ಭಾರತದ ಮುಂದಿನ ಏಕದಿನ ಸರಣಿ ಯಾವಾಗ? ರೋಹಿತ್, ಕೊಹ್ಲಿ ಆಡ್ತಾರಾ?
India's 2026 ODI Series: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ 2026ರ ಮೊದಲ ODI ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಸೋತಿತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡದಲ್ಲಿದ್ದರೂ ಗೆಲುವು ತರಲಾಗಲಿಲ್ಲ. ಈ ದಿಗ್ಗಜರು ಪ್ರಸ್ತುತ ಏಕದಿನ ಕ್ರಿಕೆಟ್ಗೆ ಮಾತ್ರ ಸೀಮಿತರಾಗಿದ್ದಾರೆ. ಟೀಂ ಇಂಡಿಯಾದ ಮುಂದಿನ ODI ಸರಣಿ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ಅಭಿಮಾನಿಗಳು ಅವರನ್ನು IPLನಲ್ಲಿಯೂ ನೋಡಬಹುದು.

ಶುಭ್ಮನ್ ಗಿಲ್ (Shubman Gill) ನಾಯಕತ್ವದ ಟೀಂ ಇಂಡಿಯಾ 2026 ರ ಮೊದಲ ಸರಣಿಯನ್ನು ಸೋತಿದ್ದು, ಸೋಲಿನೊಂದಿಗೆ ವರ್ಷವನ್ನು ಆರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತ್ತಾದರೂ ಆ ನಂತರ ನ್ಯೂಜಿಲೆಂಡ್ ಬಲವಾದ ಪುನರಾಗಮನ ಮಾಡಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾರಂತಹ (Rohit Sharma) ಅನುಭವಿಗಳು ಆಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಇಬ್ಬರು ದಿಗ್ಗಜರು ಇದೊಂದು ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಸಾಗರವೇ ಹರಿದಿತ್ತು. ಅದರಂತೆ ಕೊಹ್ಲಿ ತಮ್ಮ ಅನುಭವವನ್ನು ಧಾರೆ ಎರೆದರೆ, ರೋಹಿತ್ ಮಾತ್ರ ಸಪ್ಪೆ ಪ್ರದರ್ಶನ ನೀಡಿದರು. ಹೀಗಾಗಿ ತಂಡ ಸರಣಿ ಸೋತಿತ್ತು.
ಮೇಲೆ ಹೇಳಿದಂತೆ ವಿರಾಟ್ ಮತ್ತು ರೋಹಿತ್ ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿದ್ದಾರೆ. ಆದ್ದರಿಂದ, ಇಬ್ಬರೂ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡುತ್ತಾರೆ. ಆದ್ದರಿಂದ ಇವರಿಬ್ಬರು ಯಾವಾಗ ಮತ್ತೆ ಕಣಕ್ಕಿಳಿಯುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆ ಸರಣಿಯಲ್ಲಾದರೂ ರೋಹಿತ್ ಫಾರ್ಮ್ಗೆ ಮರಳುತ್ತಾರಾ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿ ಯಾವಾಗ? ಯಾರ ವಿರುದ್ಧ ಎಂಬುದನ್ನು ನೋಡುವುದಾದರೆ..
ಭಾರತದ ಮುಂದಿನ ಏಕದಿನ ಸರಣಿ ಯಾವಾಗ?
ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಗಾಗಿ ಭಾರತೀಯ ಅಭಿಮಾನಿಗಳು 1-2 ಅಲ್ಲ, 6 ತಿಂಗಳು ಕಾಯಬೇಕಾಗುತ್ತದೆ. ಟೀಂ ಇಂಡಿಯಾ ಜುಲೈ ತಿಂಗಳಲ್ಲಿ ಏಕದಿನ ಸರಣಿಯನ್ನು ಆಡಲಿದೆ. ಈ ಏಕದಿನ ಸರಣಿಯಲ್ಲಿ ಗಿಲ್ ಪಡೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ.
ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವು 5 ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಇದರ ನಂತರ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ರೋಹಿತ್ ಮತ್ತು ವಿರಾಟ್ ಇಬ್ಬರೂ ಈ ಸರಣಿಯಲ್ಲಿ ಆಡುವುದು ಖಚಿತ. ಹೀಗಾಗಿ ಅಭಿಮಾನಿಗಳು ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು 6 ತಿಂಗಳು ಕಾಯಬೇಕಾಗುತ್ತದೆ.
IND vs NZ: ವಾರಿಯರ್ ವಿರಾಟ್; ವಿಶ್ವ ದಾಖಲೆಯ ಶತಕ ಸಿಡಿಸಿದ ಕೊಹ್ಲಿ
ಭಾರತದ ಮುಂಬರುವ ಏಕದಿನ ಸರಣಿ ವೇಳಾಪಟ್ಟಿ
- ಭಾರತ vs ಇಂಗ್ಲೆಂಡ್, ಮೊದಲ ಪಂದ್ಯ, ಜುಲೈ 14, ಬರ್ಮಿಂಗ್ಹ್ಯಾಮ್
- ಭಾರತ vs ಇಂಗ್ಲೆಂಡ್, 2ನೇ ಪಂದ್ಯ, ಜುಲೈ 16, ಕಾರ್ಡಿಫ್
- ಭಾರತ vs ಇಂಗ್ಲೆಂಡ್, 3ನೇ ಪಂದ್ಯ, ಜುಲೈ 19, ಲಾರ್ಡ್ಸ್
ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ ರೋಹಿತ್-ವಿರಾಟ್
ಏತನ್ಮಧ್ಯೆ, ರೋಹಿತ್ ಮತ್ತು ವಿರಾಟ್ ಅವರನ್ನು ಟೀಂ ಇಂಡಿಯಾದ ಜೆರ್ಸಿಯಲ್ಲಿ ನೋಡಲು 6 ತಿಂಗಳು ಕಾಯಬೇಕಾಗುತ್ತದೆ. ಆದಾಗ್ಯೂ, ಇಬ್ಬರೂ ಐಪಿಎಲ್ ಪಂದ್ಯಾವಳಿಯಲ್ಲಿ ಮೈದಾನಕ್ಕೆ ಮರಳಲಿದ್ದಾರೆ. ಐಪಿಎಲ್ನ 19 ನೇ ಸೀಸನ್ ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ, ರೋಹಿತ್ ಮುಂಬೈ ಪರ ಮತ್ತು ವಿರಾಟ್ ಆರ್ಸಿಬಿ ಪರ ಆಡುವುದನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
