Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!

Virat Kohli: ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಒಟ್ಟು 16 ಇನಿಂಗ್ಸ್ ಆಡಿದ್ದಾರೆ. ಈ ಹದಿನಾರು ಇನಿಂಗ್ಸ್​ಗಳಲ್ಲಿ ಕಲೆಹಾಕಿರುವುದು ಬರೋಬ್ಬರಿ 675 ರನ್​​ಗಳು. ಅದು ಕೂಡ 165.84ರ ಸ್ಟೈಕ್​ ರೇಟ್​ನಲ್ಲಿ. ಇಷ್ಟೊಂದು ಸ್ಟ್ರೈಕ್ ರೇಟ್​ನಲ್ಲಿ ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಬ್ಯಾಟ್ ಬೀಸಿಲ್ಲ ಎಂಬುದು ವಿಶೇಷ.

Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!
Virat Kohli

Updated on: Jun 01, 2026 | 12:00 PM

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆರ್​ಸಿಬಿ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ವಿರಾಟ್ ಕೊಹ್ಲಿ (Virat Kohli).

ಗುಜರಾತ್ ಟೈಟಾನ್ಸ್ ನೀಡಿದ 155 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಡೆದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಶೈಲಿಯ ಬದಲಾವಣೆ ಬಗ್ಗೆ ಪ್ರಶ್ನೆ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಕೊಹ್ಲಿ, “ಇಂದಿನ ಕ್ರಿಕೆಟ್‌ನ ಬೇಡಿಕೆ ಎಷ್ಟಿದೆಯೆಂದರೆ, ತೀರಾ ಕಿರಿಯ ವಯಸ್ಸಿನ (ಸೂಪರ್ ಯಂಗ್) ಆಟಗಾರರು ಸಹ ನೀವು ನಿಮ್ಮ ಆಟದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ ಮತ್ತು ಒತ್ತಡ ಹೇರುತ್ತಿದ್ದಾರೆ. ಇದಕ್ಕಾಗಿ ನಾನು ಕೂಡ ಬದಲಾಗಿದ್ದೇನೆ” ಎಂದರು.

ಇಂತಹದೊಂದು ಪ್ರಶ್ನೆ ಮುಂದಿಡಲು ಮುಖ್ಯ ಕಾರಣ ಈ ಪಂದ್ಯದಲ್ಲಿ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು. ಅಂದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ 26 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಕೊಹ್ಲಿ ಬ್ಯಾಟ್ ಬೀಸಿರುವುದು 165.84 ಸ್ಟ್ರೈಕ್ ರೇಟ್​ನಲ್ಲಿ. ಇದು ಕಐಪಿಎಲ್ ಇತಿಹಾಸದಲ್ಲೇ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಟ್ರೈಕ್ ರೇಟ್​ ಎಂಬುದು ವಿಶೇಷ.

ಹೀಗೆ ಈ ಬಾರಿಯ ಐಪಿಎಲ್​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕೊಹ್ಲಿಗೆ ಇಂತಹದೊಂದು ಬದಲಾವಣೆಗೆ ಕಾರಣವೇನು ಎಂದು ಕೇಳಿದ್ದಾರೆ. ಈ ವೇಳೆ ಯುವ ದಾಂಡಿಗರ ಆರ್ಭಟದ ಮುಂದೆ ಹಾಗೂ ಅವರ ಸವಾಲನ್ನು ಸ್ವೀಕರಿಸಲು ಈ ರೀತಿಯಾಗಿ ಬದಲಾಗಿರುವುದಾಗಿ ಕಿಂಗ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!

ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು. ಅದರಲ್ಲೂ ಈ ಬಾರಿ 165.84ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬಿಸಿರುವ ಕೊಹ್ಲಿ ಮುಂದಿನ ಸೀಸನ್​ನಲ್ಲಿ 170ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರೂ ಅಚ್ಚರಿಪಡಬೇಕಿಲ್ಲ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us