Shubman Gill: ಸಚಿನ್ ದಾಖಲೆ ಮುರಿದ ಗಿಲ್: ಕೊಹ್ಲಿ ರೆಕಾರ್ಡ್ ಸೇಫ್
IND vs WI: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 3 ರನ್ಗಳ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಶುಕ್ರವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗಿಲ್ ಕೇವಲ 36 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಅರ್ಧಶತಕವನ್ನು ಪೂರ್ಣಗೊಳಿಸಿದರು. ವಿಶೇಷ ಎಂದರೆ 2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದ ಗಿಲ್ 2 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇನ್ನು ಈ ಅರ್ಧಶತಕದೊಂದಿಗೆ ಶುಭ್ಮನ್ ಗಿಲ್ ವಿಶೇಷ ದಾಖಲೆಯನ್ನು ಕೂಡ ಬರೆದರು. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಹೌದು, ವೆಸ್ಟ್ ಇಂಡೀಸ್ನಲ್ಲಿ ಟೀಮ್ ಇಂಡಿಯಾ ಪರ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇದೀಗ ಶುಭ್ಮನ್ ಗಿಲ್ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ತಮ್ಮ 24 ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ವೆಸ್ಟ್ ಇಂಡೀಸ್ನಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು.
ಇದೀಗ 22ನೇ ವಯಸ್ಸಿನಲ್ಲಿ ಶುಭ್ಮನ್ ಗಿಲ್ ಹಾಫ್ ಸೆಂಚುರಿ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಬರೆದಿಟ್ಟಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಇದಾಗ್ಯೂ ಈ ಪಟ್ಟಿಯಲ್ಲಿರುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಅಂದರೆ ವೆಸ್ಟ್ ಇಂಡೀಸ್ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.
ವಿರಾಟ್ ಕೊಹ್ಲಿ 22 ವರ್ಷ, 215 ದಿನಗಳ ಹರೆಯದಲ್ಲಿ ವೆಸ್ಟ್ ಇಂಡೀಸ್ ಅಂಗಳದಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದರು. ಇದೀಗ ಶುಭ್ಮನ್ ಗಿಲ್ 22 ವರ್ಷ, 317 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಶುಭ್ಮನ್ ಗಿಲ್ ಅವರ ಈ ಹಾಫ್ಸೆಂಚುರಿಯ ಹೊರತಾಗಿಯೂ, ಅತ್ತ 22 ವರ್ಷ, 215 ದಿನಗಳಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ಬರೆದಿದ್ದ ವಿರಾಟ್ ಕೊಹ್ಲಿಯ ದಾಖಲೆ ಇನ್ನೂ ಕೂಡ ಅಚ್ಚಾಗಿ ಉಳಿದಿರುವುದು ವಿಶೇಷ.
2019 ರಲ್ಲಿ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆಪಾದಾರ್ಪಣೆ ಮಾಡಿದ ಶುಭಮನ್ ಗಿಲ್, ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಅನ್ನು ಪ್ರತಿನಿಧಿಸುತ್ತಾರೆ. ಗಿಲ್ ಟೀಮ್ ಇಂಡಿಯಾ ಪರ 3 ಏಕದಿನ ಮತ್ತು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 30.47ರ ಸರಾಸರಿಯಲ್ಲಿ ಒಟ್ಟು 579 ರನ್ ಗಳಿಸಿದ್ದಾರೆ. ಇನ್ನು 4 ಏಕದಿನ ಪಂದ್ಯಗಳಿಂದ ಒಟ್ಟು 113 ರನ್ ಕಲೆಹಾಕಿದ್ದಾರೆ.
ಸರಣಿಯಲ್ಲಿ ಭಾರತಕ್ಕೆ ಮುನ್ನಡೆ:
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 3 ರನ್ಗಳ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ನಾಯಕ ಶಿಖರ್ ಧವನ್ (Shikhar Dhawan) ಅವರ 97 ರನ್, ಶುಭ್ಮನ್ ಗಿಲ್ 64 ಹಾಗೂ ಶ್ರೇಯಸ್ ಅಯ್ಯರ್ ಅವರ 54 ರನ್ಗಳ ನೆರವಿನಿಂದ ಭಾರತ 50 ಓವರ್ಗಳಲ್ಲಿ 308 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಜಯಕ್ಕೆ ಕಠಿಣ ಹೋರಾಟ ನಡೆಸಿತು. ಕೈಲ್ ಮೇಯರ್ಸ್ 75 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ, ಕೊನೆಯ ಓವರ್ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) 15 ರನ್ಗಳನ್ನು ತಡೆಯುವಲ್ಲಿ ಯಶಸ್ವಿಯಾಗುವ ಮೂಲಕ ಟೀಮ್ ಇಂಡಿಯಾಗೆ 3 ರನ್ಗಳ ರೋಚಕ ಜಯ ತಂದುಕೊಟ್ಟರು.




