ಲಂಡನ್ ಒಲಿಂಪಿಕ್ಸ್​: ಆಂಗ್ಲರ ನಾಡಿನಲ್ಲಿ ಮಿಂಚಿದ ಭಾರತೀಯರು

Paris Olympics 2024: 33ನೇ ವಿಶ್ವ ಕ್ರೀಡಾಕೂಟಕ್ಕೆ ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್ ಸಜ್ಜಾಗಿದೆ. ಈಗಾಗಲೇ ಕೆಲ ಕ್ರೀಡೆಗಳು ಶುರುವಾಗಿದ್ದು, ಇನ್ನುಳಿದ ಸ್ಪರ್ಧೆಗಳು ಶುಕ್ರವಾರದಿಂದ ಶುರುವಾಗಲಿದೆ. ವಿಶೇಷ ಎಂದರೆ ಈ ಬಾರಿ ಭಾರತದ 117 ಕ್ರೀಡಾಪಟುಗಳು ಕಣದಲ್ಲಿದ್ದಾರೆ. ಹೀಗಾಗಿ ಲಂಡನ್ ಒಲಿಂಪಿಕ್ಸ್​ನಂತೆ ಈ ಬಾರಿ ಕೂಡ ಹೆಚ್ಚಿನ ಪದಕ ನಿರೀಕ್ಷಿಸಬಹುದು.

ಲಂಡನ್ ಒಲಿಂಪಿಕ್ಸ್​: ಆಂಗ್ಲರ ನಾಡಿನಲ್ಲಿ ಮಿಂಚಿದ ಭಾರತೀಯರು
London Olympics-Sushil Kumar
Follow us
|

Updated on: Jul 25, 2024 | 2:05 PM

2012ರ ಒಲಿಂಪಿಕ್ಸ್​ಗೆ ಇಂಗ್ಲೆಂಡ್​ ಆತಿಥ್ಯವಹಿಸಿತ್ತು. ಲಂಡನ್​ನಲ್ಲಿ ನಡೆದ ಈ ಕ್ರೀಡಾಕೂಟವನ್ನು ಭಾರತದ ಎರಡನೇ ಅತ್ಯಂತ ಯಶಸ್ವಿ ಮತ್ತು ಐತಿಹಾಸಿಕ ಒಲಿಂಪಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಒಲಿಂಪಿಕ್ಸ್​ನಲ್ಲಿ ಭಾರತವು 6 ಪದಕಗಳನ್ನು ಗೆದ್ದುಕೊಂಡಿತ್ತು. ಲಂಡನ್​ ಒಲಿಂಪಿಕ್ಸ್​ನಲ್ಲಿ ಭಾರತದಿಂದ ಒಟ್ಟು 83 ಕ್ರೀಡಾಪಟುಗಳು 13 ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಈ 83 ಕ್ರೀಡಾಪಟುಗಳಲ್ಲಿ 60 ಪುರುಷ ಮತ್ತು 23 ಮಹಿಳಾ ಕ್ರೀಡಾಪಟುಗಳು ಸೇರಿದ್ದಾರೆ.

ವಿಶೇಷ ಎಂದರೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಡೋಪಿಂಗ್ ಆರೋಪದ ನಂತರ, ಎರಡು ವರ್ಷಗಳ ಅಂತರರಾಷ್ಟ್ರೀಯ ಅಮಾನತು ಎದುರಿಸಿದ ಭಾರತವು ಇದೇ ವರ್ಷ ವೇಟ್‌ಲಿಫ್ಟಿಂಗ್‌ನಲ್ಲಿ ಪುನರಾಗಮನ ಮಾಡಿತ್ತು. ಅಲ್ಲದೆ ಇದೇ ಒಲಿಂಪಿಕ್ಸ್ ಮೂಲಕ ಬಾಕ್ಸರ್ ಮೇರಿ ಕೋಮ್ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮನೆಮಾತಾಗಿದ್ದರು.

ಲಂಡನ್​ನಲ್ಲಿ ಮಿಂಚಿದ ಭಾರತೀಯರು:

ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸೈನಾ ಸಂಚಲನ ಸೃಷ್ಟಿಸಿದ್ದರು. ಇನ್ನು ಮೇರಿ ಕೋಮ್ ಬಾಕ್ಸಿಂಗ್​ನಲ್ಲಿ ಕಂಚಿನ ಪದಕದೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದರು.

ಗುರಿ ತಪ್ಪದ ಶೂಟಿಂಗ್:

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರು. ಆದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅಂತಿಮ ಸುತ್ತಿಗೆ ತಲುಪಲು ಸಾಧ್ಯವಾಗಲಿಲ್ಲ.

ಆದರೆ ಈ ಬಾರಿ ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ಈ ಜವಾಬ್ದಾರಿಯನ್ನು ವಹಿಸಿಕೊಂಡರು. ನಾರಂಗ್ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ವಿಜಯ್ ಕುಮಾರ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಸೈನಿಕ

ಇತಿಹಾಸ ಬರೆದ ಸುಶೀಲ್ ಕುಮಾರ್:

ಬ್ಯಾಡ್ಮಿಂಟನ್, ಬಾಕ್ಸಿಂಗ್ ಮತ್ತು ಶೂಟಿಂಗ್ ತಂಡಗಳ ಸಾಧನೆಗಳ ನಂತರ, ಭಾರತೀಯ ಕುಸ್ತಿಪಟುಗಳು ಮಿಂಚಿಲಾರಂಭಿಸಿದರು. ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ತಲಾ ಒಂದು ಪದಕ ಗೆದ್ದರು. 60 ಕೆಜಿ ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಯೋಗೇಶ್ವರ್ ದತ್ ಅವರು ಉತ್ತರ ಕೊರಿಯಾದ ಜೊಂಗ್ ಮ್ಯೋಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರೆ, ಸುಶೀಲ್ ಕುಮಾರ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ ಲಂಡನ್ ಒಲಿಂಪಿಕ್ಸ್​ನಲ್ಲಿ ಭಾರತೀಯರು 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದು ಭಾರತಕ್ಕೆ ಮರಳಿದ್ದರು.