India vs England 3rd Test: 51 ವರ್ಷಗಳಿಂದ ಈ ಪಿಚ್ನಲ್ಲಿ ಭಾರತ ಸೋಲಿಲ್ಲದ ಸರದಾರ
India vs England 3rd Test: ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ಇನ್ನಿಂಗ್ಸ್ ಕೇವಲ 67 ರನ್‌ಗಳಿಗೆ ಅಂತ್ಯಗೊಂಡಿತ್ತು. ಇನ್ನು ಈ ಮೈದಾನದಲ್ಲಿ ಇಂಗ್ಲೆಂಡ್ ಆಡಿದ ಕೊನೆಯ 10 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ.
India vs England 3rd Test: ಕ್ರಿಕೆಟ್ ಕಾಶಿ ಲಾರ್ಡ್ಸ್ (Lords Test) ಮೈದಾನದಲ್ಲಿ ಇಂಗ್ಲೆಂಡ್ (England) ವಿರುದ್ಧದ ಐತಿಹಾಸಿಕ ಗೆಲುವಿನ ಬಳಿಕ ಇದೀಗ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಬುಧವಾರ ಆರಂಭವಾಗಲಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ ಗೆಲುವು ದಾಖಲಿಸಿದರೆ ಸರಣಿ ಸೋಲಿನಿಂದ ಪಾರಾಗಬಹುದು. ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವು ಡ್ರಾ ಆಗಿದ್ದು, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಇದೀಗ 1-0 ಮುನ್ನಡೆ ಹೊಂದಿರುವ ಭಾರತ ಹೆಡಿಂಗ್ಲೆ ಮೈದಾನದಲ್ಲಿ ಮೂರನೇ ಟೆಸ್ಟ್ (3rd Test) ಪಂದ್ಯ ಆಡಲಿದೆ. ಅತ್ತ ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ತಂಡಕ್ಕೆ ಪ್ಲೇಯಿಂಗ್ ಇಲೆವೆನ್ ಚಿಂತೆಯಾದರೆ, ಇತ್ತ ಆತಿಥೇಯರ ವಿರುದ್ದ ಭರ್ಜರಿ ಪ್ರದರ್ಶನ ನೀಡಿ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲೂ ಭಾರತ ತಂಡದಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇನ್ನು ಈ ಪಂದ್ಯದ ಮೂಲಕ ಹೆಡಿಂಗ್ಲೆ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ತಂಡಗಳು 19 ವರ್ಷಗಳ ಮುಖಾಮುಖಿಯಾಗುತ್ತಿರುವುದು ಮತ್ತೊಂದು ವಿಶೇಷ.
2002 ರಲ್ಲಿ ಸೌರವ್ ಗಂಗೂಲಿ (Sourav Ganguly) ನೇತೃತ್ವದ ಟೀಂ ಇಂಡಿಯಾ ಕೊನೆಯ ಬಾರಿಗೆ ಈ ಮೈದಾನಕ್ಕೆ ಆಡಿತ್ತು. ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದಾದಾ ಪಡೆ ಆತಿಥೇಯರನ್ನು ಇನ್ನಿಂಗ್ಸ್ ಮತ್ತು 46 ರನ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar), ರಾಹುಲ್ ದ್ರಾವಿಡ್ (Rahul Dravid) ಮತ್ತು ಸೌರವ್ ಗಂಗೂಲಿ ಭಾರತ ಪರ ಶತಕ ಬಾರಿಸಿದ್ದರು. ಆದರೆ ಅಂದು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಯಾವೊಬ್ಬ ಆಟಗಾರ ಕೂಡ ಇಂದು ತಂಡದಲ್ಲಿಲ್ಲ ಎಂಬುದು ವಿಶೇಷ. ಹೀಗಾಗಿ ಪ್ರಸ್ತುತ ಟೀಮ್ ಇಂಡಿಯಾ ಆಟಗಾರರು ಹೆಡಿಂಗ್ಲೆ ಮೈದಾನದಲ್ಲಿ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ. ಅದರಂತೆ ಈ ಬಾರಿ ಅಭಿಮಾನಿಗಳು ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಿಂದ ಶತಕವನ್ನು ನಿರೀಕ್ಷಿಸುತ್ತಿದ್ದಾರೆ. 2002 ಕ್ಕಿಂತ ಮೊದಲು, 1986 ರಲ್ಲಿ ಕೂಡ ಭಾರತವು ಈ ಮೈದಾನದಲ್ಲಿ ಆಡಿದ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. 1979 ರಲ್ಲಿ ಆಡಿದ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.
ಒಂದಾರ್ಥದಲ್ಲಿ ಈ ಮೈದಾನದಲ್ಲಿ ಇಂಗ್ಲೆಂಡ್ ದಾಖಲೆಗಿಂತ ಭಾರತದ ಪ್ರದರ್ಶನ ಉತ್ತಮವಾಗಿದೆ. ಏಕೆಂದರೆ ಕಳೆದ 51 ವರ್ಷಗಳಿಂದ ಭಾರತ ಈ ಹೆಡಿಂಗ್ಲೆ ಮೈದಾನದಲ್ಲಿ ಸೋಲನುಭವಿಸಿಲ್ಲ. ಟೀಮ್ ಇಂಡಿಯಾ ಈ ಗ್ರೌಂಡ್ನಲ್ಲಿ ಕೊನೆಯ ಬಾರಿ ಸೋತಿದ್ದು 1967 ರಲ್ಲಿ. ಆ ಬಳಿಕ ಭಾರತ ಮೂರು ಪಂದ್ಯಗಳಲ್ಲಿ ಹಿಡಿತ ಸಾಧಿಸಿದೆ. ಅದರಲ್ಲಿ ಎರಡು ಜಯ ದಕ್ಕಿದರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು ಹೆಡಿಂಗ್ಲೆ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಇದುವರೆಗೆ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಅದರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಆ ಬಳಿಕ ಹೆಡಿಂಗ್ಲೆ ಪಿಚ್ನಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಸಾಧಿಸುತ್ತಾ ಬಂದಿದೆ.
ಈ ಪಿಚ್ ಬ್ಯಾಟಿಂಗ್ಗೆ ತುಸು ಕಷ್ಟಕರ. ಇದಕ್ಕೆ ಸಾಕ್ಷಿಯೇ ಇದೇ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿರೋದು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ಇನ್ನಿಂಗ್ಸ್ ಕೇವಲ 67 ರನ್‌ಗಳಿಗೆ ಅಂತ್ಯಗೊಂಡಿತ್ತು. ಇನ್ನು ಈ ಮೈದಾನದಲ್ಲಿ ಇಂಗ್ಲೆಂಡ್ ಆಡಿದ ಕೊನೆಯ 10 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. ಇದಾಗ್ಯೂ ಕೊನೆಯ 2 ಪಂದ್ಯಗಳಲ್ಲಿ ಆತಿಥೇಯರು ಇಲ್ಲಿ ಗೆದ್ದಿದ್ದಾರೆ. ಆದರೆ ಪ್ರಸ್ತುತ ಫಾರ್ಮ್ ಮತ್ತು ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ತಂಡ ಮತ್ತೆ ಪಾರುಪತ್ಯ ಮಾಡಲಿದೆ ಎಂದೇ ಹೇಳಬಹುದು.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(India vs England 3rd Test: India has not lost at Headingley for 51 years)