IPL 2026 Final: ಆರ್ಸಿಬಿಗೆ 5ನೇ ಫೈನಲ್; ಕಳೆದ 4 ಫೈನಲ್‌ಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿತ್ತು?
IPL 2026 Final: ಹಾಲಿ ಚಾಂಪಿಯನ್ ಆರ್‌ಸಿಬಿ ಐಪಿಎಲ್ 2026 ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಎದುರಿಸಲಿದೆ. ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನಿರ್ಣಾಯಕ. ಇದು ಕೊಹ್ಲಿಯ ಐದನೇ ಫೈನಲ್. ಕಳೆದ ನಾಲ್ಕು ಫೈನಲ್‌ಗಳಲ್ಲಿ 140 ರನ್ ಗಳಿಸಿದ್ದರೂ, ಪ್ರಸ್ತುತ ಸೀಸನ್‌ನಲ್ಲಿ 600 ರನ್ ಗಳಿಸಿ ಮಿಂಚಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯುವ ಈ ಪಂದ್ಯದಲ್ಲಿ ಕೊಹ್ಲಿಯ ಪ್ರದರ್ಶನ RCB ಗೆಲುವಿಗೆ ಮುಖ್ಯ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಹಾದಿಯಲ್ಲಿದೆ. ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಬೇಕೆಂದರೆ ತಂಡದಿಂದ ಸಾಂಘಿಕ ಪ್ರದರ್ಶನ ಮೂಡಿಬರಬೇಕು. ಅದರಲ್ಲೂ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ (Virat Kohli) ಈ ನಿರ್ಣಾಯಕ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡಲೇಬೇಕಿದೆ.
ಕೊಹ್ಲಿಗೆ ಐದನೇ ಐಪಿಎಲ್ ಫೈನಲ್
ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಇದು ಐದನೇ ಐಪಿಎಲ್ ಫೈನಲ್ ಆಗಿದೆ. ಅಂದರೆ ಇದುವರೆಗೆ ಆಡಿರುವ ನಾಲ್ಕು ಫೈನಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಮ್ಮೆ ಮಾತ್ರ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಆದಾಗ್ಯೂ ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಕೊಹ್ಲಿ ಕಳೆದ ನಾಲ್ಕು ಐಪಿಎಲ್ ಫೈನಲ್‌ಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡುವುದಾದರೆ..
140 ರನ್ ಬಾರಿಸಿರುವ ಕೊಹ್ಲಿ
ಐದನೇ ಐಪಿಎಲ್ ಫೈನಲ್ ಆಡಲು ಸಜ್ಜಾಗಿರುವ ವಿರಾಟ್ ಕೊಹ್ಲಿ, ಈ ಮೊದಲು ಆಡಿರುವ ಕಳೆದ 4 ಐಪಿಎಲ್ ಫೈನಲ್‌ಗಳಲ್ಲಿ ಒಟ್ಟು 140 ರನ್ ಮಾತ್ರ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಕೊಹ್ಲಿ 2009 ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ತಮ್ಮ ಮೊದಲ ಐಪಿಎಲ್ ಫೈನಲ್ ಆಡಿದ್ದರು. ಆ ಪಂದ್ಯದಲ್ಲಿ ಕೊಹ್ಲಿ 8 ಎಸೆತಗಳಲ್ಲಿ ಕೇವಲ 7 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆ ನಂತರ 2011 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಫೈನಲ್ ಆಡಿತ್ತು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 35 ರನ್ ಬಾರಿಸಿದ್ದರು.
ಬಳಿಕ 2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೂರನೇ ಫೈನಲ್ ಆಡಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದರು. ಮಾತ್ರವಲ್ಲದೆ ಆ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 4 ಶತಕಗಳನ್ನು ಬಾರಿಸಿದ್ದು ಮಾತ್ರವಲ್ಲದೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊಹ್ಲಿ 35ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಆದರೆ, ಆ ಪಂದ್ಯದಲ್ಲೂ ಆರ್‌ಸಿಬಿ ಸೋತಿತ್ತು. ಇನ್ನು 2025 ರ ಫೈನಲ್‌ನಲ್ಲಿ, ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 35 ಎಸೆತಗಳಲ್ಲಿ 43 ರನ್ ಬಾರಿಸಿದ್ದರು. ಈ ಬಾರಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು.
IPL 2026 Final: ಮೋದಿ ಮೈದಾನದಲ್ಲಿ ಕೊಹ್ಲಿ- ಗಿಲ್ ದಾಖಲೆ ಹೇಗಿದೆ?
ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ
2026 ರ ಐಪಿಎಲ್‌ನಲ್ಲಿ ಕೊಹ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಈ ಸೀಸನ್‌ನಲ್ಲಿ ಇದುವರೆಗೆ 15 ಪಂದ್ಯಗಳನ್ನು ಆಡಿರುವ ಕೊಹ್ಲಿ, 164.38 ಸ್ಟ್ರೈಕ್ ರೇಟ್ ಮತ್ತು 50 ರ ಸರಾಸರಿಯಲ್ಲಿ 600 ರನ್ ಗಳಿಸಿದ್ದಾರೆ. ಇದಲ್ಲದೆ, ಈ ಸೀಸನ್‌ನಲ್ಲಿ ಕೊಹ್ಲಿ 4 ಅರ್ಧಶತಕ ಮತ್ತು ಒಂದು ಶತಕವನ್ನು ಬಾರಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ, ಕೊಹ್ಲಿ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದರ ಜೊತೆಗೆ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





