ಭಲೇ ಭೇಷ್… ಕನ್ನಡಿಗನ ಕಮಾಲ್​ಗೆ ದಂಗಾದ ವಿರಾಟ್ ಕೊಹ್ಲಿ!

IPL 2026 RCB vs KKR: ಐಪಿಎಲ್​ನ 57ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಭಲೇ ಭೇಷ್... ಕನ್ನಡಿಗನ ಕಮಾಲ್​ಗೆ ದಂಗಾದ ವಿರಾಟ್ ಕೊಹ್ಲಿ!
Manish Pandey - Virat Kohli

Updated on: May 14, 2026 | 8:00 AM

ಐಪಿಎಲ್​ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯದ ಅದ್ಭುತ ಕ್ಷಣವೊಂದು ದಾಖಲಾಗಿದೆ. ಕೆಕೆಆರ್ ತಂಡದ ಅನುಭವಿ ಆಟಗಾರ ಮನೀಶ್ ಪಾಂಡೆ ಗಾಳಿಯಲ್ಲಿ ಹಕ್ಕಿಯಂತೆ ಜಿಗಿದು ಹಿಡಿದ ಅಸಾಧಾರಣ ಕ್ಯಾಚ್ ಇಡೀ ಕ್ರೀಡಾಂಗಣವನ್ನು ರೋಮಾಂಚನಗೊಳಿಸಿತು. ಕೇವಲ ಸೆಕೆಂಡುಗಳ ಅವಧಿಯಲ್ಲಿ ನಡೆದ ಈ ‘ಸೂಪರ್‌ಮ್ಯಾನ್’ ಸಾಹಸಕ್ಕೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ರನ್-ಮಷಿನ್ ವಿರಾಟ್ ಕೊಹ್ಲಿ ದಿಗ್ಭ್ರಮೆಗೊಂಡರು.

ಆರ್​ಸಿಬಿ ಇನಿಂಗ್ಸ್​ನ 18ನೇ ಓವರ್‌ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಎಸೆತವನ್ನು ಟಿಮ್ ಡೇವಿಡ್ ಆಫ್-ಸ್ಟಂಪ್‌ನಿಂದ ಹೊರಗೆ ಬಲವಾಗಿ ಕಟ್ ಮಾಡಿದರು. ಬ್ಯಾಟ್‌ನಿಂದ ಸಿಡಿದ ಚೆಂಡು ಅತಿ ವೇಗವಾಗಿ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ರಾಕೆಟ್‌ನಂತೆ ನುಗ್ಗಿತು.

ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಮನೀಶ್ ಪಾಂಡೆ, ಕೇವಲ ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಪ್ರತಿಕ್ರಿಯಿಸಿದರು. ತಮ್ಮ ಎಡಭಾಗಕ್ಕೆ ಸಂಪೂರ್ಣವಾಗಿ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದ ಚೆಂಡನ್ನು ಮೈದಾನಕ್ಕೆ ತಾಗುವ ಕೆಲವೇ ಇಂಚುಗಳ ಮುನ್ನ ಅದ್ಭುತವಾಗಿ ಹಿಡಿದರು.

ಪಾಂಡೆ ಅವರ ಈ ಅಸಾಧ್ಯವಾದ ಕ್ಷೇತ್ರರಕ್ಷಣೆಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಮತ್ತು ಆಟಗಾರರು ದಿಗ್ಭ್ರಮೆಗೊಂಡರು. ಅಷ್ಟೇ ಅಲ್ಲದೆ ಕ್ಯಾಚ್ ಔಟ್ ಆಗಿ ಟಿಮ್ ಡೇವಿಡ್ ಹೊರ ನಡೆಯುತ್ತಿದ್ದಂತೆ ಮನೀಶ್ ಪಾಂಡೆ ಬಳಿ ತೆರಳಿದ ವಿರಾಟ್ ಕೊಹ್ಲಿ ಈ ಅದ್ಭುತ ಫೀಲ್ಡಿಂಗ್​ ಅನ್ನು ಶ್ಲಾಘಿಸಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕಿಂಗ್ ಕೊಹ್ಲಿಯ ಕ್ರೀಡಾ ಸ್ಫೂರ್ತಿಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಗೆದ್ದು ಬೀಗಿದ ಆರ್​ಸಿಬಿ:

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ (105) ಅಜೇಯ ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಆರ್​ಸಿಬಿ ತಂಡವು 19.1 ಓವರ್​ಗಳಲ್ಲಿ 194 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 

Follow Us