Vijay Merchant Trophy: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪಂದ್ಯ: ಕೇವಲ 6 ರನ್ಗೆ ಆಲೌಟ್
Vijay Merchant Trophy 2022: ಈ ಹೀನಾಯ ಸೋಲಿನೊಂದಿಗೆ ಸಿಕ್ಕಿಂ ತಂಡವು ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಅತೀ ಕಡಿಮೆ ರನ್ಗೆ ಆಲೌಟ್ ಆದ ತಂಡ ಎನಿಸಿಕೊಂಡಿದೆ.

Vijay Merchant Trophy: ಒಂದು ಕ್ರಿಕೆಟ್ ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಹನ್ನೊಂದು ಆಟಗಾರರು ಒಂದೊಂದು ರನ್ ಕಲೆಹಾಕಿದರೂ ಎರಡಂಕಿ ಮೊತ್ತವಾಗುತ್ತೆ. ಆದರೆ ಇಲ್ಲೊಂದು ತಂಡ ಕೇವಲ 6 ರನ್ಗೆ ಆಲೌಟ್ ಆಗಿ ಅಚ್ಚರಿ ಮೂಡಿಸಿದೆ. ಅದು ಕೂಡ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಎಂಬುದು ವಿಶೇಷ. ಹೌದು, ದೇಶೀಯ ಅಂಗಳದಲ್ಲಿ ನಡೆಯುತ್ತಿರುವ ಅಂಡರ್-16 ವಿಜಯ್ ಮರ್ಚೆಂಟ್ ಟ್ರೋಫಿಯ ಪಂದ್ಯದಲ್ಲಿ ಸಿಕ್ಕಿಂ ತಂಡವು ಕೇವಲ 6 ರನ್‌ಗಳಿಗೆ ಆಲೌಟ್ ಆಗಿದೆ.
ಖೋಲ್ವಾಡ್ ಜಿಮ್ಖಾನಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಧ್ಯಪ್ರದೇಶ ಹಾಗೂ ಸಿಕ್ಕಿಂ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ ತಂಡ 8 ವಿಕೆಟ್ ನಷ್ಟಕ್ಕೆ 414 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಸಿಕ್ಕಿಂ ಬ್ಯಾಟ್ಸ್‌ಮನ್‌ಗಳು ಕೇವಲ 43 ರನ್‌ಗಳಿಗೆ ಆಲೌಟ್ ಆದರು. ಹೀಗಾಗಿ ಫಾಲೋಆನ್ ಹೇರಿದ ಮಧ್ಯಪ್ರದೇಶ ತಂಡವು ಸಿಕ್ಕಿಂ ಅನ್ನು 2ನೇ ಇನಿಂಗ್ಸ್ ಬ್ಯಾಟಿಂಗ್ಗೆ ಆಹ್ವಾನಿಸಿತು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಸಿಕ್ಕಿಂ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿದರು. ಮಧ್ಯಪ್ರದೇಶ ಪರ ಕರಾರುವಾಕ್ ದಾಳಿ ಸಂಘಟಿಸಿದ ಗಿರಿರಾಜ್ ಶರ್ಮಾ ಹಾಗೂ ಅಲಿಫ್ ಹಸನ್ 8 ಬ್ಯಾಟ್ಸ್ಮನ್ಗಳನ್ನು ಶೂನ್ಯಕ್ಕೆ ಔಟ್ ಮಾಡಿದರು. ಪರಿಣಾಮ ಕೇವಲ 6 ರನ್‌ಗಳಿಗೆ ಸಿಕ್ಕಿಂ ತಂಡವು ಸರ್ವಪತನ ಕಂಡಿತು.
ಇದರೊಂದಿಗೆ ಮಧ್ಯಪ್ರದೇಶ ತಂಡವು ಇನಿಂಗ್ಸ್ ಹಾಗೂ 365 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಮಧ್ಯಪ್ರದೇಶ ಪರ 2ನೇ ಇನಿಂಗ್ಸ್ನಲ್ಲಿ ಗಿರಿರಾಜ್ ಶರ್ಮಾ ಕೇವಲ 1 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಅಲಿಫ್ ಹಸನ್ 5 ರನ್ಗೆ 4 ವಿಕೆಟ್ ಉರುಳಿಸಿ ಮಿಂಚಿದ್ದರು.
ಅತ್ಯಂತ ಹೀನಾಯ ದಾಖಲೆ:
ಈ ಹೀನಾಯ ಸೋಲಿನೊಂದಿಗೆ ಸಿಕ್ಕಿಂ ತಂಡವು ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಅತೀ ಕಡಿಮೆ ರನ್ಗೆ ಆಲೌಟ್ ಆದ ತಂಡ ಎನಿಸಿಕೊಂಡಿದೆ. ಈ ಮೂಲಕ ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
8 ರನ್ಗೂ ಆಲೌಟ್ ಆಗಿತ್ತು..!
2022ರಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳದ ಮಹಿಳಾ ತಂಡ ಕೇವಲ 8 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೀನಾಯವಾಗಿ ಆಲೌಟ್ ಆದ ಟೀಮ್ ಎಂಬ ಕೆಟ್ಟ ದಾಖಲೆಯನ್ನು ನೇಪಾಳ ತಂಡ ಹೊಂದಿದೆ.
Published On - 7:30 pm, Sun, 25 December 22




