ಬಿಸಿಸಿಐಗೆ ಬಿಗ್ ಶಾಕ್: ಹೊಸ ಕಾನೂನಿನಿಂದ 400 ಕೋಟಿ ರೂ. ನಷ್ಟ ಸಾಧ್ಯತೆ
ಕೇಂದ್ರ ಸರ್ಕಾರದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯಿಂದ ಭಾರತೀಯ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಕಷ್ಟಕ್ಕೆ ಸಿಲುವಿಕೆಯೊಂದಿಗೆ ಬಿಸಿಸಿಐ ತನ್ನ ಆದಾಯದಲ್ಲಿ ಭಾರೀ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಏಕೆಂದರೆ ಟೀಮ್ ಇಂಡಿಯಾದ ಪ್ರಸ್ತುತ ಪ್ರಾಯೋಜಕರು ಬೆಟ್ಟಿಂಗ್ ಕಂಪೆನಿ ಡ್ರೀಮ್ ಇಲೆವೆನ್. ಇದೀಗ ಹೊಸ ಕಾನೂನಿನ ಕಾರಣ ಬಿಸಿಸಿಐ ಈ ಒಪ್ಪಂದವನ್ನು ಕೊನೆಗೊಳಿಸಬೇಕಿದೆ.

2025 ರ ಏಷ್ಯಾಕಪ್‌ಗೆ ಮುನ್ನ ಬಿಸಿಸಿಐ ಅನಿರೀಕ್ಷಿತ ಆಘಾತವನ್ನು ಎದುರಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಕಾನೂನುಗಳಿಂದಾಗಿ ಬಿಸಿಸಿಐ ಆದಾಯಕ್ಕೆ ಹೊಡೆತ ಬೀಳಲಿದೆ. ಏಕೆಂದರೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ – 2025 ಅಡಿಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಕಾನೂನುಗಳಿಂದಾಗಿ ಆನ್‌ಲೈನ್ ಗೇಮಿಂಗ್ ಕಂಪನಿಗಳೊಂದಿಗಿನ ಬಿಸಿಸಿಐ ಯಾವುದೇ ಪ್ರಾಯೋಜಕತ್ವ ಹೊಂದಬಾರದು. ಇದೇ ಕಾರಣದಿಂದಾಗಿ ಆನ್‌ಲೈನ್ ಗೇಮಿಂಗ್ ಕಂಪನಿಗಳ ಜೊತೆಗಿನ ಒಪ್ಪಂದಗಳನ್ನು ರದ್ದುಗೊಳಿಸಲು ಬಿಸಿಸಿಐ ಸಿದ್ಧವಾಗಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ – 2025 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಕಾನೂನಿನಡಿಯಲ್ಲಿ, ಹಣದ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅವುಗಳ ಪ್ರವರ್ತಕರನ್ನು ನಿಷೇಧಿಸಲಾಗುತ್ತದೆ. ಈ ಕಾನೂನು ಬಿಸಿಸಿಐಗೆ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಏಕೆಂದರೆ ಡ್ರೀಮ್ 11 ಟೀಮ್ ಇಂಡಿಯಾದ ಪ್ರಾಯೋಜಕ. ಅಲ್ಲದೆ, ಮುಂದಿನ ಮೂರು ವರ್ಷಗಳ ಕಾಲ ಐಪಿಎಲ್ ಫ್ಯಾಂಟಸಿ ಹಕ್ಕುಗಳನ್ನು ಮೈ 11 ಸರ್ಕಲ್ ಹೊಂದಿದೆ. ಇದೀಗ ಹೊಸ ಕಾನೂನುಗಳಿಂದಾಗಿ ಡ್ರೀಮ್ 11 ಹಾಗೂ ಮೈ 11 ಸರ್ಕಲ್ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಬೇಕಿದೆ.
ಬಿಸಿಸಿಐ ಹಾಗೂ ಡ್ರೀಮ್ 11 ನಡುವೆ 358 ಕೋಟಿಗಳ ಒಪ್ಪಂದವಾಗಿದೆ. ಹಾಗೆಯೇ ಮೈ 11 ಸರ್ಕಲ್ ಕಂಪೆನಿ ಕೂಡ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಒಪ್ಪಂದವನ್ನು ಹೊಂದಿದೆ. ಇದೀಗ ಈ ಎರಡು ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸುವುದರಿಂದ ಬಿಸಿಸಿಐಗೆ ಸುಮಾರು 400 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಈ ಕಾನೂನು ಜಾರಿಗೆ ಬಂದ ನಂತರ ನಾವು ಅದನ್ನು ಪರಿಶೀಲಿಸುತ್ತೇವೆ. ಅನುಮತಿಸಿದರೆ ಮಾತ್ರ ನಾವು ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಕಂಪನಿಗಳಿಂದ ಪ್ರಾಯೋಜಕತ್ವವನ್ನು ಪಡೆಯುತ್ತೇವೆ. ಅನುಮತಿಸದಿದ್ದರೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸಿಗರೇಟ್ ಮತ್ತು ಮದ್ಯದ ಬ್ರಾಂಡ್‌ಗಳನ್ನು ನಿಷೇಧಿಸಿದಾಗ ಬಿಸಿಸಿಐ ಅವುಗಳಿಂದ ಯಾವುದೇ ಪ್ರಾಯೋಜಕತ್ವವನ್ನು ಪಡೆದಿರಲಿಲ್ಲ. ಅದೇ ರೀತಿ ಈ ವಿಷಯದಲ್ಲೂ ಮುಂದುವರೆಯಲಿದ್ದೇವೆ ಎಂದು ತಿಳಿಸಿದ್ದಾರೆ.
ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025 ರಲ್ಲಿ, ಭಾರತವು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಅನ್ನು ನಿಷೇಧಿಸಿರುವುದನ್ನು ಮುಂದುವರಿಸಲಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಕ್ ವಿರುದ್ಧ ಆಡಲು ಭಾರತಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮುಂಬರುವ ಏಷ್ಯಾಕ್ ಟಿ20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯುವುದು ಖಚಿತ.
ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಆದರೆ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸರಣಿಗೆ ಯಾವುದೇ ಅವಕಾಶವಿಲ್ಲ. ಅದರಂತೆ ಕೇಂದ್ರ ಸರ್ಕಾರ ರೂಪಿಸಿರುವ ಕ್ರೀಡಾ ಸಂಬಂಧಿತ ನೀತಿಗಳನ್ನು ಬಿಸಿಸಿಐ ಸಂಪೂರ್ಣವಾಗಿ ಪಾಲಿಸುತ್ತದೆ. ಆಟಗಾರರು ಮತ್ತು ತಂಡಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಈ ನೀತಿಗಳು ಭಾರತದಲ್ಲಿ ನಡೆಯುವ ಭವಿಷ್ಯದ ಪಂದ್ಯಾವಳಿಗಳಿಗೂ ಅನ್ವಯಿಸುತ್ತವೆ ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.
