
ಇಂಗ್ಲೆಂಡ್ ಅಂಡರ್ 19 (England U19) ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi) ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಏಕದಿನ ಸರಣಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ವೈಭವ್, ಮೊದಲ ಯುವ ಟೆಸ್ಟ್ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ವೈಭವ್ ಸೂರ್ಯವಂಶಿ ಅವರ ಮೋಡಿ ಎಷ್ಟಿದೆಯೆಂದರೆ ಇಂಗ್ಲೆಂಡ್ನಲ್ಲಿಯೂ ಜನರು ಅವರು ಆಟೋಗ್ರಾಫ್ ಪಡೆಯಲು ಮುಗಿಬೀಳುತ್ತಿದ್ದಾರೆ. ವೈಭವ್ ಸೂರ್ಯವಂಶಿ ಪಡೆಯುತ್ತಿರುವ ಈ ಜನಪ್ರಿಯತೆಯ ನಡುವೆ, ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬ ಎಚ್ಚರಿಕೆಯನ್ನು ಸಹ ಪಡೆಯುತ್ತಿದ್ದಾರೆ. ಅಭಿಮಾನಿಗಳು ಪೃಥ್ವಿ ಶಾರನ್ನು ಉದಾಹರಣೆ ನೀಡುವ ಮೂಲಕ ವೈಭವ್ಗೆ ಬುದ್ಧಿವಾದ ಹೇಳಲಾರಂಭಿಸಿದ್ದಾರೆ.
ವಾಸ್ತವವಾಗಿ ವೈಭವ್ ಸೂರ್ಯವಂಶಿ ಇಂಗ್ಲೆಂಡ್ನಲ್ಲಿ ಮಕ್ಕಳಿಗೆ ಆಟೋಗ್ರಾಫ್ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅವರ ಜನಪ್ರಿಯತೆಯಿಂದ ಅನೇಕ ಅಭಿಮಾನಿಗಳು ಸಂತೋಷಪಟ್ಟಿದ್ದರೆ, ಇನ್ನು ಕೆಲವರು ವೈಭವ್ಗೆ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಯೊಬ್ಬರು, ‘ನಿಮ್ಮ ಗಮನವನ್ನು ಆಟದ ಮೇಲೆ ಇರಿಸಿ, ಇಲ್ಲದಿದ್ದರೆ ಭಾರತವು ಪೃಥ್ವಿ ಶಾ ಅವರನ್ನು ಸಹ ನೋಡಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ವೈಭವ್, ಯೂತ್ ಏಕದಿನ ಸರಣಿಯಲ್ಲಿ ಮತ್ತು ಈಗ ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಸರಣಿಯಲ್ಲಿ 355 ರನ್ ಬಾರಿಸಿದ್ದ ವೈಭವ್, ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಸರಣಿಯಲ್ಲಿ ಅವರು 71 ರ ಸರಾಸರಿ ಮತ್ತು 174 ರ ಸ್ಟ್ರೈಕ್ ರೇಟ್ನಲ್ಲಿ 29 ಸಿಕ್ಸರ್ಗಳ ಸಹಿತ ವೈಭವ್ ಒಂದು ಶತಕ ಮತ್ತು ಅರ್ಧಶತಕವನ್ನು ಸಹ ಬಾರಿಸಿದ್ದರು.
ಯೂತ್ ಟೆಸ್ಟ್ ಬಗ್ಗೆ ಹೇಳುವುದಾದರೆ, ವೈಭವ್ ಸೂರ್ಯವಂಶಿ ಇದರಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಡಗೈ ಬ್ಯಾಟ್ಸ್ಮನ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 14 ರನ್ ಮಾತ್ರ ಕಲೆಹಾಕಿದರಾದರೂ ಎರಡನೇ ಇನ್ನಿಂಗ್ಸ್ನಲ್ಲಿ 56 ರನ್ ಬಾರಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ