ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ

Commonwealth Games 2026: ಕ್ರಿಕೆಟ್ ಅನ್ನು ಜಾಗತಿಕವಾಗಿ ವಿಸ್ತರಿಸಲು ಮತ್ತು ಕ್ರೀಡಾಕೂಟದ ವಾಣಿಜ್ಯ ಮೌಲ್ಯ ಹೆಚ್ಚಿಸಲು 1998ರಲ್ಲಿ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್ ಟೂರ್ನಿಯನ್ನು ಮೊದಲ ಬಾರಿಗೆ ಸೇರಿಸಲಾಗಿತ್ತು. ಆದರೆ ಆ ಬಳಿಕ ಐಸಿಸಿ-ಬಿಸಿಸಿಐ ಮಂಡಳಿಗಳ ನಿರಾಸಕ್ತಿಯಿಂದಾಗಿ ಕ್ರಿಕೆಟ್ ಅನ್ನು ಕೈ ಬಿಡಲಾಗಿತ್ತು. ತದನಂತರ 2022 ರಲ್ಲಿ ಮಹಿಳಾ ಟಿ20 ಟೂರ್ನಿಯನ್ನು ಆಯೋಜಿಸಿದ್ದರೂ, ಈ ಬಾರಿ ಕ್ರಿಕೆಟ್ ಪಂದ್ಯಾವಳಿಯನ್ನು ಕೈ ಬಿಡಲಾಗಿದೆ.

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕ್ರಿಕೆಟ್​ ಯಾಕಿಲ್ಲ? ಇಲ್ಲಿದೆ ಉತ್ತರ
Team India
Image Credit source: CWG

Updated on: Jul 23, 2026 | 12:02 PM

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್​ನಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಅಧಿಕೃತವಾಗಿ ಕೈ ಬಿಡಲಾಗಿದೆ. ಕಳೆದ 2022ರ ಬರ್ಮಿಂಗ್​ಹ್ಯಾಮ್ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತಾದರೂ, ಈ ಬಾರಿ ಕ್ರೀಡಾಭಿಮಾನಿಗಳಿಗೆ ಯಾವುದೇ ಕ್ರಿಕೆಟ್​ ಪಂದ್ಯಗಳ ರಸದೌತಣ ಸಿಗುವುದಿಲ್ಲ. ಹಾಗಿದ್ರೆ ಈ ಬಾರಿಯ ಕ್ರೀಡಾಕೂಟದಿಂದ ಕ್ರಿಕೆಟ್ ಅನ್ನು ಕೈ ಬಿಡಲು ಕಾರಣಗಳೇನು ಎಂದು ನೋಡುವುದಾದರೆ…

ಆತಿಥೇಯರ ಬಿಕ್ಕಟ್ಟು ಮತ್ತು ಬಜೆಟ್ ಕಡಿತ:

2026ರ ಕಾಮನ್​ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಆಯೋಜಿಸಬೇಕಿತ್ತು. ಆದರೆ ವಿಪರೀತ ವೆಚ್ಚದ ಕಾರಣ ನೀಡಿ ಆಸ್ಟ್ರೇಲಿಯಾ ಕೊನೆಕ್ಷಣದಲ್ಲಿ ಹಿಂದೆ ಸರಿಯಿತು. ಆಗ ಕ್ರೀಡಾಕೂಟವನ್ನು ಉಳಿಸಲು ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ಮುಂದೆ ಬಂದಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರೀಡಾಕೂಟ ಆಯೋಜಿಸಬೇಕಾದ್ದರಿಂದ, ಗ್ಲ್ಯಾಸ್ಗೋ ಕೇವಲ 10 ಕ್ರೀಡೆಗಳಿಗೆ ಮಾತ್ರ ಸೀಮಿತಗೊಳಿಸಿ ಅತ್ಯಂತ ಸರಳವಾಗಿ ಕ್ರೀಡಾಕೂಟ ನಡೆಸಲು ನಿರ್ಧರಿಸಿದೆ.

ಕ್ರೀಡಾಂಗಣ ಹಾಗೂ ಮೂಲಸೌಕರ್ಯದ ಕೊರತೆ:

ಹೊಸದಾಗಿ ಯಾವುದೇ ಕ್ರೀಡಾಂಗಣ ನಿರ್ಮಿಸದೆ, ಈಗಾಗಲೇ ಲಭ್ಯವಿರುವ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಗ್ಲ್ಯಾಸ್ಗೋ ನಿರ್ಧರಿಸಿದೆ. ಗ್ಲ್ಯಾಸ್ಗೋ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣಗಳು ಲಭ್ಯವಿಲ್ಲ. ಕೇವಲ ಒಂದು ಕ್ರೀಡಾಕೂಟಕ್ಕಾಗಿ ಹೊಸ ಪಿಚ್ ಅಥವಾ ಕ್ರೀಡಾಂಗಣ ನಿರ್ಮಿಸುವುದು ಆರ್ಥಿಕವಾಗಿ ಭಾರೀ ನಷ್ಟ ತರಬಹುದು ಎಂಬ ಕಾರಣಕ್ಕೆ ಕ್ರಿಕೆಟ್‌ಗೆ ಕೋಕ್ ನೀಡಲಾಗಿದೆ.

ಕಡ್ಡಾಯ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಇಲ್ಲ:

ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ನಿಯಮಾವಳಿಗಳ ಪ್ರಕಾರ, ಅಥ್ಲೆಟಿಕ್ಸ್ ಮತ್ತು ಈಜು ಕ್ರೀಡೆಗಳು ಮಾತ್ರ ಕಡ್ಡಾಯವಾಗಿರಬೇಕು. ಕ್ರಿಕೆಟ್ ‘ಐಚ್ಛಿಕ ಕ್ರೀಡೆ’ ವಿಭಾಗಕ್ಕೆ ಸೇರುವುದರಿಂದ, ಆತಿಥೇಯ ದೇಶಕ್ಕೆ ಇದನ್ನು ಕೈಬಿಡುವ ಸಂಪೂರ್ಣ ಹಕ್ಕಿರುತ್ತದೆ. ಹೀಗಾಗಿ ಆರ್ಥಿಕ ಹೊರೆಯ ಕಾರಣ ಕ್ರಿಕೆಟ್ ಪಂದ್ಯಾವಳಿಯನ್ನು ಕೈ ಬಿಡಲಾಗಿದೆ.

ಇದನ್ನೂ ಓದಿ: NEET ಪ್ರತಿಭಟನೆ: ವಿದ್ಯಾರ್ಥಿಗಳ ಪರ ನಿಂತ ಯುವರಾಜ್ ಸಿಂಗ್!

ಭಾರತಕ್ಕೆ ದೊಡ್ಡ ಹಿನ್ನಡೆ:

2022ರ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಕ್ರಿಕೆಟ್ ಜೊತೆಗೆ ಭಾರತಕ್ಕೆ ಹೆಚ್ಚು ಪದಕ ತಂದುಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಹಾಕಿಯಂತಹ ಪ್ರಮುಖ ಕ್ರೀಡೆಗಳನ್ನೂ ಸಹ ಕೈಬಿಡಲಾಗಿದೆ. ಇದರಿಂದಾಗಿ ಭಾರತದ ಪದಕಗಳ ಸಂಖ್ಯೆ ಗಣನೀಯವಾಗಿ ಕುಸಿಯುವ ಆತಂಕ ಎದುರಾಗಿದೆ.

 

Follow Us