ಸಚಿನ್ರಂತೆಯೇ ವೈಭವ್ ಸೂರ್ಯವಂಶಿಗೂ ವಿಶೇಷ ವಿನಾಯಿತಿ ನೀಡಿದ ಬಿಸಿಸಿಐ
BCCI's Special Rule for Vaibhav Sooryavanshi: ಭಾರತ ಟಿ20 ತಂಡಕ್ಕೆ 15ರ ಹರೆಯದಲ್ಲಿ ಆಯ್ಕೆಯಾದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ವೈಭವ್‌ಗೆ ಬಿಸಿಸಿಐ ವಿಶೇಷ ವಿನಾಯಿತಿ ನೀಡಿದೆ. ಮಾನಸಿಕ ಸ್ಥಿರತೆ ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು, ಅವರ ಪೋಷಕರನ್ನು ಜೊತೆ ಕರೆದೊಯ್ಯಲು ಅನುಮತಿ ನೀಡಿದ್ದು, ಬಿಸಿಸಿಐ ವೆಚ್ಚ ಭರಿಸಲಿದೆ.

ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಮತ್ತು ಏಷ್ಯನ್ ಗೇಮ್ಸ್ಗೆ ಬಿಸಿಸಿಐ (BCCI) ಇಂದು ಭಾರತ ಟಿ20 ತಂಡವನ್ನು ಪ್ರಕಟಿಸಿತು. ಬಿಸಿಸಿಐ ಪ್ರಕಟಿಸಿರುವ ಈ 16 ಸದಸ್ಯರ ತಂಡದಲ್ಲಿ ಅನುಭವಿಗಳು ಹಾಗೂ ಅನಾನುಭವಿಗಳ ಸಮ್ಮಿಶ್ರಣವಿದೆ. ಐಪಿಎಲ್‌ನಲ್ಲಿ ಮಿಂಚು ಹರಿಸಿದ ಪ್ರತಿಭಾನ್ವೀತರಿಗೆ ಈ ಪ್ರವಾಸದಲ್ಲಿ ಅವಕಾಶ ನೀಡಲಾಗಿದೆ. ಈ ರೀತಿಯಾಗಿ ತನ್ನ ಅಮೋಘ ಪ್ರದರ್ಶನದ ಮೂಲಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್ ಸೂರ್ಯವಂಶಿ (Vaibhav Sooryavanshi ) ಕೂಡ ತಂಡದೊಂದಿಗೆ ವಿದೇಶಕ್ಕೆ ಹಾರಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ವೈಭವ್ ಸೂರ್ಯವಂಶಿಗೆ ಇದೀಗ ಬಿಸಿಸಿಐ ಕೂಡ ವಿಶೇಷ ವಿನಾಯಿತಿಯೊಂದನ್ನು ನೀಡಿದ್ದು, ವಿದೇಶಕ್ಕೆ ಹಾರಲು ಸಜ್ಜಾಗಿರುವ ವೈಭವ್ ತನ್ನೊಂದಿಗೆ ತನ್ನ ಪೋಷಕರನ್ನು ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿದೆ.
ಸಚಿನ್ ದಾಖಲೆ ಮುರಿದ ವೈಭವ್
ವೈಭವ್ ಸೂರ್ಯವಂಶಿ ಕೇವಲ 15ನೇ ವರ್ಷಕ್ಕೆ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 16 ವರ್ಷಕ್ಕೆ ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಸಚಿನ್ ದಾಖಲೆಯನ್ನು ಮುರಿದಿರುವ ವೈಭವ್‌ಗೆ ಬಿಸಿಸಿಐ, ಸಚಿನ್ಗೆ ನೀಡಿದ್ದ ವಿಶೇಷ ವಿನಾಯಿತಿಯನ್ನು ವೈಭವ್ಗೂ ನೀಡಿದೆ.
ವೈಭವ್‌ಗೆ ವಿಶೇಷ ವಿನಾಯಿತಿ
ಅತಿ ಕಿರಿಯ ವಯಸ್ಸಿಗೆ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್‌ಗೆ ಹಠಾತ್ ಜನಪ್ರಿಯತೆ, ಮಾಧ್ಯಮ ಗಮನ ಮತ್ತು ಅಪಾರ ಒತ್ತಡವನ್ನು ನಿಭಾಯಿಸುವುದು ಮಾನಸಿಕವಾಗಿ ಸವಾಲಿನ ಸಂಗತಿಯಾಗಿದೆ. ಹೀಗಾಗಿ ಇದನ್ನು ಮುಂಗಡವಾಗಿಯೇ ಯೋಚಿಸಿರುವ ಬಿಸಿಸಿಐ, ವೈಭವ್ ತಮ್ಮ ಪೋಷಕರನ್ನು ತಮ್ಮ ಜೊತೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ಗೆ ಕರೆದುಕೊಂಡು ಹೋಗಲು ಅನುಮತಿ ನೀಡಿದೆ. ಈ ವಿದೇಶ ಪ್ರವಾಸದಲ್ಲಿ ಅವರ ಪೋಷಕರ ಉಪಸ್ಥಿತಿಯು ವೈಭವ್‌ಗೆ ಮನೆಯ ವಾತಾವರಣವನ್ನು ಸೃಷ್ಟಿಸುವುದಲ್ಲದೆ, ಒಂಟಿತನ ಕಾಡುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಲ್ಲದೆ ವಿದೇಶದಲ್ಲಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಕೂಡ ಮಾಡುತ್ತದೆ.
ವೆಚ್ಚ ಬರಿಸಲಿದೆ ಬಿಸಿಸಿಐ
ವಾಸ್ತವವಾಗಿ ಮೇಲೆ ಹೇಳಿದಂತೆ ಸಚಿನ್ ತೆಂಡೂಲ್ಕರ್ ಅವರಿಗೂ ಬಿಸಿಸಿಐ ಈ ರೀತಿಯ ವ್ಯವಸ್ಥೆ ಮಾಡಿತ್ತು. 1989 ರಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ವಿದೇಶಿ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದಾಗ, ಸಚಿನ್ ಅವರೊಂದಿಗೆ ಹಿರಿಯ ಸಹೋದರ ಅಜಿತ್ ಕೂಡ ಅವರೊಂದಿಗೆ ಇದ್ದರು. ಆ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೇವಲ 16 ವರ್ಷ ವಯಸ್ಸಿನವರಾಗಿದ್ದರು. ಈ ಬಗ್ಗೆ ಸ್ಪೋರ್ಟ್ಸ್‌ಸ್ಟಾರ್ ಜೊತೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ಅವನು ಇನ್ನೂ ಮಗು, ಆದ್ದರಿಂದ ಅವನ ಹೆತ್ತವರು ಅವನೊಂದಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅವಕಾಶ ನೀಡಲು ನಾವು ನಿರ್ಧರಿಸಿದ್ದೇವೆ. ಇದರಿಂದ ಅವರು ಅವನೊಂದಿಗೆ ಇರಲು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಬಹುದು. ಮಂಡಳಿಯು ಅವರ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ’ ಎಂದಿದ್ದಾರೆ.
ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿದ ಭಾರತ ಎ ತಂಡ; ವೈಭವ್ ಹಿಂದೆ ಬಿದ್ದ ಫ್ಯಾನ್ಸ್
ಬಿಸಿಸಿಐ ನಿಯಮ ಏನು ಹೇಳುತ್ತದೆ?
ವೈಭವ್ ಚಿಕ್ಕವನಾಗಿರುವ ಕಾರಣ ಬಿಸಿಸಿಐ ಈ ವಿಶೇಷ ವಿನಾಯಿತಿ ನೀಡಿದೆ. ವೈಭವ್ ಹೊರತುಪಡಿಸಿ ಬೇರೆ ಯಾವ ಆಟಗಾರನಿಗೂ ಈ ಸೌಕರ್ಯ ಇರುವುದಿಲ್ಲ. ಇದಕ್ಕಾಗಿಯೇ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಭಾರತ ತಂಡ ವಿದೇಶಿ ಪ್ರವಾಸಗಳಿಗೆ ತೆರಳಿದಾಗ ಆಟಗಾರರು ತಮ್ಮ ಕುಟುಂಬಸ್ಥರು ಅಥವಾ ಸಂಗಾತಿಗಳನ್ನು ಇಡೀ ಪ್ರವಾಸದ ಉದ್ದಕ್ಕೂ ತಮ್ಮೊಂದಿಗೆ ಇರಿಸಿಕೊಳ್ಳಲು ಸಾಧ್ಯವಿಲ್ಲ. ಸರಣಿ ಅಥವಾ ಪಂದ್ಯಾವಳಿ 45 ದಿನಗಳಿಗಿಂತ ಹೆಚ್ಚು ಕಾಲ ನಡೆದರೆ, ಕುಟುಂಬ ಸದಸ್ಯರು ಆಟಗಾರನೊಂದಿಗೆ 14 ದಿನಗಳವರೆಗೆ ಮಾತ್ರ ಇರಬಹುದಾಗಿದೆ. ಆದಾಗ್ಯೂ, ವೈಭವ್ ಸೂರ್ಯವಂಶಿಗೆ, ಬಿಸಿಸಿಐ ನಿಯಮಗಳನ್ನು ಸಡಿಲಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Sat, 6 June 26




