WPL 2023: ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಆರ್‌ಸಿಬಿಗೆ ಇನ್ನು ಇದೆ ಅವಕಾಶ..!
WPL 2023: ಬೆಂಗಳೂರು ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದ್ದರೆ, ಯುಪಿ ಎರಡರಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪುತ್ತದೆ.

ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ತನ್ನ ಮೊದಲ ಆವೃತ್ತಿಯಲ್ಲೇ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಪಂದ್ಯವೂ ರೋಚಕತೆಯಿಂದ ಕೂಡಿದ್ದು, ಪಂದ್ಯ ನೋಡಲು ಬರುವ ಅಭಿಮಾನಿಗಳು ಪೈಸಾ ವಸೂಲ್ ಮನಸ್ಥಿತಿಯೊಂದಿಗೆ ಮರಳುತ್ತಿದ್ದಾರೆ. ಹೀಗಾಗಿ ಮಹಿಳಾ ಐಪಿಎಲ್ (IPL) ಕೂಡ ಪುರುಷರ ಐಪಿಎಲ್ನಂತೆ ಭರ್ಜರಿ ಯಶಸ್ಸು ಗಳಿಸುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಈ ಲೀಗ್‌ನಲ್ಲಿ ಈಗಾಗಲೇ 7 ಪಂದ್ಯಗಳು ಮುಗಿದಿದ್ದು, ಈ 7 ಪಂದ್ಯಗಳ ನಂತರ ಯಾವ ತಂಡ ಅದ್ಭುತ ಪ್ರದರ್ಶನ ನೀಡಿದೆ ಎಂಬುದನ್ನು ನೋಡಿದರೆ ಮುಂಬೈ ಇಂಡಿಯನ್ಸ್ (Mumbai Indians) ತಂಡ ಮೊದಲ ಸ್ಥಾನದಲ್ಲಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಈ ತಂಡವು ಸತತವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಯಶಸ್ಸಿನ ಸರಣಿಯನ್ನು ಮುಂದುವರೆಸಿದೆ. ಮಾರ್ಚ್ 9 ರಂದು ಗುರುವಾರ ನಡೆದ ಮೂರನೇ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್‌ಗಳಿಂದ ಸುಲಭ ಜಯ ದಾಖಲಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಮೊದಲ ಸ್ಥಾನವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಂಡಿತು.
ಈ ಲೀಗ್‌ನಲ್ಲಿ ಇಲ್ಲಿಯವರೆಗೆ 7 ಪಂದ್ಯಗಳನ್ನು ಆಡಲಾಗಿದ್ದು, ಯುಪಿ ವಾರಿಯರ್ಸ್ ಹೊರತುಪಡಿಸಿ, ಉಳಿದ ಎಲ್ಲಾ ನಾಲ್ಕು ತಂಡಗಳು ತಲಾ 3 ಪಂದ್ಯಗಳನ್ನು ಆಡಿವೆ. ಗುರುವಾರ ಸಂಜೆ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬೈ ಮತ್ತು ದೆಹಲಿ ತಂಡಗಳು ತಮ್ಮ ಮೂರನೇ ಪಂದ್ಯವನ್ನು ಆಡಿದ್ದವು. ಈ ಎರಡೂ ತಂಡಗಳು ಈ ಮೊದಲು ಆಡಿದ ಎರಡೂ ಆರಂಭಿಕ ಪಂದ್ಯಗಳನ್ನು ಗೆದ್ದಿದ್ದರಿಂದ ನಿನ್ನೆಯ ಪಂದ್ಯದ ಮೇಲೆ ಕುತೂಹಲ ಹೆಚ್ಚಿತ್ತು. ಆದರೆ ಕೇವಲ 105 ರನ್ ಗಳಿಸಲಷ್ಟೇ ಶಕ್ತವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮೊದಲ ಸೋಲನ್ನು ಎದುರಿಸಬೇಕಾಯಿತು.
IND vs AUS: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ತಂಡ
ಅಗ್ರಸ್ಥಾನದಲ್ಲಿ ಮುಂಬೈ
ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಎರಡನೇ ಸ್ಥಾನದಲ್ಲಿತ್ತು. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿದ್ದವು. ಆದರೆ ಉತ್ತಮ ನೆಟ್ ರನ್ರೇಟ್ (NRR) ಹೊಂದಿದ್ದ ಕಾರಣ ಮುಂಬೈ ಮೊದಲ ಸ್ಥಾನದಲ್ಲಿತ್ತು. ಹೀಗಾಗಿ ನಿನ್ನೆಯ ಪಂದ್ಯವನ್ನು ಗೆದ್ದಿದ್ದರೆ ದೆಹಲಿಗೆ ಮೊದಲ ಸ್ಥಾನ ಪಡೆಯುವ ಅವಕಾಶವಿತ್ತು. ಆದರೆ ಅದು ಸಂಭವಿಸಲಿಲ್ಲ.
ಇದೀಗ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಮುಂಬೈ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಮುಂಬೈನ ನೆಟ್ ರನ್ರೇಟ್ ಕೂಡ (+)4.228 ಆಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಮುಂಬೈ ನಂತರ 4 ಅಂಕ ಹೊಂದಿರುವ ದೆಹಲಿ ತಂಡ (+)0.965 ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ
ಆರ್‌ಸಿಬಿಗೆ ಮೇಲಕ್ಕೇರುವ ಅವಕಾಶ
ಲೀಗ್‌ನ ಉಳಿದ ಮೂರು ತಂಡಗಳ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆ ಯುಪಿ ಮೂರನೇ, ಗುಜರಾತ್ ನಾಲ್ಕನೇ ಮತ್ತು ಬೆಂಗಳೂರು ಕೊನೆಯ ಸ್ಥಾನ ಪಡೆದುಕೊಂಡಿದೆ. ಆದರೆ, ಬೆಂಗಳೂರು ತಂಡಕ್ಕೆ ತನ್ನ ಸ್ಥಾನವನ್ನು ಸುಧಾರಿಸಿಕೊಳ್ಳಲು ಅವಕಾಶವಿದ್ದು, ಶುಕ್ರವಾರ, ಮಾರ್ಚ್ 10 ರಂದು ಬೆಂಗಳೂರು ತನ್ನ ನಾಲ್ಕನೇ ಪಂದ್ಯದಲ್ಲಿ ಯುಪಿ ವಿರುದ್ಧ ಸೆಣಸಲಿದೆ. ಬೆಂಗಳೂರು ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದ್ದರೆ, ಯುಪಿ ಎರಡರಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪುತ್ತದೆ. ಏಕೆಂದರೆ ಆರ್ಸಿಬಿಯ ನೆಟ್ ರನ್ರೇಟ್ ಗುಜರಾತ್‌ಗಿಂತ ಉತ್ತಮವಾಗಿದೆ. ಮತ್ತೊಂದೆಡೆ, ಯುಪಿ ಈ ಪಂದ್ಯವನ್ನು ಗೆದ್ದರೆ, ಅದು ದೆಹಲಿಯಿಂದ ಎರಡನೇ ಸ್ಥಾನವನ್ನು ಕಸಿದುಕೊಳ್ಳಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Fri, 10 March 23
