WPL 2023: ಹೀಗಾದ್ರೆ RCB ಎಲಿಮಿನೇಟರ್ ಹಂತಕ್ಕೇರುವುದು ಖಚಿತ..!
WPL 2023 RCB: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 5 ತಂಡಗಳು ತಲಾ 8 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು ಇತರ ತಂಡಗಳೊಂದಿಗೆ ಎರಡು ಬಾರಿ ಮುಖಾಮುಖಿಯಾಗುತ್ತದೆ.
WPL 2023: ವುಮೆನ್ಸ್ ಪ್ರೀಮಿಯರ್ ಲೀಗ್ನ ದ್ವಿತೀಯ ಸುತ್ತಿನ ಪಂದ್ಯಗಳು ಭರದಿಂದ ಸಾಗುತ್ತಿದೆ. ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಮುಂಬೈ ಇಂಡಿಯನ್ಸ್ (Mumbai Indians) ತಂಡವು ಈಗಾಗಲೇ ಮುಂದಿನ ಹಂತಕ್ಕೇರಿದೆ. ಇನ್ನು ದ್ವಿತೀಯ ಸುತ್ತಿನ ಮೂಲಕ 2 ತಂಡಗಳು ಎಲಿಮಿನೇಟರ್ ಹಂತಕ್ಕೇರಬಹುದು. ಇದೀಗ ತನ್ನ 6ನೇ ಪಂದ್ಯದಲ್ಲಿ ಮೊದಲ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಲಿಮಿನೇಟರ್ ಕನಸನ್ನು ಜೀವಂತವಿರಿಸಿಕೊಂಡಿದೆ. ಅಂದರೆ ಆರ್ಸಿಬಿ ಉಳಿದ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮುಂದಿನ ಹಂತಕ್ಕೇರಬಹುದು. ಆದರೆ ಇಲ್ಲಿ ಇತರೆ ತಂಡಗಳ ಫಲಿತಾಂಶವು ಗಣನೆಗೆ ಬರಲಿದೆ.
ಆರ್ಸಿಬಿ ಎಲಿಮಿನೇಟರ್ ಹಂತಕ್ಕೇರುವುದು ಹೇಗೆ?
- RCB ಮುಂದಿನ 2 ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲಬೇಕು. ಇದರಿಂದ ಒಟ್ಟು 6 ಪಾಯಿಂಟ್ ಆಗಲಿದೆ.
- ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಗೆಲ್ಲಬೇಕು. ಇಲ್ಲಿ ಮುಂಬೈ ಹಾಗೂ ಡೆಲ್ಲಿ ಗೆದ್ದರೂ ಆರ್ಸಿಬಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- ಮುಂದಿನ ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ 2 ಸೋಲು ಕಾಣಬೇಕು. ಹಾಗೆಯೇ ಯುಪಿ ವಾರಿಯರ್ಸ್ 3 ಪಂದ್ಯಗಳನ್ನು ಸೋತರೆ ಆರ್ಸಿಬಿಗೆ ಅನುಕೂಲವಾಗಲಿದೆ.
ಅಂದರೆ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳಿಗೆ ಸೋಲುಣಿಸಬೇಕು. ಅಲ್ಲದೆ ಯುಪಿ ವಾರಿಯರ್ಸ್ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲುವುದನ್ನು ಎದುರು ನೋಡಬೇಕು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಹೀಗಾದ್ರೆ ಮಾತ್ರ ಆರ್ಸಿಬಿಗೆ ನೆಟ್ ರನ್ ರೇಟ್ ಮೂಲಕ ಎಲಿಮಿನೇಟರ್ ಪಂದ್ಯವಾಡಬಹುದು.
ಫೈನಲ್ ಎಂಟ್ರಿ ಹೇಗೆ?
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 5 ತಂಡಗಳು ತಲಾ 8 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು ಇತರ ತಂಡಗಳೊಂದಿಗೆ ಎರಡು ಬಾರಿ ಮುಖಾಮುಖಿಯಾಗುತ್ತದೆ. ಇದರಲ್ಲಿ ಅತ್ಯಧಿಕ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸುತ್ತದೆ.
ಇನ್ನು ಪಾಯಿಂಟ್ ಟೇಬಲ್ನಲ್ಲಿ 2ನೇ ಹಾಗೂ 3ನೇ ಸ್ಥಾನ ಅಲಂಕರಿಸುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಈಗಾಗಲೇ ಮುಂಬೈ ಇಂಡಿಯನ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಮುಂದಿನ ಹಂತಕ್ಕೇರಿದೆ. ಇನ್ನು ಮುಂಬೈ ಅಗ್ರಸ್ಥಾನದೊಂದಿಗೆ ಫೈನಲ್ ಆಡುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹಾಗೆಯೇ ಪಾಯಿಂಟ್ ಟೇಬಲ್ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಎಲಿಮಿನೇಟರ್ ಹಂತಕ್ಕೇರುವುದು ಬಹುತೇಕ ಖಚಿತ ಎನ್ನಬಹುದು.
ಇಲ್ಲಿ ಮೂರನೇ ಸ್ಥಾನಕ್ಕಾಗಿ ಆರ್ಸಿಬಿ, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ಪೈಪೋಟಿ ಇದೆ. ಆರ್ಸಿಬಿ ಮುಂದಿನ 2 ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನಕ್ಕೇರಿದರೆ ಎಲಿಮಿನೇಟರ್ ಪಂದ್ಯವಾಡಬಹುದು.
ಈ ಮೇಲೆ ತಿಳಿಸಿದಂತೆ ಆರ್ಸಿಬಿ 3ನೇ ಸ್ಥಾನ ಪಡೆಯಲು ಯುಪಿ ವಾರಿಯರ್ಸ್ ಮುಂದಿನ 3 ಪಂದ್ಯಗಳಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಾಣಲೇಬೇಕು. ಒಂದು ವೇಳೆ ಆರ್ಸಿಬಿ ಮುಂದಿನ 2 ಪಂದ್ಯ ಗೆದ್ದು, ಯುಪಿ ವಾರಿಯರ್ಸ್ 1 ಪಂದ್ಯದಲ್ಲಿ ಜಯ ಸಾಧಿಸಿದರೆ ಪಾಯಿಂಟ್ ಟೇಬಲ್ನಲ್ಲಿ ಸಮಬಲ ಸಾಧಿಸಲಿದೆ. ಇದರಿಂದ ನೆಟ್ ರನ್ ರೇಟ್ ಕೂಡ ಗಣನೆಗೆ ಬರಲಿದೆ.
ಇದನ್ನೂ ಓದಿ: Virat Kohli: 40 ವರ್ಷಗಳ ಹಳೆಯ ಸಾಧನೆಯನ್ನು ಪುನರಾವರ್ತಿಸಿದ ವಿರಾಟ್ ಕೊಹ್ಲಿ
ಹೀಗಾಗಿ ಆರ್ಸಿಬಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ. ಈ ಲೆಕ್ಕಚಾರದಂತೆ ಮುಂದಿನ ಫಲಿತಾಂಶಗಳು ಮೂಡಿಬಂದರೆ ಆರ್ಸಿಬಿ ಎಲಿಮಿನೇಟರ್ ಪಂದ್ಯವನ್ನು ಆಡುವುದು ಖಚಿತ.