AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AFG vs AUS: ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸಿದ ಅಫ್ಘಾನಿಸ್ತಾನ್

T20 World Cup 2024: ಏಕದಿನ ವಿಶ್ವಕಪ್​ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಸಮೀಪದಲ್ಲಿ ಎಡವಿದ್ದ ಅಫ್ಘಾನಿಸ್ತಾನ್ ತಂಡವು ಈ ಬಾರಿ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ವಿಶ್ವ ಚಾಂಪಿಯನ್ನರ ವಿರುದ್ಧ ಮೊದಲ ಗೆಲುವು ಸಾಧಿಸಿ ಹೊಸ ಇತಿಹಾಸವನ್ನೇ ಬರೆದಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

AFG vs AUS: ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸಿದ ಅಫ್ಘಾನಿಸ್ತಾನ್
Afghanistan
Follow us
ಝಾಹಿರ್ ಯೂಸುಫ್
|

Updated on:Jun 23, 2024 | 9:38 AM

T20 World Cup 2024: ಟಿ20 ವಿಶ್ವಕಪ್​ನ 48ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ 21 ರನ್​ಗಳ ಗೆಲುವು ದಾಖಲಿಸುವಲ್ಲಿ ಅಫ್ಘಾನ್ ಪಡೆ ಯಶಸ್ವಿಯಾಗಿದೆ. ಕಿಂಗ್‌ಸ್ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 118 ರನ್ ಪೇರಿಸಿದ ಈ ಜೋಡಿ ಅಫ್ಘಾನ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಇದರ ನಡುವೆ 49 ಎಸೆತಗಳಲ್ಲಿ 60 ರನ್ ಬಾರಿಸಿ ರಹಮಾನುಲ್ಲಾ ಗುರ್ಬಾಝ್ ಔಟಾದರೆ, ಇದರ ಬೆನ್ನಲ್ಲೇ 51 ರನ್ ಬಾರಿಸಿದ್ದ ಇಬ್ರಾಹಿಂ ಝದ್ರಾನ್ ಕೂಡ  ವಿಕೆಟ್ ಒಪ್ಪಿಸಿದರು.

ಆರಂಭಿಕರಿಬ್ಬರ ಪತನದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಬೌಲರ್​ಗಳು ಅಫ್ಘಾನಿಸ್ತಾನ್ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಇದರ ನಡುವೆ ಒತ್ತಡಕ್ಕೆ ಒಳಗಾದ ಅಫ್ಘಾನಿಸ್ತಾನ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ್ 148 ರನ್ ಕಲೆಹಾಕಿತು.

ಅಫ್ಘಾನಿಸ್ತಾನ್ ಭರ್ಜರಿ ಬೌಲಿಂಗ್:

149 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನವೀನ್ ಉಲ್ ಹಕ್ ಮೊದಲ ಓವರ್​ನಲ್ಲೇ ಆಘಾತ ನೀಡಿದ್ದರು. ಟ್ರಾವಿಸ್ ಹೆಡ್ (0) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ನವೀನ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (12) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಡೇಂಜರಸ್ ಡೇವಿಡ್ ವಾರ್ನರ್ (3) ವಿಕೆಟ್ ಪಡೆಯುವಲ್ಲಿ ಮೊಹಮ್ಮದ್ ನಬಿ ಯಶಸ್ವಿಯಾದರು.

ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಫ್ಘಾನ್ ಬೌಲರ್​ಗಳನ್ನು ಮನಸ್ಸೋ ಇಚ್ಛೆ ದಂಡಿಸಿದ ಮ್ಯಾಕ್ಸ್​ವೆಲ್ 41 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 59 ರನ್ ಬಾರಿಸಿದರು. ಈ ಹಂತದಲ್ಲಿ ನೂರ್ ಅಹ್ಮದ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಮ್ಯಾಕ್ಸ್​ವೆಲ್ ಹೊರ ನಡೆಯಬೇಕಾಯಿತು.

ಇನ್ನು ಮಾರ್ಕಸ್ ಸ್ಟೋಯಿನಿಸ್ (11), ಟಿಮ್ ಡೇವಿಡ್ (2) ಮತ್ತು ಮ್ಯಾಥ್ಯೂ ವೇಡ್ (5) ಬಂದ ವೇಗದಲ್ಲೇ ಪೆವಿಲಿಯನ್​ಗೆ ಹಿಂತಿರುಗಿದರು. ಈ ಮೂಲಕ ಅಫ್ಘಾನಿಸ್ತಾನ್ ಬೌಲರ್​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅತ್ತ ಒತ್ತಡಕ್ಕೆ ಸಿಲುಕಿದ ಪ್ಯಾಟ್ ಕಮಿನ್ಸ್ (3) ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.

ಪರಿಣಾಮ ಕೊನೆಯ 2 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 33 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಆ್ಯಡಂ ಝಂಪಾ ಫೋರ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಅದರಂತೆ ಕೊನೆಯ ಓವರ್​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 24 ರನ್ ಬೇಕಿದ್ದರೆ, ಅಫ್ಘಾನಿಸ್ತಾನ್ ತಂಡಕ್ಕೆ 1 ವಿಕೆಟ್​ನ ಅವಶ್ಯಕತೆಯಿತ್ತು.

ಅಂತಿಮ ಓವರ್​ನ 2ನೇ ಎಸೆತದಲ್ಲಿ ಆ್ಯಡಂ ಝಂಪಾ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡುವ ಮೂಲಕ ಆಸ್ಟ್ರೇಲಿಯಾ ತಂಡ 19.2 ಓವರ್​ಗಳಲ್ಲಿ 127 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡ 21 ರನ್​ಗಳ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ್ ಪರ 4 ಓವರ್​ಗಳಲ್ಲಿ 20 ರನ್ ನೀಡಿ ಗುಲ್ಬದ್ದಿನ್ ನೈಬ್ 4 ವಿಕೆಟ್ ಪಡೆದು ಮಿಂಚಿದರೆ, ನವೀನ್ ಉಲ್ ಹಕ್ 4 ಓವರ್​ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಚೊಚ್ಚಲ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಗುಲ್ಬದಿನ್ ನೈಬ್ , ಅಜ್ಮತುಲ್ಲಾ ಒಮರ್ಜಾಯ್ , ಮೊಹಮ್ಮದ್ ನಬಿ , ಕರೀಂ ಜನತ್ , ನಂಗೆಯಾಲಿಯಾ ಖರೋಟೆ , ರಶೀದ್ ಖಾನ್ (ನಾಯಕ) , ನೂರ್ ಅಹ್ಮದ್ , ನವೀನ್-ಉಲ್-ಹಕ್ , ಫಝಲ್ಹಕ್ ಫಾರೂಖಿ.

ಇದನ್ನೂ ಓದಿ: Virat Kohli: ದಾಖಲೆಗಳ ಸರದಾರನ ಹೆಸರಿಗೆ 3 ವಿಶ್ವ ದಾಖಲೆ ಸೇರ್ಪಡೆ

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ , ಆಷ್ಟನ್ ಅಗರ್ , ಆಡಮ್ ಝಂಪಾ , ಜೋಶ್ ಹ್ಯಾಝಲ್​ವುಡ್ .

Published On - 9:28 am, Sun, 23 June 24

Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ