
T20 World Cup 2022: ನೆದರ್ಲ್ಯಾಂಡ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 56 ರನ್ಗಳ ಭರ್ಜರಿ ಜಯ ದಾಖಲಿಸಿತು. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಎರಡನೇ ಗೆಲುವು. ಈ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಪಂದ್ಯಕ್ಕೂ ಮುನ್ನ ಅವರು ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ಭೇಟಿಯಾಗಿದ್ದರು. ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಜಿ ದಂತಕಥೆ ಆ್ಯಡಂ ಗಿಲ್ಕ್ರಿಸ್ಟ್ ಕೂಡ ಇದೇ ವೇಳೆ ಬಂದು ವಿರಾಟ್ ಕೊಹ್ಲಿಗೆ ಹಸ್ತಲಾಘವ ಮಾಡಿದ್ದರು.
ಪಾಕಿಸ್ತಾನದ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿಯನ್ನು ಭೇಟಿಯಾದ ಗಿಲ್ಕ್ರಿಸ್ಟ್, ಹಸ್ತಲಾಘವ ಮಾಡಿ ಬೆನ್ನು ತಟ್ಟಿದರು. ಆದರೆ ಈ ವೇಳೆ ಮಾಡಿದ ಹಸ್ತಲಾಘವ ಇದೀಗ ವೈರಲ್ ಆಗಿದೆ.
ಹಸ್ತಲಾಘವ ಮಾಡಿದ್ದ ಗಿಲ್ಕ್ರಿಸ್ಟ್, ವಿರಾಟ್ ಕೊಹ್ಲಿಯ ಕೈಯನ್ನು ಶಕ್ತಿಯುತವಾಗಿ ಕುಲುತ್ತಿರುವುದು ಕಾಣಬಹುದು. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯಚಟಾಕಿಗಳು ಹರಿದಾಡಲಾರಂಭಿಸಿದೆ.
ವಿರಾಟ್ ಕೊಹ್ಲಿಗೆ ಇನ್ನೂ ಪಂದ್ಯಗಳಿವೆ, ಮೆಲ್ಲನೆ ಕೈಕುಲುಕುವಂತೆ ಕೆಲವರು ಗಿಲ್ಕ್ರಿಸ್ಟ್ಗೆ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕೈ ಮುರಿದು ಹೋಗಬಹುದು..ಈ ರೀತಿ ಯಾರಾದರೂ ಪ್ರಶಂಸೆ ವ್ಯಕ್ತಪಡಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಕೈಕುಲುಕಿದ ಬಳಿಕ ಕೊಹ್ಲಿ ಫಿಸಿಯೋನ ಭೇಟಿಯಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಅವರ ಹಸ್ತಲಾಘವ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ತರಂಗ ಸೃಷ್ಟಿಸಿದೆ.
ಇನ್ನು ಟೀಮ್ ಇಂಡಿಯಾ ಈಗಾಗಲೇ 2 ಪಂದ್ಯಗಳನ್ನು ಆಡಿದ್ದು, 3ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಏಕೆಂದರೆ ಭಾರತ ತಂಡದ ಮುಂದಿನ ಎದುರಾಳಿಗಳು ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ್. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ ಟೀಮ್ ಇಂಡಿಯಾ.
Published On - 3:00 pm, Sat, 29 October 22