ ಸರಣಿಯು 2-2 ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಮತ್ತೆ ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿರುವ ಠಾಕೂರ್, ‘ನಾನು ಭಾರತಕ್ಕಾಗಿ ಮತ್ತೆ ಆಡಲು 100 ಪ್ರತಿಶತ ಬಯಸುತ್ತೇನೆ. ಅದು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತದೆ. ನಿಮ್ಮನ್ನು ತಂಡದಿಂದ ಕೈಬಿಟ್ಟರೂ ಸಹ, ಭರವಸೆ ಒಂದು ದೊಡ್ಡ ಪದ ಎಂದು ನಾನು ಭಾವಿಸುತ್ತೇನೆ. ಭರವಸೆ ಜೀವಂತವಾಗಿರುವವರೆಗೆ, ಎಲ್ಲವೂ ಸಾಧ್ಯ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Thu, 2 July 26

Follow Us