T20 World Cup 2022: ಟಿ20 ವಿಶ್ವಕಪ್‌ನ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್, ಕೊಹ್ಲಿ, ವಾರ್ನರ್..!
T20 World Cup 2022: ವಾಸ್ತವವಾಗಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೊಂದಿದ್ದು, ಅವರ ಈ ದಾಖಲೆಯನ್ನು ಮುರಿಯುವ ರೇಸ್ನಲ್ಲಿ ದೈತ್ಯ ದೇಶಗಳ 3 ಬ್ಯಾಟರ್ಗಳು ಕಾತುರರಾಗಿದ್ದಾರೆ.
ಟಿ20 ವಿಶ್ವಕಪ್ (T20 World Cup) ಆಗಿರಲಿ ಅಥವಾ ಏಕದಿನ ವಿಶ್ವಕಪ್ ಆಗಿರಲಿ ಪ್ರತಿ ಬಾರಿಯೂ ಈ ಟೂರ್ನಿ ಆರಂಭವಾದಗಲೆಲ್ಲ ಅನೇಕ ಹಳೆಯ ದಾಖಲೆಗಳು ಮುರಿಯಲ್ಪಟ್ಟರೆ, ಇನ್ನೂ ಅನೇಕ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲೂ ಅಂತಹ ಹಳೆಯ ದಾಖಲೆಗಳಿಗೆ ಭಂಗ ಎದುರಾಗಲಿದೆ. ಈ ಬಾರಿ 2 ದೇಶಗಳ 3 ಆಟಗಾರರು ಆ ದೊಡ್ಡ ದಾಖಲೆಯನ್ನು ಮುರಿಯುವ ರೇಸ್‌ನಲ್ಲಿದ್ದು, ಯಾರ ಹೆಸರಿಗೆ ಈ ದಾಖಲೆ ದಾಖಲಾಗುತ್ತದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ವಾಸ್ತವವಾಗಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೊಂದಿದ್ದು, ಅವರ ಈ ದಾಖಲೆಯನ್ನು ಮುರಿಯುವ ರೇಸ್ನಲ್ಲಿ ದೈತ್ಯ ದೇಶಗಳ 3 ಬ್ಯಾಟರ್ಗಳು ಕಾತುರರಾಗಿದ್ದಾರೆ. ಆ ಮೂವರು ಬ್ಯಾಟರ್ಗಳಲ್ಲಿ ಭಾರತದ ಇಬ್ಬರು ಬ್ಯಾಟರ್ಸ್ ಹಾಗೂ ಆಸ್ಟ್ರೇಲಿಯಾದ ಒಬ್ಬ ಬ್ಯಾಟ್ಸ್‌ಮನ್ ಸೇರಿದ್ದಾರೆ.
ಶ್ರೀಲಂಕಾದ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದು, ಆಡಿರುವ 31 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 1016 ರನ್ ಗಳಿಸಿದ್ದಾರೆ. ಜೊತೆಗೆ 1 ಶತಕ ಸೇರಿದಂತೆ 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಜಯವರ್ಧನೆ 2014ರಲ್ಲಿ ಕೊನೆಯ ಟಿ20 ವಿಶ್ವಕಪ್ ಆಡಿದ್ದರು. ಆ ಬಳಿಕ ಕಳೆದ 8 ವರ್ಷಗಳಲ್ಲಿ ಇನ್ನೂ 2 ಟಿ20 ವಿಶ್ವಕಪ್‌ಗಳು ನಡೆದಿದ್ದು, ಯಾರಿಗೂ ಜಯವರ್ಧನೆ ಮಾಡಿರುವ ದಾಖಲೆಯನ್ನು ಮುರಿಯಲಾಗಲಿಲ್ಲ. ಆದರೆ ವಿಂಡೀಸ್ನ ಕ್ರಿಸ್ ಗೇಲ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್, ಜಯವರ್ಧನೆ ದಾಖಲೆಯ ಹತ್ತಿರ ಬಂದರೂ ಸಹ ಅದನ್ನು ಮುರಿಯಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್‌ನ 33 ಪಂದ್ಯಗಳಲ್ಲಿ ಗೇಲ್ 965 ರನ್ ಗಳಿಸಿದ್ದರೆ, ದಿಲ್ಶಾನ್ 35 ಪಂದ್ಯಗಳಲ್ಲಿ 897 ರನ್ ಗಳಿಸಿದ್ದಾರೆ.
ರೋಹಿತ್ಗೆ 169 ರನ್ ಮತ್ತು ವಿರಾಟ್ಗೆ 171 ರನ್ ಬೇಕು
ಆದರೆ, ಈ ಬಾರಿ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊರತುಪಡಿಸಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಜಯವರ್ಧನೆ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ. ಈ ಮೂವರೂ ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂಬುದು ಎಲ್ಲ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ. ರೋಹಿತ್ ಇದುವರೆಗೆ 33 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 847 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ಕೇವಲ 21 ಪಂದ್ಯಗಳಲ್ಲಿ 845 ರನ್ ಗಳಿಸಿದ್ದಾರೆ. ಅದೇನೆಂದರೆ, ಆ ಶ್ರೇಷ್ಠ ದಾಖಲೆಯಿಂದ ರೋಹಿತ್ 169 ರನ್ ಅಂತರದಲ್ಲಿದ್ದು, ವಿರಾಟ್ 171 ರನ್ ಅಂತರದಲ್ಲಿ ನಿಂತಿದ್ದಾರೆ. ಜಯವರ್ಧನೆ ಅವರ ದಾಖಲೆಯನ್ನು ವಿರಾಟ್ ಮುರಿದರೆ, ಟಿ20 ವಿಶ್ವಕಪ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 1000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ.
ಡೇವಿಡ್ ವಾರ್ನರ್ಗೆ 254 ರನ್ ಬೇಕು
ರೋಹಿತ್-ವಿರಾಟ್ ಅವರಂತೆ, ಟಿ20 ವಿಶ್ವಕಪ್‌ನ 30 ಪಂದ್ಯಗಳಲ್ಲಿ 762 ರನ್ ಗಳಿಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಈ ದಾಖಲೆ ಮುರಿಯುವ ರೇಸ್ನಲ್ಲಿದ್ದಾರೆ. ಆದರೆ ಜಯವರ್ಧನೆ ಅವರ ದಾಖಲೆಯನ್ನು ಮುರಿಯಲು ವಾರ್ನರ್ 2022 ರ T20 ವಿಶ್ವಕಪ್‌ನಲ್ಲಿ 254 ರನ್‌ಗಳ ಹೊಸ್ತಿಲನ್ನು ದಾಟಬೇಕಾಗುತ್ತದೆ.
Published On - 10:34 am, Wed, 12 October 22