Virat Kohli: ನಾಯಕನಾಗಿ ವಿದಾಯದ ಟೆಸ್ಟ್ ಪಂದ್ಯ ಆಡಿ ಎಂದ ಬಿಸಿಸಿಐಗೆ ಕೊಹ್ಲಿ ಹೇಳಿದ್ದೇನು ನೋಡಿ
Virat Kohli Farewell Match: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದೇ ತಡ ಕ್ರಿಕೆಟ್ ವಲಯದಿಂದ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಪರ ವಿರೋಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ಹೇಳಿದಾಗ ಬಿಸಿಸಿಐ ಇವರ ಬಳಿ ವಿಶೇಷ ಮನವಿಯೊಂದನ್ನು ಮಾಡಿತ್ತಂತೆ.
ಕಳೆದ ಏಳು ವರ್ಷಗಳಿಂದ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದ ವಿರಾಟ್ ಕೊಹ್ಲಿಯ (Virat Kohli) ನಾಯಕತ್ವದ ಯುಗ ಇದೀಗ ಅಂತ್ಯಕಂಡಿದೆ. ಕೇವಲ ಮೂರು ತಿಂಗಳ ಒಳಗೆ ಏಕದಿನ, ಟಿ20 ಮತ್ತು ಟೆಸ್ಟ್ ಮೂರೂ ಮಾದರಿಯ ನಾಯಕತ್ವದಿಂದ ಕಿಂಗ್ ಕೊಹ್ಲಿ ನಿರ್ಗಮಿಸಿದ್ದಾರೆ. ಟಿ20 ನಾಯಕತ್ವದಿಂದ ಹಿಂದೆ ಸರಿಯುವ ಬಗ್ಗೆ ಸ್ವತಃ ಕೊಹ್ಲಿ ಅವರೇ ಸೂಚನೆ ನೀಡಿದ್ದರು. ಆದರೆ, ಏಕದಿನ ನಾಯಕತ್ವ ಕೊನೆಗೊಂಡಿದ್ದು ಸ್ವತಃ ಕೊಹ್ಲಿ ಅವರಿಗೇ ಆಘಾತ ಉಂಟು ಮಾಡಿತ್ತು. ಟೆಸ್ಟ್ ಕ್ರಿಕೆಟ್ (Test Cricket) ನಾಯಕತ್ವದ ರಾಜೀನಾಮೆ ಕೂಡ ಹಠಾತ್ ಆಗಿ ತೆಗೆದುಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಟೆಸ್ಟ್ ನಾಯಕತ್ವ ನಿವೃತ್ತಿ ಘೋಷಿಸುವ ಹಿಂದಿನ ದಿನ ಕೊಹ್ಲಿ ಅವರು ಈ ಬಗ್ಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರಿಗೆ ತಿಳಿಸಿದರಂತೆ. ಜೊತೆಗೆ ಈ ಸುದ್ದಿ ಬಹಿರಂಗಗೊಳಿಸದಂತೆ ಮನವಿ ಮಾಡಿದ್ದರಂತೆ. ನಂತರ ಬಿಸಿಸಿಐಗೆ ತಿಳಿಸಿ ತಮ್ಮ ದೃಢ ನಿರ್ಧಾರವನ್ನು ಜಗತ್ತಿಗೆ ಹಂಚಿಕೊಂಡರು.
ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದೇ ತಡ ಕ್ರಿಕೆಟ್ ವಲಯದಿಂದ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಪರ ವಿರೋಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದುಕೂಡ ಬಿಸಿಸಿಐ ಗಿಮಿಕ್ ಎಂದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ತೆಗೆದುಕೊಂಡಿರುವುದು ಅವರದ್ದೆ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ. ಇದರ ನಡುವೆ ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ಹೇಳಿದಾಗ ಬಿಸಿಸಿಐ ಇವರ ಬಳಿ ವಿಶೇಷ ಮನವಿಯೊಂದನ್ನು ಮಾಡಿತ್ತಂತೆ.
ಹೌದು, ಹಿಂದುಸ್ತಾನ್ ಟೈಮ್ಸ್ ಮಾಡಿರುವ ವರದಿ ಪ್ರಕಾರ, ವಿರಾಟ್ ಕೊಹ್ಲಿ ಅಧಿಕೃತವಾಗಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಜವಾಬ್ದಾರಿಯಿಂದ ಕೆಳಗಿಳಿಯುವ ಮುನ್ನ ನಾಯಕನಾಗಿ ವಿದಾಯದ ಟೆಸ್ಟ್ ಪಂದ್ಯ ಆಡುವಂತೆ ಕೋರಿತ್ತು. ಆದರೆ, ಕೊಹ್ಲಿ ಇದನ್ನು ನಯವಾಗಿ ತಿರಾಸ್ಕಾರ ಮಾಡಿದರಂತೆ. ಭಾರತ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಎದುರು ಫೆಬ್ರವರಿ 25ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಇದು ಅವರ 100ನೇ ಟೆಸ್ಟ್ ಪಂದ್ಯ ಕೂಡ. ಇಲ್ಲಿ ನಾಯಕನಾಗಿ ವಿದಾಯದ ಟೆಸ್ಟ್ ಪಂದ್ಯ ಆಡಿ ಎಂದು ಬಿಸಿಸಿಐ ಅಧಿಕಾರಿಗಳು ಕೊಹ್ಲಿಗೆ ಕರೆ ಮಾಡಿ ಹೇಳಿದ್ದರಂತೆ. ಆದರೆ, ಇದಕ್ಕೆ ಕೊಹ್ಲಿ “ಒಂದು ಪಂದ್ಯ ದೊಡ್ಡ ಬದಲಾವಣೆ ಮಾಡುವುದಿಲ್ಲ, ನಾನಿರುವುದೇ ಹೀಗೆ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ಕೊಹ್ಲಿ ನಾಯಕತ್ವದಲ್ಲಿ ಭಾರತ ಅಭೂತಪೂರ್ವ ಯಶಸ್ಸು ಸಾಧಿಸಿದೆ. 2015 ರಿಂದ ನಾಯಕನಾಗಿ 68 ಟೆಸ್ಟ್ ಗಳಲ್ಲಿ, ಕೊಹ್ಲಿ ಶೇ. 58.82 ಗೆಲುವನ್ನು ಸಾಧಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 40 ಟೆಸ್ಟ್ ಗಳನ್ನು ಗೆದ್ದುಕೊಂಡಿದೆ. 17 ಮ್ಯಾಚ್ ಸೋತ್ತಿದ್ದರೆ, 11 ಮ್ಯಾಚ್ ಡ್ರಾ ಆಗಿದೆ. ಕೊಹ್ಲಿ ನಾಯಕತ್ವದಲ್ಲಿ ತಂಡವು ವಿದೇಶಗಳಲ್ಲಿ 16 ಟೆಸ್ಟ್ಗಳನ್ನು ಗೆದ್ದಿರುವುದು ಬಹುದೊಡ್ಡ ಸಾಧನೆಯಾಗಿದೆ.
ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಘೋಷಣೆ ಮಾಡುವುದರಲ್ಲಿದೆ. ಮೂಲಗಳ ಪ್ರಕಾರ ರೋಹಿತ್ ಶರ್ಮಾ ಅವರೇ ನಾಯಕನಾಗಿ ಆಯ್ಕೆಯಾಗಲಿದ್ದಾರಂತೆ. ಇದರ ನಡುವೆ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಆರ್. ಅಶ್ವಿನ್ ಹೆಸರು ಕೂಡ ಕೇಳಿಬರುತ್ತಿದೆ.
South Africa vs India: ಮುಂದಿನ ತಿಂಗಳು ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದ ಹರ್ಭಜನ್ ಸಿಂಗ್