
2026ರ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 5ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಉತ್ತರಾಖಂಡದ ಯುವ ಆಟಗಾರ ಲಕ್ಷ್ಯ ರಾಯಚಂದಾನಿ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಸಾಮರ್ಥ್ಯ ಹೊಂದಿರುವ ಯಶೋವರ್ಧನ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಸರಣಿ ಆಡಿದ್ದ ಹಲವು ಆಟಗಾರರಿಗೆ ಏಷ್ಯಾಕಪ್ ತಂಡದಲ್ಲೂ ಅವಕಾಶ ಕಲ್ಪಿಸಲಾಗಿದೆ.
ಲಕ್ಷ್ಯ ರಾಯಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಯಶೋವರ್ಧನ್ ಸಿಂಗ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್, ರಜತ್ ಬಾಘೇಲ್, ವಿ. ಯಶ್ವಿರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯಾ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್.
ಈ ಬಾರಿಯ ಅಂಡರ್-19 ಏಷ್ಯಾಕಪ್ನಲ್ಲಿ ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತಕ್ಕೆ ಯುಎಇ, ನೇಪಾಳ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಲಿವೆ. ಇನ್ನು ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ತಂಡಗಳಿವೆ. ಎರಡೂ ಗುಂಪುಗಳಿಂದ ತಲಾ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ನವೆಂಬರ್ 12ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
ಭಾರತ ಅಂಡರ್-19 ತಂಡ ತನ್ನ ಮೊದಲ ಪಂದ್ಯವನ್ನು ನವೆಂಬರ್ 6ರಂದು ನೇಪಾಳ ವಿರುದ್ಧ ಆಡಲಿದೆ. ಬಳಿಕ ನವೆಂಬರ್ 8ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ನವೆಂಬರ್ 10ರಂದು ಯುಎಇ ವಿರುದ್ಧ ಕೊನೆಯ ಗುಂಪು ಹಂತದ ಪಂದ್ಯ ನಡೆಯಲಿದೆ. ಈ ಮೂರೂ ಪಂದ್ಯಗಳು ಒಮಾನ್ನ ಮಸ್ಕತ್ನಲ್ಲಿ ನಡೆಯಲಿವೆ.
ಅಂಡರ್-19 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್
ಕಳೆದ ಬಾರಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿತ್ತು. ಆ ಮೂಲಕ ಪಾಕಿಸ್ತಾನ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಎದುರಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ.
ಇನ್ನು ಅಂಡರ್-19 ಏಷ್ಯಾಕಪ್ ಇತಿಹಾಸದಲ್ಲಿ ಭಾರತವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಂ ಇಂಡಿಯಾ ಈವರೆಗೆ ಒಟ್ಟು ಎಂಟು ಬಾರಿ ಪ್ರಶಸ್ತಿ ಗೆದ್ದಿದೆ. 1989, 2003, 2012, 2013-14, 2016, 2018, 2019 ಮತ್ತು 2021ರಲ್ಲಿ ಭಾರತ ಚಾಂಪಿಯನ್ ಆಗಿತ್ತು. ಬಾಂಗ್ಲಾದೇಶ ಎರಡು ಬಾರಿ ಹಾಗೂ ಅಫ್ಘಾನಿಸ್ತಾನ ಒಂದು ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಈ ಬಾರಿ ಯುವ ಆಟಗಾರರ ಬಲದೊಂದಿಗೆ ಕಣಕ್ಕಿಳಿಯುತ್ತಿರುವ ಭಾರತ ತಂಡ ಮತ್ತೊಮ್ಮೆ ಏಷ್ಯಾಕಪ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.