Rohit Sharma: ರೋಹಿತ್ ಶರ್ಮಾರ ಹಠಮಾರಿತನವೇ ಟೀಮ್ ಇಂಡಿಯಾ ಪಾಲಿನ ದೊಡ್ಡ ಸಮಸ್ಯೆ
T20 World Cup 2022: ಈ ಹಿಂದೆ ಕೂಲ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ, ಇದೀಗ ಮೈದಾನದಲ್ಲೇ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಹಲವು ವಿಡಿಯೋಗಳು ಹರಿದಾಡುತ್ತಿದೆ.
T20 World Cup 2022: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ (Team India) ಒಂದೊಂದೇ ಸಮಸ್ಯೆಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಏಷ್ಯಾಕಪ್ನಲ್ಲಿನ ಸೋಲಿಗೆ ಕಳಪೆ ಬೌಲಿಂಗ್ ಕಾರಣ ಎಂಬುದು ಸ್ಪಷ್ಟವಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಆ ಸಮಸ್ಯೆ ಮುಂದುವರೆದಿದೆ. ಇತ್ತ ಭಾರತ ತಂಡದ ಬೌಲರ್ಗಳು ಕೈ ಕೊಡುತ್ತಿದ್ದರೆ, ಅತ್ತ ನಾಯಕ ರೋಹಿತ್ ಶರ್ಮಾ ಕೂಡ ಸತತ ವೈಫಲ್ಯ ಹೊಂದುತ್ತಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಅಂದರೆ ಆರಂಭಿಕನಾಗಿ ರೋಹಿತ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.
ಕಳೆದ 10 ಟಿ20 ಇನಿಂಗ್ಸ್ಗಳಲ್ಲಿ ರೋಹಿತ್ ಶರ್ಮಾ ಪ್ರಮುಖ ತಂಡಗಳ ವಿರುದ್ಧ ಒಂದೇ ಅರ್ಧಶತಕ ಬಾರಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಇನ್ನು 2 ಹಾಫ್ ಸೆಂಚುರಿ ಬಾರಿಸಿದ್ದು 1 ಶ್ರೀಲಂಕಾ ವಿರುದ್ದ, ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ದ. ಇದಾಗ್ಯೂ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಇಂಗ್ಲೆಂಡ್, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ವಿರುದ್ದ ಹಿಟ್ಮ್ಯಾನ್ ಬ್ಯಾಟ್ನಿಂದ ದೊಡ್ಡ ಮೊತ್ತ ಮೂಡಿ ಬಂದಿಲ್ಲ. ಅದರಲ್ಲೂ ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ವಿರುದ್ದ 2 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕಲೆಹಾಕಿದ್ದು ಕೇವಲ 40 ರನ್ ಮಾತ್ರ. ಅಂದರೆ ಟೀಮ್ ಇಂಡಿಯಾ ಪಾಲಿನ ಮಹತ್ವದ ಪಂದ್ಯಗಳಲ್ಲಿ ಹಿಟ್ಮ್ಯಾನ್ ಕೈ ಕೊಡುತ್ತಿದ್ದಾರೆ.
ಒಂದೆಡೆ ಬ್ಯಾಟಿಂಗ್ ವೈಫಲ್ಯದ ನಡುವೆ ರೋಹಿತ್ ಶರ್ಮಾ ಆರಂಭಿಕ ಓವರ್ಗಳಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವ ಮೂಲಕ ವಿಕೆಟ್ ಒಪ್ಪಿಸುತ್ತಿರುವುದು ಕೂಡ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ ಎನ್ನಬಹುದು. ಅಂದರೆ ಹಿಟ್ಮ್ಯಾನ್ ಪವರ್ಪ್ಲೇನಲ್ಲೇ ವಿಕೆಟ್ ಕೈಚೆಲ್ಲಿ ಪೆವಿಲಿಯನ್ಗೆ ಮರಳುತ್ತಿದ್ದಾರೆ. ಆದರೆ ಕಳಪೆ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾ ತಮ್ಮ ಫಾರ್ಮ್ಗಿಂತ ಸ್ಪೋಟಕ ಇನಿಂಗ್ಸ್ಗೆ ಒತ್ತು ನೀಡುತ್ತಿರುವುದರಿಂದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗುತ್ತಿರುವುದು ಸ್ಪಷ್ಟ.
ಇದು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸಮಸ್ಯೆಯಾದರೆ, ಅತ್ತ ನಾಯಕತ್ವದಲ್ಲೂ ಹಿಟ್ಮ್ಯಾನ್ ಆಕ್ರಮಣಕಾರಿ ಮನೋಭಾವ ತಳೆದಿರುವುದು ಕೂಡ ಟೀಮ್ ಇಂಡಿಯಾ ಪಾಲಿಗೆ ಮುಳುವಾಗುತ್ತಿದೆ. ಅಂದರೆ ಮೈದಾನದಲ್ಲಿನ ಕೋಪವನ್ನು ಸಹ ಆಟಗಾರರ ಮೇಲೆ ವ್ಯಕ್ತಪಡಿಸುತ್ತಿರುವುದು ಕೂಡ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಹೊಸ ತಲೆನೋವನ್ನು ಉಂಟು ಮಾಡಿದೆ.
ಈ ಹಿಂದೆ ಕೂಲ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ, ಇದೀಗ ಮೈದಾನದಲ್ಲೇ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಹಲವು ವಿಡಿಯೋಗಳು ಹರಿದಾಡುತ್ತಿದೆ. ಅದರಲ್ಲೂ ಏಷ್ಯಾಕಪ್ನಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್ ನಾಯಕ ರೋಹಿತ್ ಶರ್ಮಾಗೆ ಫೀಲ್ಡಿಂಗ್ ಬದಲಾವಣೆಯ ಆಗ್ರಹವನ್ನು ಮುಂದಿಟ್ಟಾಗ, ಅದನ್ನು ಕೇಳಿಯೂ ಕೇಳದಂತೆ ಬೆನ್ನು ತೋರಿಸಿ ಸಿಟ್ಟಿನಿಂದ ತೆರಳಿದ್ದರು. ಸಹ ಆಟಗಾರನ ಮುಂದೆ ರೋಹಿತ್ ಶರ್ಮಾ ಅವರ ಈ ನಡೆಯ ಬಗ್ಗೆ ಭಾರೀ ಆಕ್ರೋಶಗಳು ಕೇಳಿ ಬಂದಿತ್ತು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆಯೂ ಬೌಲರ್ಗಳ ವಿರುದ್ಧ ಟೀಮ್ ಇಂಡಿಯಾ ನಾಯಕ ಹರಿಹಾಯ್ದಿದ್ದರು.
Abay bat to suno bicharay ki pic.twitter.com/KBJkEIXD01
— samia (@notrophiess) September 6, 2022
ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಅವರ ಹಠಮಾರಿತನ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ನಾಯಕನಾದ ಆಟಗಾರನು ತಮ್ಮ ಕೋಪ-ತಾಪಗಳನ್ನು ಅದುಮಿಟ್ಟುಕೊಳ್ಳಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅದರಲ್ಲೂ ಸತತ 3 ಪಂದ್ಯಗಳಲ್ಲೂ ಡೆತ್ ಓವರ್ಗಳಲ್ಲಿ ವಿಫಲರಾಗಿರುವ ಭುವನೇಶ್ವರ್ ಕುಮಾರ್ ಅವರನ್ನೇ ಅಂತಿಮ ಓವರ್ಗಳಲ್ಲಿ ಬಳಸಿಕೊಳ್ಳಲು ಮುಂದಾಗುತ್ತಿರುವುದು ರೋಹಿತ್ ಶರ್ಮಾ ಅವರ ಹಠಮಾರಿತನಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ಏಷ್ಯಾಕಪ್ನಲ್ಲಿ ಭುವನೇಶ್ವರ್ ಕುಮಾರ್ ಸತತವಾಗಿ ಡೆತ್ ಓವರ್ಗಳಲ್ಲಿ ವಿಫಲರಾಗಿದ್ದರು. ಇದಾಗ್ಯೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ರೋಹಿತ್ ಶರ್ಮಾ ಭುವಿಯನ್ನು ಅಂತಿಮ ಓವರ್ಗಳಲ್ಲಿ ಬಳಸಿಕೊಂಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹಿಟ್ಮ್ಯಾನ್ ಅವರ ಇಂತಹದೊಂದು ನಿರ್ಧಾರಕ್ಕೆ ಕಾರಣ, ಅವರು ಇತ್ತೀಚಿನ ಪ್ರೆಸ್ಮೀಟ್ನಲ್ಲಿ ಭುವನೇಶ್ವರ್ ಕುಮಾರ್ ಅವರ ಡೆತ್ ಓವರ್ ಸ್ಕಿಲ್ ಅನ್ನು ಬೆಂಬಲಿಸಿರುವುದು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ತವಕದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಡೆತ್ ಓವರ್ಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕಳಪೆ ಫಾರ್ಮ್ ನಡುವೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ವಿಕೆಟ್ ಒಪ್ಪಿಸುತ್ತಿರುವ ರೋಹಿತ್ ಶರ್ಮಾ, ಆ ಬಳಿಕ ಮೈದಾನದಲ್ಲೂ ಆಕ್ರೋಶಭರಿತರಾಗಿ ಕಾಣಿಸಿಕೊಳ್ಳುತ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಶುಭ ಸೂಚನೆಯಂತು ಅಲ್ಲ. ಅದರಲ್ಲೂ ನಾಯಕತ್ವದೊಂದಿಗೆ ಹಠಮಾರಿನ ಸೇರಿಕೊಂಡರೆ ಅದು ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಮುಳುವಾಗುವುದರಲ್ಲಿ ಅನುಮಾನವೇ ಇಲ್ಲ.