ಅರ್ಜೆಂಟೀನಾ ವಿರುದ್ಧ ಸೋತು ವಿಶ್ವಕಪ್‌ನಿಂದ ಹೊರಬಿದ್ದ ಭಾರತ ಹಾಕಿ ತಂಡ

FIH Hockey World Cup 2026: 2026ರ FIH ಹಾಕಿ ವಿಶ್ವಕಪ್‌ನಲ್ಲಿ ಭಾರತದ ಪುರುಷರ ತಂಡದ ಪ್ರಯಾಣ ಅಧಿಕೃತವಾಗಿ ಅಂತ್ಯಗೊಂಡಿದೆ. ನೆದರ್‌ಲ್ಯಾಂಡ್ಸ್ ಮತ್ತು ಅರ್ಜೆಂಟೀನಾ ವಿರುದ್ಧದ ಸೋಲುಗಳೊಂದಿಗೆ ಭಾರತ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ. ಅರ್ಜೆಂಟೀನಾ ಎದುರು 3-5 ಗೋಲುಗಳಿಂದ ಸೋತು ಪೂಲ್ 'ಇ' ನಲ್ಲಿ ಅಂಕಗಳ ಖಾತೆ ತೆರೆಯಲು ವಿಫಲವಾಗಿ ಕೊನೆಯ ಸ್ಥಾನದಲ್ಲಿದೆ. ಈಗ ಏಳನೇ ಸ್ಥಾನಕ್ಕಾಗಿ ಬೆಲ್ಜಿಯಂ ಎದುರು ಪ್ಲೇಆಫ್ ಪಂದ್ಯ ಆಡಲಿದೆ

ಅರ್ಜೆಂಟೀನಾ ವಿರುದ್ಧ ಸೋತು ವಿಶ್ವಕಪ್‌ನಿಂದ ಹೊರಬಿದ್ದ ಭಾರತ ಹಾಕಿ ತಂಡ
Hockey India

Updated on: Aug 24, 2026 | 10:09 PM

ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯುತ್ತಿರುವ 2026 ರ ಎಫ್ಐಎಚ್ ಹಾಕಿ ವಿಶ್ವಕಪ್‌ನಲ್ಲಿ (FIH Hockey World Cup 2026) ಭಾರತದ ಪುರುಷರ ತಂಡದ ಪ್ರಯಾಣ ಅಧಿಕೃತವಾಗಿ ಅಂತ್ಯಗೊಂಡಿದೆ. ಎರಡನೇ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಸೋತ್ತಿದ್ದ ಹರ್ಮನ್​ಪ್ರೀತ್ ಸಿಂಗ್ ಪಡೆ ಇಂದು ನಡೆದ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-5 ಅಂತರದಿಂದ ಸೋತು ಸೆಮಿಫೈನಲ್‌ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಪೂಲ್ ಇ ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

2 ತಂಡಗಳ ನಡುವೆ ಸೆಮೀಸ್ ರೇಸ್

ಪೂಲ್ ಇ ನಲ್ಲಿ ನೆದರ್‌ಲ್ಯಾಂಡ್ಸ್ ಅಗ್ರಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಇಂಗ್ಲೆಂಡ್‌ ಮೂರನೇ ಸ್ಥಾನದಲ್ಲಿದೆಯಾದರೂ ಸೆಮಿಫೈನಲ್‌ ರೇಸ್​ನಲ್ಲಿ ಇನ್ನು ಜೀವಂತವಾಗಿದೆ. ಎರಡನೇ ಸುತ್ತಿನಲ್ಲಿ ಇಂಗ್ಲೆಂಡ್​ಗೆ ಇನ್ನು ಒಂದು ಪಂದ್ಯ ಬಾಕಿ ಇದ್ದು, ಈ ಪಂದ್ಯದಲ್ಲಿ ಬಲಿಷ್ಠ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದರೆ, ಅರ್ಜೆಂಟೀನಾ ಸೆಮಿಫೈನಲ್‌ ರೇಸ್​ನಿಂದ ಹೊರಬೀಳಲಿದೆ. ಅಂತಿಮವಾಗಿ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಪೂಲ್ ಇ ನಿಂದ ಸೆಮಿಫೈನಲ್‌ಗೇರುತ್ತವೆ.

ಭಾರತ- ಅರ್ಜೆಂಟೀನಾ ಪಂದ್ಯ ಹೀಗಿತ್ತು

ಇನ್ನು ಭಾರತ ಹಾಗೂ ಅರ್ಜೆಂಟೀನಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೆ, ಅರ್ಜೆಂಟೀನಾ ಪರ ತೋಮಸ್ ಡೊಮೆನ್ (33ನೇ ಮತ್ತು 45ನೇ ನಿಮಿಷಗಳು) ಎರಡು ಗೋಲುಗಳನ್ನು ಬಾರಿಸಿದರೆ, ಜೋಕ್ವಿನ್ ಟೊಸ್ಕಾನಿ (1ನೇ ನಿಮಿಷ), ನಿಕೋಲಸ್ ಡೆಲ್ಲಾ ಟೊರೆ (6ನೇ ನಿಮಿಷ) ಮತ್ತು ಲ್ಯೂಕಾಸ್ ಟೊಸ್ಕಾನಿ (53ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.

ಇತ್ತ ಭಾರತ ಪರ ಸುಖ್ಜೀತ್ ಸಿಂಗ್ (10ನೇ ಮತ್ತು 58ನೇ ನಿಮಿಷ) ಎರಡು ಗೋಲುಗಳನ್ನು ಬಾರಿಸಿದರೆ, ಹಾರ್ದಿಕ್ ಸಿಂಗ್ (60ನೇ ನಿಮಿಷ) ಒಂದು ಗೋಲು ಬಾರಿಸಿದರು. ಈ ಸೋಲಿನೊಂದಿಗೆ, ಭಾರತ ತಂಡವು ಪೂಲ್ ಇ ನಲ್ಲಿ ತನ್ನ ಅಂಕಗಳ ಖಾತೆಯನ್ನು ತೆರೆಯಲು ವಿಫಲವಾಗಿ ಕೊನೆಯ ಸ್ಥಾನದಲ್ಲಿಯೇ ಉಳಿದಿದೆ. ಆಗಸ್ಟ್ 28 ರಂದು ಏಳನೇ ಸ್ಥಾನಕ್ಕಾಗಿ ನಡೆಯುವ ಪ್ಲೇಆಫ್ ಪಂದ್ಯದಲ್ಲಿ ಭಾರತ ಈಗ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ ಹಾಕಿ ತಂಡ

ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು?

ಮೊದಲ ಸುತ್ತಿನಲ್ಲಿ ವೇಲ್ಸ್ ತಂಡವನ್ನು 3-1 ಗೋಲುಗಳಿಂದ ಮಣಿಸುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಆರಂಭಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ 2-4 ಅಂತರದಲ್ಲಿ ಸೋತಿತು. ಈ ಸೋಲು ಪಂದ್ಯಾವಳಿಯಲ್ಲಿ ಭಾರತಕ್ಕೆ ಮಹತ್ವದ ತಿರುವು ನೀಡಿತು. ನಂತರ ಭಾರತ ಪಾಕಿಸ್ತಾನವನ್ನು 5-3 ಅಂತರದಿಂದ ಸೋಲಿಸಿತ್ತಾದರೂ ಆ ಗೆಲುವು ಸಾಕಾಗಲಿಲ್ಲ. ನಂತರ, ಎರಡನೇ ಸುತ್ತಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ನೆದರ್ಲ್ಯಾಂಡ್ಸ್ ವಿರುದ್ಧ 1-3 ಅಂತರದಿಂದ ಸೋತ್ತಿದ್ದ ಭಾರತ ಈಗ, ಅರ್ಜೆಂಟೀನಾ ವಿರುದ್ಧ 3-5 ಅಂತರದಿಂದ ಸೋತು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Mon, 24 August 26

Loading...
Unable to load recommendations.
Follow Us