
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿ, ಪಾಕಿಸ್ತಾನಕ್ಕೆ 176 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಭಾರತದ ಕರಾರುವಕ್ಕಾದ ದಾಳಿಗೆ ಕಕ್ಕಾಬಿಕ್ಕಿಯಾಗಿ ಪೂರ್ಣ 20 ಓವರ್ಗಳನ್ನು ಆಡಲಾಗದೆ 114 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 8 ಸುತ್ತಿಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ಅಂತರವನ್ನು8-1 ಕ್ಕೆ ಕೊಂಡೊಯ್ದಿದೆ.
ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪಂದ್ಯ ನಡೆಯುವುದು ಅನುಮಾನವಾಗಿತ್ತು. ಇದಕ್ಕೆ ಕಾರಣ, ಪಾಕಿಸ್ತಾನ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ. ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಹಾಕಿದ್ದಕ್ಕೆ ಮುನಿದಿದ್ದ ಪಾಕ್ ಸರ್ಕಾರ, ನಮ್ಮ ತಂಡ ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದಿತ್ತು. ಆದರೆ ಆ ಬಳಿಕ ಪಾಕ್ ಸರ್ಕಾರದ ಮನವೊಲಿಸುವಲ್ಲಿ ಐಸಿಸಿ ಯಶಸ್ವಿಯಾಗಿತ್ತು. ಅದರಂತೆ ನಡೆದಿದ್ದ ಈ ಪಂದ್ಯವನ್ನು ಟೀಂ ಇಂಡಿಯಾ ಏಕಪಕ್ಷೀಯಾವಾಗಿ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ಮೊದಲ ಓವರ್‌ನಲ್ಲಿಯೇ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು 0 ರನ್‌ಗೆ ಔಟ್ ಮಾಡಿತು. ಇದರ ಹೊರತಾಗಿಯೂ ಪಾಕ್ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಪಾಕೆಟ್ ಡೈನಮೋ ಇಶಾನ್ ಕಿಶನ್, ಪಾಕ್ ತಂಡದ ಪ್ರತಿ ಬೌಲರ್‌ಗಳನ್ನು ಕಾಡಿದ ಕಿಶನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಇದರ ಜೊತೆಗೆ ಕೇವಲ 40 ಎಸೆತಗಳಲ್ಲಿ 77 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿ, ಪಾಕಿಸ್ತಾನವನ್ನು ಆರಂಭದಲ್ಲೇ ಪಂದ್ಯದಿಂದ ಹೊರದಬ್ಬಿದರು.
ಆದಾಗ್ಯೂ ಇಶಾನ್ ಕಿಶನ್ ಹೊರತುಪಡಿಸಿ, ಭಾರತದ ಯಾವ ಬ್ಯಾಟ್ಸ್‌ಮನ್‌ಗೂ ಪಾಕ್ ವಿರುದ್ಧ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ನಾಯಕ ಸೂರ್ಯಕುಮಾರ್ ಯಾದವ್ (32 ರನ್) ಮತ್ತು ತಿಲಕ್ ವರ್ಮಾ (25 ರನ್) ತಾಳ್ಮೆಯ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ನೆರವಾದರು. ಇವರ ಜೊತೆಗೆ ಶಿವಂ ದುಬೆ (27 ರನ್) ಮತ್ತು ರಿಂಕು ಸಿಂಗ್ (11 ರನ್) ಕೂಡ ಕೊನೆಯ ಓವರ್‌ಗಳಲ್ಲಿ ಉಪಯುಕ್ತ ಇನ್ನಿಂಗ್ಸ್ ಆಡಿ ತಂಡವನ್ನು 175 ರನ್‌ಗಳಿಗೆ ಕೊಂಡೊಯ್ದರು.
IND vs PAK: ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್
ಈ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಆರಂಭವೂ ಕೂಡ ಟೀಂ ಇಂಡಿಯಾದಂತೆ ಇತ್ತು. ಹಾರ್ದಿಕ್ ಪಾಂಡ್ಯ ಮೊದಲ ಓವರ್‌ನಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆದರೆ, ಆ ನಂತರದ ಕಥೆ ಸಂಪೂರ್ಣವಾಗಿ ಭಿನ್ನವಾಗಿತ್ತು. ಮೊದಲ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ಪರ ಇಶಾನ್ ಕಿಶನ್ ಅಬ್ಬರದ ಇನ್ನಿಂಗ್ಸ್ ಆಡಿದರೆ, ಇತ್ತ ಪಾಕಿಸ್ತಾನದ ಬ್ಯಾಟರ್ಗಳ ಮೇಲೆ ಟೀಂ ಇಂಡಿಯಾ ಬೌಲರ್‌ಗಳು ಸವಾರಿ ನಡೆಸಿದರು. ಎರಡನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಆರು ಎಸೆತಗಳಲ್ಲಿ ಸ್ಯಾಮ್ ಅಯೂಬ್ ಮತ್ತು ನಾಯಕ ಸಲ್ಮಾನ್ ಅಘಾ ಅವರನ್ನು ಔಟ್ ಮಾಡುವ ಮೂಲಕ ಪಾಕ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು.
ಇದಾದ ನಂತರ, ದಾಳಿಗಿಳಿದ ಭಾರತದ ಸ್ಪಿನ್ನರ್‌ಗಳು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರನ್ನಾಗಿ ಪೆವಿಲಿಯನ್‌ಗೆ ಕಳುಹಿಸಿದರು. ಅಕ್ಷರ್ ಪಟೇಲ್, ಬಾಬರ್ ಆಝಂ ಅವರನ್ನು 5 ರನ್‌ಗಳಿಗೆ ಔಟ್ ಮಾಡಿದರೆ, ತಿಲಕ್ ವರ್ಮಾ, ಶದಾಬ್ ಖಾನ್ ಅವರ ವಿಕೆಟ್ ಪಡೆದರು. ಪಾಕ್ ಪರ ಏಕಾಂಗಿ ಹೋರಾಟ ನೀಡಿದ ಉಸ್ಮಾನ್ ಖಾನ್ 44 ರನ್‌ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ, ಪಾಕಿಸ್ತಾನ 18 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಹಾರ್ದಿಕ್, ಬುಮ್ರಾ, ಅಕ್ಷರ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರೆ, ತಿಲಕ್ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 pm, Sun, 15 February 26