
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2020ರ ಆಗಸ್ಟ್ 15 ಎಂದಿಗೂ ಮರೆಯಲಾಗದ ದಿನ. ಅಂದು ಟೀಮ್ ಇಂಡಿಯಾದ ದಿಗ್ಗಜ ನಾಯಕ ಎಂ.ಎಸ್. ಧೋನಿ ತಮ್ಮ ಅಂತರರಾಷ್ಟ್ರೀಯ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ, ಅವರ ಆಪ್ತ ಗೆಳೆಯ ಸುರೇಶ್ ರೈನಾ ಕೂಡ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿ ವಿದಾಯ ಹೇಳಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸುರೇಶ್ ರೈನಾ, ತಾವು ನಿವೃತ್ತಿ ಘೋಷಿಸಿದ ತಕ್ಷಣ ಧೋನಿ ಹೇಗೆ ಪ್ರತಿಕ್ರಿಯಿಸಿದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ 15ರ ಸಂಜೆ 7:29ಕ್ಕೆ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿವೃತ್ತಿಯ ಪೋಸ್ಟ್ ಹಾಕಿದ್ದರು. ಇದನ್ನು ನೋಡಿದ ತಕ್ಷಣ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು. ರೈನಾ ಅವರ ಈ ದಿಢೀರ್ ನಿರ್ಧಾರವನ್ನು ಕಂಡು ಧೋನಿ ಅಚ್ಚರಿಗೊಂಡರಂತೆ. ರೈನಾ ಅವರ ಬಳಿ ಬಂದ ಧೋನಿ, “ಯೇ ಕ್ಯಾ ಕಿಯಾ ತೂನೇ?” (ಯೇ, ಹೀಗೆಕೆ ಮಾಡಿದೆ ನೀನು) ಎಂದು ಆಘಾತದಿಂದ ಕೇಳಿದ್ದರು ಎಂದು ರೈನಾ ನೆನಪಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ಕ್ಯಾಂಪ್‌ನಲ್ಲಿ ನಡೆದ ಈ ಘಟನೆಯನ್ನು ನೆನೆದ ರೈನಾ, ನಿವೃತ್ತಿ ಘೋಷಣೆಯಾದ ಬೆನ್ನಲ್ಲೇ ಇಬ್ಬರೂ ಭಾವೋದ್ವೇಗಕ್ಕೆ ಒಳಗಾದರು ಎಂದಿದ್ದಾರೆ. “ನಾವು ನಮ್ಮ ನಿವೃತ್ತಿಯ ಪೋಸ್ಟ್ ಹಾಕಿದ ನಂತರ ಪರಸ್ಪರ ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದೆವು. ಅಂದು ರಾತ್ರಿ ನಮ್ಮ ಜೊತೆ ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಕೇದರ್ ಜಾಧವ್ ಮತ್ತು ಕರನ್ ಶರ್ಮಾ ಇದ್ದರು. ನಾವೆಲ್ಲರೂ ಒಟ್ಟಿಗೆ ಕುಳಿತು ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಡರಾತ್ರಿಯವರೆಗೆ ಪಾರ್ಟಿ ಮಾಡಿದೆವು,” ಎಂದು ರೈನಾ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದಂದೇ ಇಬ್ಬರೂ ಒಟ್ಟಿಗೆ ನಿವೃತ್ತಿ ಪಡೆಯಲು ಒಂದು ವಿಶೇಷವಾದ ಗಣಿತದ ಲೆಕ್ಕಾಚಾರವಿತ್ತು ಎಂಬುದನ್ನು ರೈನಾ ಬಹಿರಂಗಪಡಿಸಿದ್ದಾರೆ
ಇದನ್ನೂ ಓದಿ: ಇಂಗ್ಲೆಂಡ್ ತಂಡ ಪ್ರಕಟ: ಇಬ್ಬರು ಹೊಸ ಆಟಗಾರರು ಎಂಟ್ರಿ
ದೇಶದ ಮೇಲಿನ ಗೌರವ ಹಾಗೂ ತಮ್ಮ ಸ್ನೇಹದ ಸಂಕೇತವಾಗಿ ಈ ಅಪರೂಪದ ದಿನವನ್ನೇ ಇಬ್ಬರೂ ವಿದಾಯಕ್ಕೆ ಆರಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್‌ನ ‘ಜಯ್-ವೀರು’ ಎಂದೇ ಖ್ಯಾತರಾಗಿದ್ದ ಈ ಜೋಡಿ, ಮೈದಾನದಿಂದ ಒಟ್ಟಿಗೆ ಹೊರನಡೆದರೂ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಎಂದಿಗೂ ಅಮರ. ಇವರ ಅಪರೂಪದ ಸ್ನೇಹ ಮುಂದಿನ ಪೀಳಿಗೆಯ ಆಟಗಾರರಿಗೂ ಸದಾ ಸ್ಫೂರ್ತಿ.