Fifa World Cup 2022: ಫಿಫಾ ವಿಶ್ವಕಪ್ ಸಂಭ್ರಮಾಚರಣೆ ವೇಳೆ ಗಲಾಟೆ, ಒಬ್ಬ ವ್ಯಕ್ತಿಗೆ ಚೂರಿ ಇರಿತ, ಪೊಲೀಸರ ಮೇಲೆ ದಾಳಿ
ಫಿಫಾ ವಿಶ್ವಕಪ್ 2022ನಲ್ಲಿ ಅರ್ಜೆಂಟೀನಾ ಗೆದ್ದ ನಂತರ ಕೇರಳದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ಫುಟ್ಬಾಲ್ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಕಣ್ಣೂರಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಘಟನೆ ನಡೆದಿದೆ.
ಕೇರಳ: ಫಿಫಾ ವಿಶ್ವಕಪ್ 2022ನಲ್ಲಿ ಅರ್ಜೆಂಟೀನಾ ಗೆದ್ದ ನಂತರ ಕೇರಳದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ಫುಟ್ಬಾಲ್ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಕಣ್ಣೂರಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಘಟನೆ ನಡೆದಿದೆ. ಈ ಸಮಯದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಕೊಚ್ಚಿಯ ಕಾಲೂರಿನಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ವಾಹನಗಳನ್ನು ತಡೆಯದಂತೆ ಫುಟ್ಬಾಲ್ ಅಭಿಮಾನಿಗಳಲ್ಲಿ ಕೇಳಿಕೊಂಡಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಫುಟ್ಬಾಲ್ ಅಭಿಮಾನಿಗಳು ರಸ್ತೆಯಲ್ಲಿ ವಾಹನಗಳನ್ನು ತಡೆದು ಅರ್ಜೆಂಟೀನಾ ಗೆಲುವನ್ನು ಸಂಭ್ರಮಿಸುತ್ತಿದ್ದರು. ಇದನ್ನು ಕಂಡು ಪ್ರಶ್ನಿಸಲು ಮುಂದಾದಾಗ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದಾಡಿದ್ದಾರೆ.
ಕಣ್ಣೂರಿನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದ ಅನುರಾಗ್ (24) ಎಂಬಾತನಿಗೆ ಐವರು ಚಾಕುವಿನಿಂದ ಇರಿದಿದ್ದಾರೆ. ಪಳ್ಳಿಯಮೂಲ ನೇತಾಜಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಬಳಿ ಪಂದ್ಯದ ಪ್ರದರ್ಶನದ ನಂತರ ಜಗಳ ನಡೆದಿದ್ದು, ಚೂರಿ ಇರಿತಕ್ಕೆ ಕಾರಣವಾಯಿತು ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಅನುರಾಗ್ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳ ತಡೆಯಲು ಮುಂದಾದ ಆತನ ಸ್ನೇಹಿತರ ತಲೆಗೆ ಕ್ರಿಕೆಟ್ ಸ್ಟಂಪ್‌ನಿಂದ ಹೊಡೆದಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಈ ವಿಷಯದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ:ಫಿಫಾ ವಿಶ್ವಕಪ್ ಬಗ್ಗೆ ಗೂಗಲ್ನಲ್ಲಿ ಹುಡುಕಿದ್ದು 100 ಕೋಟಿಗೂ ಅಧಿಕ ಜನ
ತಿರುವನಂತಪುರಂನಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಕುಡುಕ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಅಧಿಕಾರಿಗಳಿಗೆ ಥಳಿಸಲಾಯಿತು ಮತ್ತು ಪೊಜಿಯೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಾಯಗೊಂಡಿದ್ದಾರೆ.
36 ವರ್ಷಗಳ ನಂತರ ಅರ್ಜೆಂಟೀನಾ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ 2022 ರ ಫಿಫಾ ವಿಶ್ವಕಪ್ ಭಾನುವಾರ ಮುಕ್ತಾಯಗೊಂಡಿತು. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿತು. ಪ್ರಪಂಚದ ಇತರ ಭಾಗಗಳಲ್ಲಿಯೂ, ಸಂಭ್ರಮಾಚಾರಣೆ ಹೊಡೆದಾಡಕ್ಕೆ ತಿರುಗಿದೆ ಎಂದು ಹೇಳಲಾಗಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Mon, 19 December 22