ನಿಜವಾಗ್ಲೂ ನನಗೆ ನಗು ಬರುತ್ತಿದೆ… ಪಂದ್ಯ ಸೋತ ಬಳಿಕ ಶ್ರೇಯಸ್ ಅಯ್ಯರ್ ಹೇಳಿಕೆ
IPL 2025 SRH vs PBKS: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 245 ರನ್ ಕಲೆಹಾಕಿದರೆ, ಈ ಕಠಿಣ ಗುರಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ 8 ವಿಕೆಟ್ಗಳ ಜಯ ಸಾಧಿಸಿದೆ.

IPL 2025: ಐಪಿಎಲ್ನ 27ನೇ ಪಂದ್ಯವು ರನ್ ಸುರಿಮಳೆಗೆ ಸಾಕ್ಷಿಯಾಗಿತ್ತು. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ (PBKS) ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ (36) ಹಾಗೂ ಪ್ರಭ್ಸಿಮ್ರಾನ್ ಸಿಂಗ್ (42) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 82 ರನ್ ಬಾರಿಸಿದರು. ಇನ್ನು ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ (66) ಹಾಗೂ ಅಭಿಷೇಕ್ ಶರ್ಮಾ (141) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 18.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸನ್ರೈಸರ್ಸ್ ಹೈದರಾಬಾದ್ ತಂಡವು 247 ರನ್ ಬಾರಿಸಿ 8 ವಿಕೆಟ್ಗಳ ವಿಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ನಿಜವಾಗಿಯೂ ಹೇಳಬೇಕೆಂದರೆ, ಇದು ಅತ್ಯುತ್ತಮ ಮೊತ್ತವಾಗಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡವು 2 ಓವರ್ಗಳು ಬಾಕಿ ಇರುವಾಗಲೇ ಚೇಸ್ ಮಾಡಿರುವುದು ನೋಡಿದ್ರೆ ನಿಜಕ್ಕೂ ನನಗೆ ನಗು ಬರುತ್ತಿದೆ ಎಂದರು.
ಒಂದು ವೇಳೆ ನಾವು ಕೆಲ ಕ್ಯಾಚ್ಗಳನ್ನು ಹಿಡಿದಿದ್ದರೆ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದಿತ್ತು. ಆದರೆ ಅಭಿಷೇಕ್ ಶರ್ಮಾ ಅದೃಷ್ಟವಂತ. ಹೀಗೆ ಸಿಕ್ಕ ಜೀವದಾನಗಳನ್ನು ಬಳಸಿಕೊಂಡ ಅಭಿಷೇಕ್ ಅತ್ಯುತ್ತಮ ಇನಿಂಗ್ಸ್ ಆಡಿದರು ಎಂದು ಅಯ್ಯರ್ ಹೇಳಿದ್ದಾರೆ.
ಇನ್ನು ನಮ್ಮ ಸೋಲಿನ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ನಿರೀಕ್ಷೆಗಳಿಗೆ ತಕ್ಕಂತೆ ಬೌಲಿಂಗ್ ಮಾಡಲಿಲ್ಲ ಎಂಬುದೇ ಸತ್ಯ. ನಾವು ಡ್ರಾಯಿಂಗ್ ಬೋರ್ಡ್‌ಗೆ ಹೋಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿತ್ತು. ಅಭಿಷೇಕ್ ಮತ್ತು ಹೆಡ್ ನಡುವಿನ ಆರಂಭಿಕ ಪಾಲುದಾರಿಕೆ ಅದ್ಭುತವಾಗಿತ್ತು.
ಸನ್ರೈಸರ್ಸ್ ಹೈದರಾಬಾದ್ ಓಪನರ್ಗಳು ನಮಗೆ ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಇದರ ನಡುವೆ ಲಾಕಿ ಫರ್ಗುಸನ್ ಗಾಯಗೊಂಡು ಹೊರನಡೆದಿದ್ದು ಕೂಡ ನಮ್ಮ ಪಾಲಿಗೆ ಮುಳುವಾಯಿತು. ಒಂದು ವೇಳೆ ಅವರಿದ್ದಿದ್ದರೆ ಒಂದೆರಡು ವಿಕೆಟ್ಗಳು ಲಭಿಸುತ್ತಿದ್ದವು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ: SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
ನಾವು ಬೃಹತ್ ಮೊತ್ತ ಪೇರಿಸಿದಾಗ, 230 ರನ್ಗಳು ಉತ್ತಮ ಟಾರ್ಗೆಟ್ ಎಂದು ಭಾವಿಸಿದ್ದೆವು. ಆದರೆ ಸನ್ರೈಸರ್ಸ್ ಹೈದರಾಬಾದ್ ಆರಂಭಿಕರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅದರಲ್ಲೂ ಅಭಿಷೇಕ್ ಶರ್ಮಾ ಇನಿಂಗ್ಸ್ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಇದೀಗ ನಾವು ಸೋತಿದ್ದೇವೆ. ಈ ಸೋಲಿನೊಂದಿಗೆ ಪಾಠ ಕಲಿತಿದ್ದೇವೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.