Shivam Dube Century: 6,6,6,6,6,6,6,6,6.. ಸಿಡಿಲಬ್ಬರದ ಶತಕ ಸಿಡಿಸಿದ ಶಿವಂ ದುಬೆ
Shivam Dube Century: ಏಷ್ಯಾಕಪ್‌ನಲ್ಲಿ ಮಿಂಚಿದ್ದ ಯುವ ಆಲ್ರೌಂಡರ್ ಶಿವಂ ದುಬೆ, ಮುಂಬೈ ಪರ ಅಭ್ಯಾಸ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮತ್ತೆ ಅಬ್ಬರಿಸಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಈ ಪಂದ್ಯದಲ್ಲಿ ಅವರ ಆಲ್ರೌಂಡರ್ ಪ್ರದರ್ಶನ ಗಮನ ಸೆಳೆದಿದೆ. ಇದೇ ಪಂದ್ಯದಲ್ಲಿ ಪೃಥ್ವಿ ಶಾ ಕೂಡ ಅಮೋಘ ಶತಕ ಬಾರಿಸಿ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ದುಬೆ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ ಹಾಗೂ ಇಡೀ ಏಷ್ಯಾಕಪ್‌ನಲ್ಲಿ ತಮ್ಮ ಆಲ್ರೌಂಡರ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಟೀಂ ಇಂಡಿಯಾದ ಯುವ ಆಲ್ರೌಂಡರ್ ಶಿವಂ ದುಬೆ (Shivam Dube) ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ದುಬೆ, ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿದರು. ಗಮನಾರ್ಹವಾಗಿ, ದುಬೆ ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳನ್ನು ಬಾರಿಸಿದರು. ಆದಾಗ್ಯೂ ಉಭಯ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಸಿಡಿಲಬ್ಬರದ ಶತಕ ಸಿಡಿಸಿದ ದುಬೆ
ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಶಿವಂ ದುಬೆ ಶತಕದ ಇನ್ನಿಂಗ್ಸ್ ಆಡಿದರು. ಮುಂಬೈ ಆರಂಭಿಕ ಆಟಗಾರರಾದ ಅಂಗ್‌ಕ್ರಿಶ್ ರಘುವಂಶಿ 27 ಮತ್ತು ಆಕಾಶ್ ಆನಂದ್ ಕೇವಲ ಐದು ರನ್‌ಗಳಿಗೆ ಔಟಾದರು. ಹಾರ್ದಿಕ್ ತಮೋರ್ 24 ರನ್ ಗಳಿಸಿ ನಿವೃತ್ತರಾದರು, ಆದರೆ ಶಿವಂ ದುಬೆ ಮಾತ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಸುಮಾರು 160 ಸ್ಟ್ರೈಕ್ ರೇಟ್‌ನಲ್ಲಿ ಬಿರುಸಿನ ಶತಕ ಬಾರಿಸಿದರು. ಅದರಲ್ಲೂ ದುಬೆ, ಎಡಗೈ ಸ್ಪಿನ್ನರ್ ಹಿತೇಶ್ ವಾಲುಂಜ್ ಅವರ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.
ಭರ್ಜರಿ ಶತಕ ಬಾರಿಸಿದ ಪೃಥ್ವಿ ಶಾ
ಈ ಪಂದ್ಯದಲ್ಲಿ ಪೃಥ್ವಿ ಶಾ ಕೂಡ ಅದ್ಭುತ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆಡಿದ ಪೃಥ್ವಿ ಶಾ ಮೊದಲ ಇನ್ನಿಂಗ್ಸ್‌ನಲ್ಲಿ 181 ರನ್‌ಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಅರ್ಶಿನ್ ಕುಲಕರ್ಣಿ ಕೂಡ ಅದ್ಭುತ ಶತಕ ಬಾರಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 300 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆ ಹಂಚಿಕೊಂಡರು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪೃಥ್ವಿ ಶಾ 22 ರನ್ ಗಳಿಸಿದರೆ, ಕುಲಕರ್ಣಿ ಕೇವಲ 1 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
