ಶುಭ್ಮನ್ ಗಿಲ್ಗೆ ಅನಾರೋಗ್ಯ: ಮುಂಬರುವ ಟೂರ್ನಿಗೆ ಡೌಟ್
Duleep Trophy 2025: ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಶುರುವಾಗಲಿದೆ. 6 ವಲಯಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳನ್ನು ಹೆಸರಿಸಲಾಗಿದೆ. ಈ ತಂಡಗಳಲ್ಲಿ ಉತ್ತರ ವಲಯ ಟೀಮ್ನ ನಾಯಕನಾಗಿ ಶುಭ್ಮನ್ ಗಿಲ್ ಆಯ್ಕೆಯಾಗಿದ್ದರು. ಆದರೀಗ ಅನಾರೋಗ್ಯದ ಕಾರಣ ಗಿಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಅನಾರೋಗ್ಯದ ಕಾರಣ ಗಿಲ್ ಆಗಸ್ಟ್ 28 ರಿಂದ ಶುರುವಾಗಲಿರುವ ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ. ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಶುಭ್ಮನ್ ಗಿಲ್ ಉತ್ತರ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ಅದರಂತೆ ಆಗಸ್ಟ್ 28 ರಿಂದ ಶುರುವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಿತ್ತು. ಆದರೀಗ ಅನಾರೋಗ್ಯದ ಕಾರಣ ದೇಶೀಯ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಲು ಗಿಲ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಅವರು ಟೂರ್ನಿ ಆರಂಭಕ್ಕೂ ಮುನ್ನ ಸಂಪೂರ್ಣ ಗುಣಮುಖರಾದರೂ, ಇಡೀ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಏಕೆಂದರೆ ಶುಭ್ಮನ್ ಗಿಲ್ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್ ಟಿ20 ಟೂರ್ನಿಯುವ ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಅತ್ತ ದುಲೀಪ್ ಟ್ರೋಫಿ ನಡೆಯುವುದು ಆಗಸ್ಟ್ 28 ರಿಂದ ಸೆಪ್ಟೆಂಬರ್ 15 ರ ನಡುವೆ. ಹೀಗಾಗಿ ಶುಭ್ಮನ್ ಗಿಲ್ ಚೇತರಿಸಿಕೊಂಡು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡರೂ ಸೆಪ್ಟೆಂಬರ್ ಮೊದಲ ವಾರದಲ್ಲೇ ಉತ್ತರ ವಲಯ ತಂಡವನ್ನು ತೊರೆಯಲಿದ್ದಾರೆ.
ಅಲ್ಲದೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡವು ಏಷ್ಯಾಕಪ್ ಟೂರ್ನಿಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶೇಷ ಶಿಬಿರ ಏರ್ಪಡಿಸುವ ಸಾಧ್ಯತೆಯಿದ್ದು, ಈ ಶಿಬಿರದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಯುಎಇಗೆ ತೆರಳಲಿದ್ದಾರೆ. ಇನ್ನು ಶುಭ್ಮನ್ ಗಿಲ್ ದುಲೀಪ್ ಟ್ರೋಫಿಗೆ ಅಲಭ್ಯರಾದರೆ ಉತ್ತರ ವಲಯ ತಂಡವನ್ನು ಅಂಕಿ ಕುಮಾರ್ ಮುನ್ನಡೆಸುವ ಸಾಧ್ಯತೆಯಿದೆ.
ಉತ್ತರ ವಲಯ ತಂಡ: ಶುಭಂ ಖಜುರಿಯಾ, ಅಂಕಿತ್ ಕುಮಾರ್, ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್‌ವೀರ್ ಸಿಂಗ್ ಚರಕ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಕನ್ಹಾವ ಕಾಂಬೋಜ್, ಅಕಿಬ್ ನಬಿ, ಕನ್ಹಯ್ಯ ವಧಾವನ್, ಶುಭಮನ್ ಗಿಲ್ (ಅಲಭ್ಯರಾಗುವ ಸಾಧ್ಯತೆ).
ಇದನ್ನೂ ಓದಿ: ಆಸ್ಟ್ರೇಲಿಯಾ ಪಡೆಯ ಗರ್ವಭಂಗ: 34 ವರ್ಷಗಳ ಬಳಿಕ ಅತ್ಯಂತ ಹೀನಾಯ ಸೋಲು
ಏನಿದು ದುಲೀಪ್ ಟ್ರೋಫಿ?
ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961 ರಲ್ಲಿ ಶುರುವಾದ ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ. ಅದರಂತೆ ಉತ್ತರ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಕೇಂದ್ರ ವಲಯ, ಈಶಾನ್ಯ ವಲಯ ಹಾಗೂ ಪೂರ್ವ ವಲಯ ತಂಡಗಳು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ.
