
ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಹಾಲಿ ಚಾಂಪಿಯನ್ ಟೀಂ ಇಂಡಿಯಾಕ್ಕೆ ಅತ್ಯಂತ ಮಹತ್ವದಾಗಿದೆ. ಏಕೆಂದರೆ ಭಾರತ ತಂಡಕ್ಕೆ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಒತ್ತಡದ ಜೊತೆಗೆ ಈ ಪಂದ್ಯಾವಳಿಯ ಆತಿಥ್ಯದ ಜವಬ್ದಾರಿಯನ್ನು ಬಿಸಿಸಿಐ (BCCI) ಹೊತ್ತಿದೆ. ಅಂದರೆ ಈ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಈ ಚುಟುಕು ವಿಶ್ವ ಸಮರಕ್ಕಾಗಿ ವಿಭಿನ್ನ ಯೋಜನೆಗಳನ್ನು ಹಾಕಿಕೊಂಡಿದ್ದು, ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ನ್ಯೂಜಿಲೆಂಡ್ ವಿರುದ್ಧ ಬಿಳಿ ಚೆಂಡಿನ ಸರಣಿಯನ್ನು ಆಡಲಿದೆ.
ನ್ಯೂಜಿಲೆಂಡ್ ತಂಡವು ವೈಟ್ ಬಾಲ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಈ ಸರಣಿಯು ಜನವರಿ 11 ರಿಂದ ಜನವರಿ 30 ರವರೆಗೆ ನಡೆಯಲಿದ್ದು, ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಟೀಂ ಇಂಡಿಯಾಗೆ ಒಳ್ಳೆಯ ವಿಷಯವೆಂದರೆ ಈ ಸರಣಿಯು ಐಸಿಸಿ ಟಿ20 ವಿಶ್ವಕಪ್ 2026 ಕ್ಕೂ ಮೊದಲು ನಡೆಯಲಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಮೆಂಟ್ ಫೆಬ್ರವರಿ 8, 2026 ರಿಂದ ಪ್ರಾರಂಭವಾಗಲಿದ್ದು, ಅದರ ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ. ಈ ಟೂರ್ನಮೆಂಟ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ.
ನ್ಯೂಜಿಲೆಂಡ್ ತಂಡದ ಬಗ್ಗೆ ಹೇಳುವುದಾದರೆ, 2026 ರ ಟಿ20 ವಿಶ್ವಕಪ್‌ಗೆ ಮೊದಲು ಭಾರತದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಅವರಿಗೆ ಸಿಗಲಿದೆ. ಕಿವೀಸ್ ತಂಡವು ಭಾರತದ ವಿರುದ್ಧದ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅನೇಕ ಬಲಿಷ್ಠ ಆಟಗಾರರನ್ನು ಹೊಂದಿದೆ. ಟಿ 20 ಸರಣಿಯ ಮೇಲೆ ಸಂಪೂರ್ಣ ಗಮನವಿದ್ದರೂ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡುತ್ತಿರುವುದನ್ನು ಕಾಣಬಹುದಾದ್ದರಿಂದ ಏಕದಿನ ಸರಣಿಯ ಮೇಲೂ ಗಮನವಿರುತ್ತದೆ.
IPL 2025: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ನಮ್ಮ ಕಿಂಗ್ ಕೊಹ್ಲಿ
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ಟೂರ್ನಮೆಂಟ್‌ನಲ್ಲಿ, ಅನೇಕ ಭಾರತೀಯ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಈ ಆಟಗಾರರಲ್ಲಿ ಕೆಲವರನ್ನು ಟಿ20 ವಿಶ್ವಕಪ್ 2026 ಟೂರ್ನಮೆಂಟ್‌ಗಾಗಿ ಭಾರತ ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರಸ್ತುತ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪ್ರದರ್ಶನಕ್ಕಾಗಿ ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸರಣಿಯಲ್ಲಿ, ಅನುಭವಿ ಆಟಗಾರರ ಜೊತೆಗೆ, ಯುವ ಕ್ರಿಕೆಟಿಗರು ಸಹ ತಮ್ಮ ಛಾಪು ಮೂಡಿಸಲು ಉತ್ಸುಕರಾಗಿರುತ್ತಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Thu, 12 June 25