15 ಸಿಕ್ಸರ್, 28 ಎಸೆತಗಳಲ್ಲೇ ಶತಕ: ವೈಭವ್ ಅಬ್ಬರಕ್ಕೆ ಕ್ರಿಕೆಟ್ ಜಗತ್ತು ಬೆರಗು

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ರಲ್ಲಿ ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ ವೇಗದ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ 15 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದ ವೈಭವ್ ಸೂರ್ಯವಂಶಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ . ಹಾಗೆಯೇ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮಗಾರ್ಕ್ ಅವರ ದಾಖಲೆಯನ್ನು ಮುರಿದಿದ್ದಾರೆ.

15 ಸಿಕ್ಸರ್, 28 ಎಸೆತಗಳಲ್ಲೇ ಶತಕ: ವೈಭವ್ ಅಬ್ಬರಕ್ಕೆ ಕ್ರಿಕೆಟ್ ಜಗತ್ತು ಬೆರಗು
Vaibhav Sooryavanshi

Updated on: Nov 24, 2026 | 5:06 PM

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಇಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿದ ಭಾರತ ಎ ತಂಡ, ಯುಎಇ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ಎ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕವೂ ತಮ್ಮ ಹೊಡಿಬಡಿ ಆಟ ಮುಂದುವರೆಸಿದ ವೈಭವ್ 28 ಎಸೆತಗಳಲ್ಲಿ 15 ಸಿಕ್ಸರ್​ಗಳ ಸಹಿತ  ಶತಕ ಪೂರೈಸಿದರು. ಇದರೊಂದಿಗೆ, ವೈಭವ್ ಸೂರ್ಯವಂಶಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ . ಹಾಗೆಯೇ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮಗಾರ್ಕ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದವರ ಪಟ್ಟಿ

  • ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ
  • ಜೇಕ್ ಫ್ರೇಸರ್ ಮ್ಯಾಕ್‌ಗುರ್ಕ್: ಟ್ಯಾಸ್ಮೇನಿಯಾ ವಿರುದ್ಧ 29 ಎಸೆತಗಳಲ್ಲಿ ಶತಕ
  • ಎಬಿ ಡಿವಿಲಿಯರ್ಸ್: ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ
  • ಸಾಕಿಬ್ ಗನಿ: ಅರುಣಾಚಲ ಪ್ರದೇಶ ವಿರುದ್ಧ 32 ಎಸೆತಗಳಲ್ಲಿ ಶತಕ
  • ಇಶಾನ್ ಕಿಶನ್: ಕರ್ನಾಟಕ ವಿರುದ್ಧ 33 ಎಸೆತಗಳಲ್ಲಿ ಶತಕ

ಸಿಕ್ಸರ್‌ಗಳ ಸುರಿಮಳೆಗೈದು ವಿಶ್ವದಾಖಲೆ ಬರೆದ ವೈಭವ್

ವೈಭವ್ ಸೂರ್ಯವಂಶಿ ತಮ್ಮ ಇನ್ನಿಂಗ್ಸ್‌ನ ಮೊದಲ ಎರಡು ಎಸೆತಗಳಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಆ ಬಳಿಕ ಶುರುವಾದ ಅವರ ಅಬ್ಬರಕ್ಕೆ ಯುಎಇ ಬೌಲರ್‌ಗಳು ತತ್ತರಿಸಿದರು. ಜಾಹಿದ್ ಅಲಿ ಎಸೆದ ಓವರ್‌ನಲ್ಲಿ ಸತತ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಮುಂದಿನ ಓವರ್‌ನಲ್ಲೂ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. ಮೂರನೇ ಓವರ್‌ನಲ್ಲಿ ಮತ್ತೆರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Loading...

ಇದಾದ ಬಳಿಕ ಸಿಮರ್‌ಜೀತ್ ಸಿಂಗ್ ಬೌಲಿಂಗ್‌ನಲ್ಲೂ ಮೂರು ಸಿಕ್ಸರ್‌ಗಳನ್ನು ಸಿಡಿಸಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದರು. ಐದನೇ ಓವರ್ ಮುಗಿಯುವಷ್ಟರಲ್ಲಿ ಭಾರತ ಎ ತಂಡದ ಮೊತ್ತ 100ರ ಗಡಿ ದಾಟಿತ್ತು. ಅಲ್ಲಿಗೆ ನಿಲ್ಲದ ವೈಭವ್, ಮುಂದಿನ ಆರು ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿ ಶತಕದ ಗಡಿ ತಲುಪಿದರು. ಸಿಕ್ಸರ್‌ಗಳ ಸುರಿಮಳೆಗೈದ ಅವರು ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಒಟ್ಟು 15 ಸಿಕ್ಸರ್‌ಗಳನ್ನು ಸಿಡಿಸಿದರು.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ವೈಭವ್ ಸೂರ್ಯವಂಶಿ

ಕೇವಲ 40 ಎಸೆತಗಳಲ್ಲಿ 150 ರನ್

ವೈಭವ್ ಸೂರ್ಯವಂಶಿ ಕೇವಲ ಶತಕ ಬಾರಿಸಿ ಸುಮ್ಮನಾಗಲಿಲ್ಲ. ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಮತ್ತೊಂದು ವಿಶ್ವದಾಖಲೆಯನ್ನೂ ನಿರ್ಮಿಸಿದರು. ಶತಕದ ಬಳಿಕ ಕೇವಲ 12 ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ 150 ರನ್‌ಗಳ ಗಡಿ ತಲುಪಿದರು. ಈ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 40 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್, 20 ಸಿಕ್ಸರ್‌ಗಳ ನೆರವಿನಿಂದ ಈ ಸಾಧನೆ ಮಾಡಿದರು. ಇದಕ್ಕೂ ಮೊದಲು 2025ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ 59 ಎಸೆತಗಳಲ್ಲಿ 150 ರನ್ ಗಳಿಸಿದ್ದು ಅವರದೇ ದಾಖಲೆಯಾಗಿತ್ತು. ಇದೀಗ ತಮ್ಮ ಹಿಂದಿನ ದಾಖಲೆಯನ್ನೇ ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Tue, 24 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us