
ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಭಾರತ (India vs Australia) ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ICC World Test Championship) ಫೈನಲ್ ಸದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ತನ್ನ 2ನೇ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 270 ರನ್ ಕಲೆಹಾಕಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್ನ ಮುನ್ನಡೆಯನ್ನು ಸೇರಿಸಿದಂತೆ ಟೀಂ ಇಂಡಿಯಾಕ್ಕೆ ಬರೋಬ್ಬರಿ 444 ರನ್ಗಳ ಗೆಲುವಿನ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತಾದರೂ, ಆ ನಂತರ ಕೆಲವೇ ನಿಮಿಷಗಳಲ್ಲಿ ಒಂದರ ಹಿಂದೆ ಒಂದರಂತೆ ಪ್ರಮುಖ 3 ವಿಕೆಟ್ಗಳು ಉರುಳಿದವು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ಗಿಲ್ ಜೋಡಿ 41 ರನ್ಗಳ ಜೊತೆಯಾಟದ ನಂತರ ಮುರಿದು ಬಿತ್ತು. ಇಲ್ಲಿ 18 ರನ್ ಬಾರಿಸಿದ್ದ ಗಿಲ್ ಮತ್ತೊಮ್ಮ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆ ಬಳಿಕ ನಾಯಕ ರೋಹಿತ್ ಕೂಡ 43 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಅಂದರೆ ಕೇವಲ 1 ಓವರ್ ಅಂತರದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ (Cheteshwar Pujara) ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದು ಟೀಂ ಇಂಡಿಯಾ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
ವಾಸ್ತವವಾಗಿ ಪೂಜಾರ ಇಷ್ಟು ಕಳಪೆಯಾಗಿ ವಿಕೆಟ್ ಒಪ್ಪಿಸಿದನ್ನು ಟೀಂ ಇಂಡಿಯಾ ಅಭಿಮಾನಿಗಳ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದ್ದು, ಟೀಂ ಇಂಡಿಯಾದ ಇತರ ಆಟಗಾರರು ಐಪಿಎಲ್ ಆಡುತ್ತಿದ್ದರೆ, ಪೂಜಾರ ಮಾತ್ರ ಡಬ್ಲ್ಯುಟಿಸಿ ಫೈನಲ್ ತಯಾರಿಗಾಗಿಯೇ ಇಂಗ್ಲೆಂಡ್ನಲ್ಲಿ ತಿಂಗಳಿಗೂ ಮುನ್ನವೇ ಕೌಂಟಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ನಿರೀಕ್ಷೆಯಂತೆ ಪೂಜಾರ ಕೌಂಟಿ ಕ್ರಿಕೆಟ್ನಲ್ಲೂ 3 ಶತಕ ಸಿಡಿಸಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಆಸೀಸ್ ವಿರುದ್ಧದ ಈ ಫೈನಲ್ ಪಂದ್ಯದಲ್ಲಿ ಎಲ್ಲವೂ ಹುಸಿಯಾಗಿದೆ.
WTC Final 2023: ನಿರೀಕ್ಷೆ ಹುಸಿಗೊಳಿಸಿದ ಐಪಿಎಲ್ ಹೀರೋ ಶುಭ್ಮನ್ ಗಿಲ್
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ14 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ಪೂಜಾರ, ಎರಡನೇ ಇನ್ನಿಂಗ್ಸ್ನಲ್ಲಿ ಕೊಂಚ ಹೊತ್ತು ಮೈದಾನ ಕಚ್ಚಿ ಆಡಿದರಾದರೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಅಂತಿಮವಾಗಿ ಪೂಜಾರ 27 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾದ ಭರವಸೆಯ ಬ್ಯಾಟರ್ ಅತ್ಯಂತ ಪ್ರಮುಖ ಪಂದ್ಯದಲ್ಲಿ ಈ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೋಪ ತೊಡಿಕೊಂಡಿರುವ ಅಭಿಮಾನಿಗಳು ಪೂಜಾರ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವಂತೆ ಒತ್ತಾಯಿಸಿದ್ದಾರೆ. ಪೂಜಾರ ವಿರುದ್ಧ ಫ್ಯಾನ್ಸ್ ಯುದ್ಧ ಹೇಗಿದೆ ಎಂಬುದರ ಒಂದಿಷ್ಟು ಝಲಕ್ ಇಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ