
ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಬಿಸಿಸಿಐ ಭಾರತ ಟೆಸ್ಟ್ ತಂಡವನ್ನು (India Test squad) ಪ್ರಕಟಿಸಿದೆ. ಈ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಹಲವು ಹೊಸ ಮುಖಗಳ ಜೊತೆಗೆ ಹಲವು ಹಳೆಯ ಮುಖಗಳು ಸೇರಿವೆ. ಅದರಲ್ಲೂ ಗುರ್ನೂರ್ ಬ್ರಾರ್ ಮತ್ತು ಸರಾಂಶ್ ಜೈನ್ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ಹೊಂದಿದ್ದಾರೆ. ಹಾಗೆಯೇ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಬುಮ್ರಾ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಅವರ ಫಿಟ್‌ನೆಸ್ ಕ್ಲಿಯರೆನ್ಸ್ ಅನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದೆಲ್ಲದರ ನಡುವೆ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸಂಭಾವ್ಯ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಭಾವ್ಯ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಅಶ್ವಿನ್, ‘ ಈ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ಹಾಗೆಯೇ ಕಳೆದ ಪಂದ್ಯದಲ್ಲಿ 7 ವಿಕೆಟ್ ಪಡೆದಿದ್ದ ಮಾನವ್ ಸುತಾರ್ ಜೊತೆಗೆ ಕುಲ್ದೀಪ್ ಯಾದವ್ ಕೂಡ ಆಡಬೇಕು ಎಂದಿದ್ದಾರೆ. ಅಂದರೆ ಅಶ್ವಿನ್ ತಮ್ಮ ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದಾರೆ.
ಇವರ ಜೊತೆಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಸರಾಂಶ್ ಜೈನ್ ಅವರನ್ನು ಮೊದಲ ಟೆಸ್ಟ್‌ನಲ್ಲಿ ಆಡಿಸಬೇಕು. ಸರಾಂಶ್ ಜೈನ್ ಅವರನ್ನು 7 ನೇ ಸ್ಥಾನದಲ್ಲಿ ಆಡಿಸಬೇಕು ಎಂದು ನಾನು ಭಾವಿಸುತ್ತೇನೆ. 5 ನೇ ಸ್ಥಾನದಲ್ಲಿ ರಿಷಭ್ ಪಂತ್, 4 ನೇ ಸ್ಥಾನದಲ್ಲಿ ಶುಭ್ಮನ್ ಗಿಲ್, 3 ನೇ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಅಥವಾ ಸಾಯಿ ಸುದರ್ಶನ್, ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಡಬೇಕು ಎಂದಿದ್ದಾರೆ.
ಇನ್ನು ಸಾಯಿ ಸುದರ್ಶನ್ ಅವರ ಅಮೋಘ ಫಾರ್ಮ್ ಬಗ್ಗೆ ಮಾತನಾಡಿರುವ ಅಶ್ವಿನ್, ತಂಡಕ್ಕೆ ಅತಿದೊಡ್ಡ ಅನಾನುಕೂಲವೆಂದರೆ ಸಾಯಿ ಸುದರ್ಶನ್ ಅವರ ಫಿಟ್ನೆಸ್. ಇತ್ತೀಚೆಗೆ ಭಾರತ ‘ಎ’ ಸರಣಿಯಲ್ಲಿ ಸಾಯಿ ಎರಡು ಶತಕಗಳನ್ನು ಗಳಿಸಿದರು, ಅದರಲ್ಲಿ ಒಂದು ಶತಕ ಗ್ಯಾಲೆಯಲ್ಲಿ ಸಿಡಿಯಿತು. ಗಾಲೆಯಲ್ಲಿನ ಪರಿಸ್ಥಿತಿ ವಿಶಿಷ್ಟವಾಗಿದೆ. ಗಾಳಿಯಿಂದಾಗಿ ಚೆಂಡು ಗಾಳಿಯಲ್ಲಿ ಸ್ವಿಂಗ್ ಆಗುತ್ತದೆ. ಹೀಗಾಗಿ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಸಾಯಿ ಅಲ್ಲಿ ಶತಕ ಬಾರಿಸಿದರು. ಹೀಗಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಆದ್ದರಿಂದ ಅವರು ಫಿಟ್ ಆಗಿದ್ದರೆ ಭಾರತಕ್ಕೆ ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ.
ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಸರಾಂಶ್ ಜೈನ್.
Published On - 10:11 pm, Wed, 29 July 26