IND vs PAK: ಈ ವರ್ಷ ಭಾರತ-ಪಾಕಿಸ್ತಾನ್ 5 ಬಾರಿ ಮುಖಾಮುಖಿ ಸಾಧ್ಯತೆ..!
India vs Pakistan: ಏಷ್ಯಾಕಪ್ನಲ್ಲಿ ಹಾಗೂ ಟಿ20 ವಿಶ್ವಕಪ್ನಲ್ಲಿ ಒಂದೊಂದು ಬಾರಿ ಭಾರತ-ಪಾಕಿಸ್ತಾನ್ ಮುಖಾಮುಖಿ ಖಚಿತವಾಗಿದ್ದು, ಹೀಗಾಗಿ ಉಭಯ ತಂಡಗಳಿಂದ ಈ ಎರಡೂ ಪಂದ್ಯಗಳಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಟಿ20 ವಿಶ್ವಕಪ್ 2021 ರ ಹೀನಾಯ ಸೋಲಿನ ಬಳಿಕ ಭಾರತ ತಂಡವು ಪಾಕಿಸ್ತಾನ್ (India vs Pakistan) ವಿರುದ್ದ ಯಾವುದೇ ಪಂದ್ಯವಾಡಿಲ್ಲ. ಅತ್ತ ಉಭಯ ದೇಶಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನೂ ಕೂಡ ಆಡುತ್ತಿಲ್ಲ. ಹೀಗಾಗಿ ಮತ್ತೆ ಮುಖಾಮುಖಿಯಾಗಬೇಕಿದ್ದರೆ ಐಸಿಸಿ ಟೂರ್ನಿಯವರೆಗೂ ಕಾಯಬೇಕಿತ್ತು. ಆದರೆ ಈ ಸಲ ಏಷ್ಯಾ ಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಅಸೋಷಿಯೇಷನ್ ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್ಗೂ ಮುನ್ನವೇ ಈ ಬಾರಿ ಏಷ್ಯಾಕಪ್ ನಡೆಯುತ್ತಿದೆ. ವಿಶೇಷ ಎಂದರೆ ಈ ಬಾರಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಪಾಕಿಸ್ತಾನ್ ವಿರುದ್ದ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ (Team India) ಮುಂದಿದೆ.
ಏಕೆಂದರೆ ಉಭಯ ತಂಡಗಳು ಒಂದೇ ಗ್ರೂಪ್ನಲ್ಲಿದೆ. ಅಲ್ಲದೆ ಎರಡೂ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇಲ್ಲಿ ಗ್ರೂಪ್ ಹಂತದಲ್ಲಿ ಭಾರತ-ಪಾಕಿಸ್ತಾನ್ ಆಗಸ್ಟ್ 28 ರಂದು ಸೆಣಸಲಿದೆ. ಗ್ರೂಪ್ ಹಂತದ 3 ತಂಡಗಳಿಂದ 2 ತಂಡಗಳು ಸೂಪರ್-4 ಹಂತಕ್ಕೆ ಹೋಗಲಿದೆ. ವಿಶೇಷ ಎಂದರೆ ಭಾರತ, ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್ನಲ್ಲಿರುವ ಮತ್ತೊಂದು ತಂಡ ಇನ್ನಷ್ಟೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗಬೇಕಿದೆ. ಅಂದರೆ ಈ ಗ್ರೂಪ್ನಲ್ಲಿ ಸ್ಥಾನ ಪಡೆಯಲಿರುವುದು ಬಲಿಷ್ಠ ತಂಡವಲ್ಲ.
ಇಲ್ಲಿ ಭಾರತ-ಪಾಕ್ ಬಲಿಷ್ಠವಾಗಿರುವ ಕಾರಣ ಎರಡೂ ತಂಡಗಳು ಸೂಪರ್-4 ಆಡುವುದು ಬಹುತೇಕ ಖಚಿತ. ಹೀಗಾಗಿ ಗ್ರೂಪ್ ಹಂತದ ಬಳಿಕ ಉಭಯ ತಂಡಗಳು ಸೂಪರ್-4 ಹಂತದಲ್ಲಿ ಮುಖಾಮುಖಿಯಾಗಲಿದೆ ಎನ್ನಬಹುದು. ಹಾಗೆಯೇ ಎರಡೂ ತಂಡಗಳು ಫೈನಲ್ಗೆ ಪ್ರವೇಶಿಸಿದರೆ ಮೂರನೇ ಬಾರಿ ಮುಖಾಮುಖಿಯಾಗಬಹುದು. ಹೀಗಾದರೆ ಏಷ್ಯಾಕಪ್ನಲ್ಲೇ ಉಭಯ ತಂಡಗಳು ಪರಸ್ಪರ 3 ಬಾರಿ ಸೆಣಸುವ ಸಾಧ್ಯತೆಗಳಿವೆ.
ಇನ್ನು ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಸೂಪರ್-12 ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ. ಇದಾಗಿ ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ ಮತ್ತೊಮ್ಮೆ ಮುಖಾಮುಖಿಯಾಗಬಹುದು. ಅಂದರೆ ಏಷ್ಯಾಕಪ್ನಲ್ಲಿ 3 ಬಾರಿ ಹಾಗೂ ಟಿ20 ವಿಶ್ವಕಪ್ನಲ್ಲಿ 2 ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಮೂಲಕ 2022 ರಲ್ಲಿ ಭಾರತ-ಪಾಕಿಸ್ತಾನ್ ನಡುವಣ 5 ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಒದಗಿ ಬಂದರೂ ಅಚ್ಚರಿಪಡಬೇಕಿಲ್ಲ.
ಇದಾಗ್ಯೂ ಏಷ್ಯಾಕಪ್ನಲ್ಲಿ ಹಾಗೂ ಟಿ20 ವಿಶ್ವಕಪ್ನಲ್ಲಿ ಒಂದೊಂದು ಬಾರಿ ಭಾರತ-ಪಾಕಿಸ್ತಾನ್ ಮುಖಾಮುಖಿ ಖಚಿತವಾಗಿದ್ದು, ಹೀಗಾಗಿ ಉಭಯ ತಂಡಗಳಿಂದ ಈ ಎರಡೂ ಪಂದ್ಯಗಳಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಾಗ್ಯೂ ಭಾರತ-ಪಾಕಿಸ್ತಾನ್ ನಡುವಣ ಹೆಚ್ಚುವರಿ 3 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಒದಗಿ ಬರಲಿದೆಯಾ ಕಾದು ನೋಡಬೇಕಿದೆ.