ENGW vs AUSW: ಬ್ಯೂಮಂಟ್ ಅಜೇಯ ಶತಕ: ಆಸೀಸ್ ಮಹಿಳೆಯರ ಭರ್ಜರಿ ಆಟಕ್ಕೆ ಇಂಗ್ಲೆಂಡ್ ತಿರುಗೇಟು
Women's Ashes: ಕಾಂಗರೂ ಪಡೆಯನ್ನು 473 ರನ್ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್ ಶುರು ಮಾಡಿದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 218 ರನ್ ಗಳಿಸಿದೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (ENG vs AUS) ಮಹಿಳಾ ತಂಡಗಳ ನಡುವಣ 2023ನೇ ಆವೃತ್ತಿಯ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ (Womens Ashes) ಸರಣಿಯ ಏಕೈಕ ಪಂದ್ಯ ನ್ಯಾಥಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯುತ್ತಿದೆ. ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಮಹಿಳೆಯರು ಮೇಲುಗೈ ಸಾಧಿಸಿದದರೆ ದ್ವಿತೀಯ ದಿನ ಆಂಗ್ಲರು ಯಶಸ್ಸು ಕಂಡರು. ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆಯನ್ನು 473 ರನ್ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್ ಶುರು ಮಾಡಿದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ (England) ಮಹಿಳೆಯರು 2 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿದ್ದು, 255 ರನ್ಗಳ ಹಿನ್ನಡೆಯಲ್ಲಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತ್ತು. ದ್ವಿತೀಯ ದಿನದಾಟ ಆರಂಭಿಸಿದ ಅನ್ನಾಬೆಲ್ ಸುಥರ್ಲೆಂಡ್ ಮತ್ತು ಅಲಾನ ಕಿಂಗ್ ಪೈಕಿ ಕಿಂಗ್ (21) ಹಾಗೂ ಕಿಮ್ ಗ್ರಾಥ್ (22) ಬೇಗನೆ ನಿರ್ಗಮಿಸಿದರು. ಆದರೆ, ಅನ್ನಾಬೆಲ್ ಬೊಂಬಾಟ್ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. 184 ಎಸೆತಗಳಲ್ಲಿ 16 ಫೋರ್, 1 ಸಿಕ್ಸರ್ನೊಂದಿಗೆ ಅನ್ನಾಬೆಲ್ ಅಜೇಯ 137 ರನ್ ಚಚ್ಚಿದರು. ಇತರೆ ಬ್ಯಾಟರ್ಗಳು ಇವರಿಗೆ ಸಾಥ್ ನೀಡದ ಪರಿಣಾಮ ಆಸೀಸ್ 124.2 ಓವರ್ಗಳಲ್ಲಿ 573 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸೂಫಿ ಎಕ್ಸೆಲ್‌ಸ್ಟನ್ 5 ಹಾಗೂ ಲೌರೆನ್ ಫಿಲರ್ 2 ವಿಕೆಟ್ ಪಡೆದರು.
IND vs WI: ಟೆಸ್ಟ್ ತಂಡದಿಂದ ಕೈಬಿಟ್ಟ ಬಳಿಕ ದುಲೀಪ್ ಟ್ರೋಫಿಯತ್ತ ಮುಖಮಾಡಿದ ಪೂಜಾರ
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬೇಗನೆ ಎಮಾ ಲ್ಯಾಂಬ್ (10) ವಿಕೆಟ್ ಕಳೆದುಕೊಂಡಿತು. ಆದರೆ, ದ್ವಿತೀಯ ವಿಕೆಟ್ಗೆ ಟಾಮಿ ಬ್ಯೂಮಂಟ್ ಹಾಗೂ ನಾಯಕಿ ಹೆದರ್ ನೈಟ್ 115 ರನ್ಗಳ ಭರ್ಜರಿ ಜೊತೆಯಾಟ ಆಡಿದರು. ನೈಟ್ 91 ಎಸೆತಗಳಲ್ಲಿ 57 ರನ್ ಸಿಡಿಸಿ ಔಟಾದರು. ಬಳಿಕ ಟಾಮಿ ಜೊತೆಯಾದ ನ್ಯಾಟ್ ಸ್ವೀವರ್-ಬ್ರಂಟ್ ಶತಕದ ಜೊತೆಯಾಟದತ್ತ ಮುನ್ನುಗ್ಗುತ್ತಿದ್ದಾರೆ. ದಿನದಾಟದ ಅಂತ್ಯಕ್ಕೆ ಟಾಮಿ 154 ಎಸೆತಗಳಲ್ಲಿ 100 ರನ್ ಗಳಿಸಿ ಹಾಗೂ ಬ್ರಂಟ್ 41 ರನ್ ಕಲೆಹಾಕಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿದೆ.
ಈ ಪಂದ್ಯದಲ್ಲಿ ಆಸೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಎಲೀಸ್ ಪೆರಿ 99 ರನ್ಗಳಿಗೆ ಔಟ್ ಆಗುವ ಮೂಲಕ 1ರನ್ನಿಂದ ಶತಕ ವಂಚಿತರಾದರು. ಪೋಬ್ 23 ರನ್ಗೆ ಔಟಾದರು. ಎರಡನೇ ವಿಕೆಟ್ಗೆ ಮೂನಿ (33) ಹಾಗೂ ಎಲೀಸ್ ಪೆರಿ 48 ರನ್ ಸೇರಿಸಿದರು. ಮೂರನೇ ವಿಕೆಟ್ಗೆ ಪೆರಿ ಹಾಗೂ ತಹಿಲಾ 129 ರನ್ಗಳ ಜೊತೆಯಾಟ ಆಡಿದರು. ತಹಿಲಾ 83 ಎಸೆತಗಳಲ್ಲಿ 61 ರನ್ ಗಳಿಸಿ ಎಕ್ಸೆಲ್‌ಸ್ಟನ್ ಎಸೆತದಲ್ಲಿ ಬೌಲ್ಡ್ ಆದರು. ಪೆರಿ-ತಹಿಲಾ ನಿರ್ಗಮನದ ಬಳಿಕ ಬಂದ ಜೆಸ್ ಜಾನ್ಸನ್ 11 ರನ್ಗೆ ಔಟಾದರೆ, ನಾಯಕಿ ಅಲಿಸ್ಸಾ ಸೊನ್ನೆ ಸುತ್ತಿದರು. ಆ್ಯಶ್ಲೆಘ್ ಗಾರ್ಡನರ್ 76 ಎಸೆತಗಳಲ್ಲಿ 40 ರನ್ ಕಲೆಹಾಕಿದರು. ಅಂತಿಮವಾಗಿ ಆಸೀಸ್ 473 ರನ್ ಗಳಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ