T20 World Cup: ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಮತ್ತೊಮ್ಮೆ ಸೋಲಿಸುತ್ತೇವೆ ಎಂದ ಪಾಕ್ ತಂಡದ ಚೀಫ್ ಸೆಲೆಕ್ಟರ್
T20 World Cup: ಭಾರತ- ಪಾಕ್ ನಡುವಿನ ಪಂದ್ಯದ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ನಾವು ಬಿಲಿಯನ್ ಡಾಲರ್ ಟೀಮ್ ಇಂಡಿಯಾವನ್ನು ಈ ಹಿಂದೆ ಸೋಲಿಸಿದ್ದೇವೆ. ಕಳೆದ ವರ್ಷವೂ ಅವರು ಟಿ20 ವಿಶ್ವಕಪ್ ಮತ್ತು ನಂತರ ಏಷ್ಯಾಕಪ್‌ನಲ್ಲಿ ಸೋತಿದ್ದಾರೆ.
ಭಾರತ ಮತ್ತು ಪಾಕಿಸ್ತಾನ (India and Pakistan) ಎರಡೂ ದೇಶಗಳು ಈಗಾಗಲೇ ಟಿ20 ವಿಶ್ವಕಪ್‌ಗೆ (T20 World Cup) ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿವೆ. ಅಲ್ಲದೆ ಈ ಎರಡೂ ತಂಡಗಳು ಅಕ್ಟೋಬರ್ 23 ರಂದು ಪರಸ್ಪರ ಅಖಾಡಕ್ಕಿಳಿಯುವ ಮೂಲಕ ತಮ್ಮ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿವೆ. ಆದರೆ ಅದಕ್ಕೂ ಮುನ್ನ ಈ ಎರಡು ತಂಡಗಳ ಅಭಿಮಾನಿಗಳ ಹಾಗೂ ಮಾಜಿ ಕ್ರಿಕೆಟಿಗರ ನಡುವಿನ ಯುದ್ದ ಈಗಾಗಲೇ ಆರಂಭವಾಗಿದೆ. ಅದಕ್ಕೆ ಪೂರಕವೆಂಬಂತೆ ಪಾಕ್ ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಮುಹಮ್ಮದ್ ವಾಸಿಂ, ಟೀಂ ಇಂಡಿಯಾದ ಬಗ್ಗೆ ಕಟುವಾದ ಹೇಳಿಕೆ ನೀಡಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತವನ್ನು ಸೋಲಿಸಲಿದೆ ಎಂದು ಹೇಳುವ ಮೂಲಕ ಮುಹಮ್ಮದ್ ವಾಸಿಂ ಪಂದ್ಯ ಆರಂಭಕ್ಕೂ ಮುನ್ನ ಎರಡು ತಂಡಗಳ ನಡುವಿನ ಕದನಕ್ಕೆ ರೋಚಕತೆ ಹೆಚ್ಚಿಸಿದ್ದಾರೆ.
ಪಾಕಿಸ್ತಾನ ಮತ್ತೊಮ್ಮೆ ಭಾರತವನ್ನು ಸೋಲಿಸಲಿದೆ
ಭಾರತ- ಪಾಕ್ ನಡುವಿನ ಪಂದ್ಯದ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ನಾವು ಬಿಲಿಯನ್ ಡಾಲರ್ ಟೀಮ್ ಇಂಡಿಯಾವನ್ನು ಈ ಹಿಂದೆ ಸೋಲಿಸಿದ್ದೇವೆ. ಕಳೆದ ವರ್ಷವೂ ಅವರು ಟಿ20 ವಿಶ್ವಕಪ್ ಮತ್ತು ನಂತರ ಏಷ್ಯಾಕಪ್‌ನಲ್ಲಿ ಸೋತಿದ್ದಾರೆ. ಹೀಗಾಗಿ ನನಗೆ ನಂಬಿಕೆ ಬಂದಿದೆ. ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡ ನಮಗೆ ಸಂತಸ ನೀಡುತ್ತಿದ್ದು, ವಿಶ್ವಕಪ್‌ನಲ್ಲಿ ಈ ತಂಡ ಇನ್ನಷ್ಟು ಸಂತಸ ನೀಡುವ ನಿರೀಕ್ಷೆ ಇದೆ ಎಂದಿದ್ದಾರೆ. ಜೊತೆಗೆ ಶೋಯೆಬ್ ಮಲಿಕ್‌ಗೆ ಅವಕಾಶ ನೀಡದಿರುವ ಬಗ್ಗೆ ಮಾತನಾಡಿದ ವಾಸಿಂ, ಮುಖ್ಯ ಆಯ್ಕೆದಾರರು ಪರಿಸ್ಥಿತಿಯನ್ನು ಪರಿಗಣಿಸಿ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಂಕಿಅಂಶಗಳನ್ನು ಹೋಲಿಕೆ ಮಾಡಿದರೆ, ಆಸ್ಟ್ರೇಲಿಯಾದಲ್ಲಿ ಯಾರು ಹೆಚ್ಚು ರನ್ ಗಳಿಸುತ್ತಾರೆ ಎಂಬುದು ಆಯ್ಕೆದಾರರಿಗೆ ಅರಿವಿದೆ. ಹೀಗಾಗಿ ಉತ್ತಮ ತಂಡವನ್ನೇ ಆಯ್ಕೆದಾರರು ಪ್ರಕಟಿಸಿದ್ದಾರೆ ಎಂದು ಮುಹಮ್ಮದ್ ವಾಸಿಂ ಹೇಳಿಕೊಂಡಿದ್ದಾರೆ.
ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸೋಲು
ಈ ಹಿಂದೆ ಬಾಬರ್ ಅಜಮ್ ತಂಡವು ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾದ ಎದುರು 23 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಏಷ್ಯಾಕಪ್ 2022 ರಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಗುಂಪು ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಗ್ರೂಪ್ ಹಂತದಲ್ಲಿ ಭಾರತ ಮೊದಲು ಪಾಕಿಸ್ತಾನವನ್ನು ಸೋಲಿಸಿತು. ಇದಾದ ನಂತರ ಸೂಪರ್ 4 ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತು. ಪಾಕಿಸ್ತಾನದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಹೆಚ್ಚಿನ ಆಟಗಾರರು ಏಷ್ಯಾಕಪ್ ತಂಡದಲ್ಲೂ ಇದ್ದರು. ಆದರೆ, ಏಷ್ಯಾಕಪ್‌ನಲ್ಲಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದ ಫಖರ್ ಜಮಾನ್ ಮತ್ತು ಶಹನವಾಜ್ ದಹಾನಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಬದಲಿಗೆ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಶಾನ್ ಮಸೂದ್ಗೆ ಮೊದಲ ಬಾರಿಗೆ ಟಿ20 ತಂಡದಲ್ಲಿ ಅವಕಾಶ ನೀಡಲಾಗಿದೆ.
ಪಾಕಿಸ್ತಾನ ಟಿ20 ವಿಶ್ವಕಪ್ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರಿ ಅಲಿ, ಹ್ಯಾರಿಸ್ ರೌಫ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾ ಅಫ್ರಿದಿ, ನಸೀಮ್ ಶಾ, ಶಾನ್ ಮಸೂದ್, ಉಸ್ಮಾನ್ ಖಾದಿರ್
Published On - 11:52 am, Fri, 16 September 22