ಏಕದಿನ ಸರಣಿಯ ನಡುವೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ
Mohit Sharma Retires: ಭಾರತೀಯ ಕ್ರಿಕೆಟಿಗ ಮೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಹಾಗೂ ಐಪಿಎಲ್‌ನಲ್ಲಿ ಹಲವು ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಮೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಈ ನಿರ್ಧಾರ ಪ್ರಕಟಿಸಿದ್ದು, ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ಅವರ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ಏಕದಿನ ಸರಣಿ ನಡೆಯುತ್ತಿರುವ ಮಧ್ಯದಲ್ಲೇ ಟೀಂ ಇಂಡಿಯಾ ವೇಗಿ ಮೋಹಿತ್ ಶರ್ಮಾ (Mohit Sharma) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಾಸ್ತವವಾಗಿ ಮೋಹಿತ್ ಶರ್ಮಾ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿದ್ದವು. ಆದರೆ ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದರು. ಆದರೀಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಜೊತೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಂದರೆ ಮೋಹಿತ್ ಶರ್ಮಾ ಇನ್ನು ಮುಂದೆ ಐಪಿಎಲ್‌ನಲ್ಲೂ ಆಡುವುದಿಲ್ಲ.
ವಾಸ್ತವವಾಗಿ 2026 ರ ಐಪಿಎಲ್ನ ಮಿನಿ ಹರಾಜು ಇದೇ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಆದಾಗ್ಯೂ, ಈ ಹರಾಜಿಗೂ ಮುಂಚೆಯೇ, ಹಲವಾರು ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿಯುವುದರ ಜೊತೆಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಆಯಾ ಫ್ರಾಂಚೈಸಿಗಳಿಂದ ಬಿಡುಗಡೆಯಾದ ಕೆಲವು ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಇದೀಗ ಮೋಹಿತ್ ಶರ್ಮಾ ಐಪಿಎಲ್ ಸೇರಿದಂತೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಟೀಂ ಇಂಡಿಯಾ ಪರ ವಿಶ್ವಕಪ್‌ನಲ್ಲಿ ಆಡಿದ್ದ ಮತ್ತು ವಿವಿಧ ಐಪಿಎಲ್ ಫ್ರಾಂಚೈಸಿಗಳ ಭಾಗವಾಗಿದ್ದ ಮೋಹಿತ್, ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ.
ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಮೋಹಿತ್ ನಿವೃತ್ತಿ
ಹರಿಯಾಣದ ಫರಿದಾಬಾದ್ ಮೂಲದ ಮೋಹಿತ್ ಶರ್ಮಾ, ಡಿಸೆಂಬರ್ 3 ರ ಬುಧವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಮೋಹಿತ್, ‘ಇಂದು, ಭಾರವಾದ ಹೃದಯದಿಂದ, ನಾನು ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಹರಿಯಾಣವನ್ನು ಪ್ರತಿನಿಧಿಸುವುದರಿಂದ ಹಿಡಿದು ಭಾರತೀಯ ಜೆರ್ಸಿಯನ್ನು ಧರಿಸಿ ಐಪಿಎಲ್‌ನಲ್ಲಿ ಆಡುವವರೆಗೆ, ಈ ಪ್ರಯಾಣವು ಒಂದು ಆಶೀರ್ವಾದಕ್ಕಿಂತ ಕಡಿಮೆಯಿಲ್ಲ’ ಎಂದು ಹೇಳಿದ್ದಾರೆ.
View this post on Instagram
37 ವರ್ಷದ ಮೋಹಿತ್ ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತು. ನಂತರ ಹರಾಜಿನಲ್ಲಿ ಪ್ರವೇಶಿಸುವ ಮೂಲಕ ಲೀಗ್‌ಗೆ ಮರಳಲು ಅವರಿಗೆ ಅವಕಾಶವಿದ್ದರೂ, ಮೋಹಿತ್ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ತಮ್ಮ ನಿರ್ಧಾರವನ್ನು ವಿವರಿಸುತ್ತಾ, ಈ ಅವಕಾಶವನ್ನು ನೀಡಿದ್ದಕ್ಕಾಗಿ ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‌ಗೆ ಮೋಹಿತ್ ಕೃತಜ್ಞತೆ ಸಲ್ಲಿಸಿದ್ದಾರೆ. ‘ಬಿಸಿಸಿಐ, ನನ್ನ ತರಬೇತುದಾರರು, ನನ್ನ ತಂಡದ ಸದಸ್ಯರು, ಐಪಿಎಲ್ ಫ್ರಾಂಚೈಸ್, ಸಹಾಯಕ ಸಿಬ್ಬಂದಿ ಮತ್ತು ನನ್ನ ಸ್ನೇಹಿತರಿಗೆ ಅವರ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಮೋಹಿತ್ ಅವರ ವೃತ್ತಿಜೀವನ
ಮೋಹಿತ್ ಅವರ ವೃತ್ತಿಜೀವನವು 2011 ರಲ್ಲಿ ಹರಿಯಾಣ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡುವ ಮೂಲಕ ಪ್ರಾರಂಭವಾಯಿತು. ನಂತರ 2013 ರಲ್ಲಿ ಏಕದಿನ ಸ್ವರೂಪದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೋಹಿತ್, ಧೋನಿ ನಾಯಕತ್ವದಲ್ಲಿ ಸ್ವಲ್ಪ ಸಮಯದವರೆಗೆ ಏಕದಿನ ತಂಡದ ಪ್ರಮುಖ ಭಾಗವಾಗಿದ್ದರು. ಈ ಸಮಯದಲ್ಲಿ, ಅವರು 2015 ರ ವಿಶ್ವಕಪ್‌ನಲ್ಲಿ ಭಾರತೀಯ ಬೌಲಿಂಗ್ ದಾಳಿಯ ಬೆನ್ನೆಲುಬಾಗಿದ್ದರು, ಪಂದ್ಯಾವಳಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು.
ಮೋಹಿತ್ ಟೀಂ ಇಂಡಿಯಾ ಪರ ಒಟ್ಟು 34 ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಮೋಹಿತ್ 44 ಪಂದ್ಯಗಳನ್ನು ಆಡಿದ್ದು, 127 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದೀರ್ಘಕಾಲ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದ ಮೋಹಿತ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪರ 120 ಪಂದ್ಯಗಳನ್ನು ಆಡಿದ್ದು, ಒಟ್ಟು 134 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Wed, 3 December 25
