‘ಲಿಟ್ಟಿ ಚೋಖಾ’ವನ್ನು ದೂರವಿಟ್ಟ ವೈಭವ್ ಸೂರ್ಯವಂಶಿ
Vaibhav Suryavanshi: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ ಸ್ಪೋಟಕ ಸೆಂಚುರಿ ಸಿಡಿಸಿದ್ದರು. ಅದು ಕೂಡ ಕೇವಲ 35 ಎಸೆತಗಳಲ್ಲಿ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ದಾಂಡಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನ ಚೊಚ್ಚಲ ಸೀಸನ್ನಲ್ಲೇ ಸ್ಫೋಟಕ ಶತಕ ಸಿಡಿಸಿ ಬಾಸ್ ಬೇಬಿ ಎಂದು ಬಿರುದು ಪಡೆದಿರುವ ವೈಭವ್ ಸೂರ್ಯವಂಶಿ ತಮ್ಮ ಫಿಟ್ನೆಸ್ ಸುಧಾರಿಸಿಕೊಳ್ಳಲು ದೊಡ್ಡ ತ್ಯಾಗ ಮಾಡಿದ್ದಾರೆ. ಅದು ಕೂಡ ತನ್ನ ನೆಚ್ಚಿನ ಖಾದ್ಯವನ್ನು ತ್ಯಜಿಸುವ ಮೂಲಕ. ಅಂದರೆ ಟೀಮ್ ಇಂಡಿಯಾ ಪರ ಆಡುವ ಕನಸು ಕಟ್ಟಿಕೊಂಡಿರುವ ವೈಭವ್ ಇದೀಗ ಫಿಟ್ನೆಸ್ನತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ದೈನಿಕ್ ಜಾಗರಣ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ, ವೃತ್ತಿಪರ ಕ್ರಿಕೆಟ್‌ಗಾಗಿ ಹೆಚ್ಚುವರಿ ಕೆಜಿ ತೂಕ ಇಳಿಸಿಕೊಳ್ಳಲು ಮತ್ತು ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿರಲು ವೈಭವ್ ನಿರ್ಧರಿಸಿದ್ದಾರೆ. ಇದಕ್ಕಾಗಿ ತನ್ನ ನೆಚ್ಚಿನ ಆಹಾರಗಳಿಂದಲೂ ದೂರವಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರ ನೆಚ್ಚಿನ ಖಾದ್ಯವಾದ ಲಿಟ್ಟಿ ಚೋಖಾ ತಿನ್ನುತ್ತಿಲ್ಲವೇ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸಂಜೀವ್, ಇಲ್ಲ, ಅವರು ಇನ್ನು ಮುಂದೆ ಲಿಟ್ಟಿ ಚೋಖಾ ಕೂಡ ತಿನ್ನುವುದಿಲ್ಲ. ಈಗ ಅವರು ತುಂಬಾ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಅವರು ಜಿಮ್‌ಗೆ ಹೋಗುತ್ತಿದ್ದಾರೆ. ಈ ಹಿಂದೆ ಹೆಚ್ಚಿನ ತೂಕ ಹೊಂದಿದ್ದರು. ಇದೀಗ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಬೇಕಾಗಿದೆ ಎಂದರು.
ಹೀಗಾಗಿ ಮುಂಬರುವ ದಿನಗಳಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಫಿಟ್ನೆಸ್ ಫ್ರೀಕ್ ಆಗಿ ಮಾರ್ಪಾಡುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್ ಮೂಲಕ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿರುವ ವೈಭವ್ಗೆ ಮುಂದಿನ ಸೀಸನ್ನಲ್ಲೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಅವಕಾಶ ಕೊಡುವುದು ಖಚಿತ.
ಒಂದು ವೇಳೆ ಅವರು ಮಿನಿ ಹರಾಜಿನಲ್ಲಿ ಕಾಣಿಸಿಕೊಂಡರೆ, 9 ಫ್ರಾಂಚೈಸಿಗಳು ಯುವ ಆಟಗಾರನಿಗಾಗಿ ಬಿಡ್ ಮಾಡಲು ಮುಂದಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಇನ್ನೂ ಹದಿಹರೆಯದ ಯುವ ದಾಂಡಿಗ ಐಪಿಎಲ್ನಲ್ಲಿ ವಿಶ್ವದ ಪ್ರಮುಖ ಬೌಲರ್ಗಳ ಬೆಂಡೆತ್ತಿದ್ದಾರೆ. ಇದೇ ಫಾರ್ಮ್ ಮುಂದುವರೆಸಿದರೆ, ವೈಭವ್ ಸೂರ್ಯವಂಶಿ ಐಪಿಎಲ್ನ ಹೊಸ ಸೆನ್ಸೇಷನ್ ಆಗುವುದರಲ್ಲಿ ಡೌಟೇ ಇಲ್ಲ.
ಇವೆಲ್ಲವನ್ನೂ ಮನಗಂಡಿರುವ ವೈಭವ್ ಇದೀಗ ಫಿಟ್ನೆಸ್ನತ್ತ ಗಮನಹರಿಸಲು ನಿರ್ಧರಿಸಲು, ಈ ಮೂಲಕ ಆದಷ್ಟು ಬೇಗ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಏನಿದು ಲಿಟ್ಟಿ ಚೋಖಾ?
ಲಿಟ್ಟಿ ಚೋಖಾ ಬಿಹಾರಿನ ಒಂದು ಪ್ರಸಿದ್ಧ ಆಹಾರವಾಗಿದೆ. ಲಿಟ್ಟಿ ಎಂಬುದು ಗೋಧಿ ಹಿಟ್ಟಿನಿಂದ ಮಾಡಿದ ಚೆಂಡು, ಇದನ್ನು ಸಟ್ಟು (ಹುರಿದ ಕಡಲೆ ಹಿಟ್ಟು) ಮತ್ತು ಮಸಾಲೆಗಳಿಂದ ತುಂಬಿಸಲಾಗುತ್ತದೆ. ಚೋಖಾ ಎಂದರೆ ಹುರಿದ ಬದನೆಕಾಯಿ, ಟೊಮೆಟೊ ಮತ್ತು ಆಲೂಗಡ್ಡೆಯಿಂದ ತಯಾರಿಸಿದ ಮಿಶ್ರಣ. ಲಿಟ್ಟಿಯನ್ನು ಸಾಮಾನ್ಯವಾಗಿ ತುಪ್ಪದೊಂದಿಗೆ ಬಡಿಸಲಾಗುತ್ತದೆ. ಇದಕ್ಕೆ ಕಾಂಬಿನೇಷನ್ ಆಗಿ ಚೋಖಾವನ್ನು ಸವಿಯಲಾಗುತ್ತದೆ.
ಇದನ್ನೂ ಓದಿ: ಇಷ್ಟೇನಾ… ನೇಪಾಳ ಆಟಗಾರರು ಪಂದ್ಯವೊಂದಕ್ಕೆ ಪಡೆಯುವ ವೇತನ..!
ಈ ಆಹಾರವು ವೈಭವ್ ಸೂರ್ಯವಂಶಿ ಅವರ ಫೇವರೇಟ್ ಫುಡ್ ಆಗಿತ್ತು. ಇದೀಗ ಫಿಟ್ನೆಸ್ ಕಾಪಾಡಿಕೊಳ್ಳಲು ಯುವ ದಾಂಡಿಗ ಲಿಟ್ಟಿ ಚೋಖಾ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.