Virat Kohli: ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ..?
Virat Kohli: ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ ಕೂಡ ದೂರವಾಗಿದೆ. ಏಕೆಂದರೆ ಏಷ್ಯಾಕಪ್‌ನಲ್ಲಿನ ಪುನರಾಗಮನದ ಬಳಿಕ ಕಿಂಗ್ ಕೊಹ್ಲಿ 10 ಪಂದ್ಯಗಳಲ್ಲಿ 3 ಅರ್ಧಶತಕ ಮತ್ತು ಶತಕ ಸೇರಿದಂತೆ ಒಟ್ಟು 404 ರನ್ ಗಳಿಸಿ ಅಬ್ಬರಿಸಿದ್ದಾರೆ.
ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಮೂರನೇ ಟಿ20 ಪಂದ್ಯವು ನಾಳೆ ಇಂದೋರ್ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಿಂದ ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹೊರಗುಳಿಯಲಿದ್ದಾರೆ. ಕೊಹ್ಲಿ ಟಿ20 ವಿಶ್ವಕಪ್ಗೂ ಮುನ್ನ ವಿಶ್ರಾಂತಿ ಬಯಸಿದ್ದು, ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ಗಾಗಿ ಭಾರತ ತಂಡವು ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಗೆ ತೆರಳಲಿದೆ. ಅದಕ್ಕೂ ಮುನ್ನ ಕುಟುಂಬದವರನ್ನು ಭೇಟಿಯಾಗಲು ಕಿಂಗ್ ಕೊಹ್ಲಿ 3 ದಿನಗಳ ಸಮಯವಕಾಶವನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇಂದೋರ್ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ಅನುಮಾನ.
ಸದ್ಯ ಸೌತ್ ಆಫ್ರಿಕಾ ವಿರುದ್ದ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕಳೆದ 2 ವಾರಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಿದ್ದಾರೆ. ಹೀಗಾಗಿ ಅಂತಿಮ ಟಿ20 ಪಂದ್ಯದ ವೇಳೆ ಕೆಲ ಆಟಗಾರರಿಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್ಗಾಗಿ ಭಾರತ ತಂಡವು ಗುರುವಾರ ತೆರಳಲಿದ್ದು, ಆ ಬಳಿಕ ಆಸ್ಟ್ರೇಲಿಯಾದಲ್ಲಿ ಸತತ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ. ಅಲ್ಲದೆ ಅಕ್ಟೋಬರ್ 23 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಹಾಗಾಗಿ ಕೊನೆಯ ಟಿ20 ಪಂದ್ಯದ ವೇಳೆ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಹೊರಗುಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಮತ್ತೊಂದೆಡೆ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ ಕೂಡ ದೂರವಾಗಿದೆ. ಏಕೆಂದರೆ ಏಷ್ಯಾಕಪ್‌ನಲ್ಲಿನ ಪುನರಾಗಮನದ ಬಳಿಕ ಕಿಂಗ್ ಕೊಹ್ಲಿ 10 ಪಂದ್ಯಗಳಲ್ಲಿ 3 ಅರ್ಧಶತಕ ಮತ್ತು ಶತಕ ಸೇರಿದಂತೆ ಒಟ್ಟು 404 ರನ್ ಗಳಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಭರ್ಜರಿ ಫಾರ್ಮ್ ಪ್ರದರ್ಶಿಸಿ ಮಿಂಚಿದ್ದಾರೆ.
ಹಾಗೆಯೇ ಟೀಮ್ ಇಂಡಿಯಾದ ಉಳಿದ ಬ್ಯಾಟ್ಸ್ಮನ್ಗಳು ಉತ್ತಮ ಫಾರ್ಮ್ನಲ್ಲಿದ್ದು, ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಕೊನೆಯ ಪಂದ್ಯದಲ್ಲಿ ಬೌಲಿಂಗ್ನತ್ತ ಹೆಚ್ಚು ಗಮನ ಕೇಂದ್ರೀರಿಸುವ ಸಾಧ್ಯತೆಯಿದೆ. ಏಕೆಂದರೆ ಟಿ20 ವಿಶ್ವಕಪ್ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯುವ ಸಾಧ್ಯತೆಯಿದ್ದು, ಹೀಗಾಗಿ ಅವರ ಬದಲಿ ವೇಗಿಯನ್ನು ರೂಪಿಸಿಕೊಳ್ಳುವ ಜವಾಬ್ದಾರಿ ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೆಗಲೇರಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಟಿ20 ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್.