ಆಫ್ರಿಕಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ ಗುರ್ಬಾಝ್ಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ
Virat Kohli Gifts Bats to Gurbaz: ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಗುರ್ಬಾಜ್ ಅವರ ಅದ್ಭುತ ಪ್ರದರ್ಶನಕ್ಕೆ ಮನಸೋತ ವಿರಾಟ್ ಕೊಹ್ಲಿ, ಎರಡು ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಯುವ ಆಟಗಾರರನ್ನು ಪ್ರೋತ್ಸಾಹಿಸುವ ಕೊಹ್ಲಿಯ ಈ ನಡೆ, ಗುರ್ಬಾಜ್‌ಗೆ ಮಾತ್ರವಲ್ಲದೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗುರ್ಬಾಜ್ 84 ರನ್ ಗಳಿಸಿ ಮಿಂಚಿದ್ದರು.

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್ನ ಕಿಂಗ್ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಕ್ರಿಕೆಟ್ನಿಂದ ದೂರ ಉಳಿದಿರಬಹುದು. ಆದರೆ ಯುವ ಆಟಗಾರರನ್ನು ಸದಾ ಬೆನ್ತಟ್ಟುವ ಕೆಲಸವನ್ನು ಕೊಹ್ಲಿ ಎಂದಿಗೂ ಮರೆತಿಲ್ಲ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲೂ (T20 World Cup) ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಕೆಚ್ಚೆದೆಯ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್‌ಗೆ (Rahmanullah Gurbaz) ವಿರಾಟ್ ಕೊಹ್ಲಿ ಸ್ಮರಣೀಯ ಉಡುಗೊರೆ ನೀಡಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್, ಅಫ್ಘನ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆದರೆ ಅವರ ಆಟಕ್ಕೆ ಮನಸೋತಿರುವ ಕೊಹ್ಲಿ, ಎರಡು ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬ್ಯಾಟ್ ಉಡುಗೊರೆ ನೀಡಿದ ಕೊಹ್ಲಿ
ವಿರಾಟ್ ಕೊಹ್ಲಿ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ರಹಮಾನಲ್ಲಾ ಗುರ್ಬಾಜ್, ‘ಅತ್ಯಂತ ಅದ್ಭುತ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ ಅವರಿಗೆ ಧನ್ಯವಾದಗಳು. ನೀವು ಕೇವಲ ದಂತಕಥೆಯಲ್ಲ, ನೀವು ಎಲ್ಲಾ ಪೀಳಿಗೆಗೂ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ.
View this post on Instagram
ವಾಸ್ತವವಾಗಿ ವಿರಾಟ್ ಕೊಹ್ಲಿ ಯುವ ಪ್ರತಿಭಾವಂತ ಆಟಗಾರರಿಗೆ ಈ ರೀತಿಯಾಗಿ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ನಿಂದ ಹಿಡಿದು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಭಾರತದ ರಿಂಕು ಸಿಂಗ್ ಸೇರಿದಂತೆ ವಿಶ್ವದಾದ್ಯಂತದ ಆಟಗಾರರಿಗೆ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ಗುರ್ಬಾಜ್
ಅಹಮದಾಬಾದ್‌ನಲ್ಲಿ ಫೆಬ್ರವರಿ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್ ಕೇವಲ 42 ಎಸೆತಗಳಲ್ಲಿ 84 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ನೀಡಿದ 187 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಗುರ್ಬಾಜ್ ತಮ್ಮ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಎರಡೆರಡು ಸೂಪರ್ ಓವರ್ಗಳ ಬಳಿಕ ವಿಜೇತರನ್ನು ಪಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಆದಾಗ್ಯೂ ಎರಡನೇ ಸೂಪರ್ ಓಬರ್ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ 23 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘನ್ ಪರ ಗುರ್ಬಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡದ ಗೆಲುವಿಗಾಗಿ ಹೋರಾಡಿದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸುವುದರೊಂದಿಗೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ವಿಫಲರಾಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sat, 14 February 26
