Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಮೊದಲ ಪಂದ್ಯದಲ್ಲೇ ವಿವಾದ..!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಫುಟ್​ಬಾಲ್ ಟೂರ್ನಿಯ ಮೊದಲ ಪಂದ್ಯವೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಮ್ಯಾಚ್ ರೆಫರಿ ಮಾಡಿದ ಎಡವಟ್ಟು ಎನ್ನಲಾಗುತ್ತಿದೆ. ಈ ಎಡವಟ್ಟಿನಿಂದಾಗಿ ಶುರುವಾದ ದಾಂಧಲೆಯಿಂದಾಗಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆದರೆ ಬಳಿಕ ಪಂದ್ಯ ಪೂರ್ಣಗೊಳಿಸಿದರೂ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಮೊದಲ ಪಂದ್ಯದಲ್ಲೇ ವಿವಾದ..!
Argentina vs Morocco
Follow us
|

Updated on:Jul 25, 2024 | 11:01 AM

ಫುಟ್​ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ 2024 ಕ್ಕೆ ಚಾಲನೆ ನೀಡಲಾಗಿದೆ. ಬುಧವಾರ ನಡೆದ ಮಹಾ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಈ ಪಂದ್ಯವು ವಿವಾದ ಕಾರಣದಿಂದಾಗಿ ಇಡೀ ವಿಶ್ವದ ಗಮನ ಸೆಳೆದಿರುವುದು ವಿಶೇಷ. ಸ್ಟೇಡ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.  ಉಭಯ ತಂಡಗಳ ನಡುವೆ ಕಂಡು ಬಂದ ಉತ್ತಮ ಪೈಪೋಟಿ ನಡುವೆ ಮೊರಾಕ್ಕೊ ತಂಡದ ಮುನ್ಪಡೆ ಆಟಗಾರ ಸೋಫಿಯಾನೆ ರಹೀಮಿ ಮೊದಲ ಗೋಲು ದಾಖಲಿಸಿದರು.

ಇದರ ಬೆನ್ನಲ್ಲೇ ಸಿಕ್ಕ ಪೆನಾಲ್ಟಿ ಶೂಟೌಟ್​ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ರಹೀಮಿ ಯಶಸ್ವಿಯಾದರು. ಅದರಂತೆ ಮೊರಾಕ್ಕೊ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ ಅಂತಿಮ ಹಂತದಲ್ಲಿ ಅರ್ಜೆಂಟೀನಾ ಆಟಗಾರ ಸಿಮಿಯೋನ್ ಬಾರಿಸಿದ ಚೆಂಡು ಮೊರಾಕ್ಕೊ ಗೋಲ್ ಕೀಪರ್​ ಅನ್ನು ವಂಚಿಸಿ ಬಲೆಯೊಳಗೆ ಸೇರಿತು. ಇದರೊಂದಿಗೆ ಪಂದ್ಯವು 2-1 ಗೋಲುಗಳ ಅಂತರಕ್ಕೇರಿತು. ಇದಾಗ್ಯೂ ಮೊರಾಕ್ಕೊ ತಂಡವು ಪಂದ್ಯ ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ 90 ನಿಮಿಷಗಳ ಪಂದ್ಯ ಮುಗಿದ ಬಳಿಕ ಮ್ಯಾಚ್ ರೆಫರಿ ಹೆಚ್ಚುವರಿ 15 ನಿಮಿಷಗಳ ಕಾಲ ಆಟವನ್ನು ಮುಂದುವರೆಸಿದರು.

ಹೆಚ್ಚುವರಿ ನಿಮಿಷದಲ್ಲಿ ಗೋಲು:

ಹೆಚ್ಚುವರಿಯಾಗಿ ನೀಡಲಾದ ಸಮಯದಲ್ಲಿ ಗೋಲು ದಾಖಲಿಸುವಲ್ಲಿ ಅರ್ಜೆಂಟೀನಾ ಯಶಸ್ವಿಯಾಯಿತು. ಇದರೊಂದಿಗೆ ಪಂದ್ಯವು 2-2 ಗೋಲುಗಳೊಂದಿಗೆ ಸಮಗೊಂಡಿತು. ಆದರೆ ಇಲ್ಲಿ ಮ್ಯಾಚ್ ರೆಫರಿ 15 ನಿಮಿಷಗಳ ಹೆಚ್ಚುವರಿ ಸಮಯ ನೀಡಿದಕ್ಕೆ ಮೊರಾಕ್ಕೊ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.

ಕೇವಲ ಐದಾರು ನಿಮಿಷಗಳಿಗೆ ಸೀಮಿತವಾಗಬೇಕಿದ್ದ ಹೆಚ್ಚುವರಿ ಸಮಯವನ್ನು ಮ್ಯಾಚ್ ರೆಫರಿ ಅರ್ಜೆಂಟೀನಾ ತಂಡಕ್ಕೆ ಅನುಕೂಲವಾಗಲೆಂದೇ 15 ನಿಮಿಷಗಳವರೆಗೆ ಕೊಂಡೊಯ್ದಿದ್ದಾರೆ ಎಂಬುದು ಮೊರಾಕ್ಕೊ ಅಭಿಮಾನಿಗಳ ವಾದವಾಗಿತ್ತು.

ಈ ವಾದದೊಂದಿಗೆ ಮೊರಾಕ್ಕೊ ಅಭಿಮಾನಿಗಳು ಸ್ಟೇಡಿಯಂನಲ್ಲಿ ದಾಂಧಲೆ ಆರಂಭಿಸಿದ್ದರು. ಕೆಲ ಅಭಿಮಾನಿಗಳು ಮೈದಾನಕ್ಕೆ ನುಗ್ಗುವ ಮೂಲಕ ಆಟಕ್ಕೆ ಅಡ್ಡಿಪಡಿಸಿದರು. ಇನ್ನು ಕೆಲವರು ಮೈದಾನಕ್ಕೆ ರಾಕೆಟ್​ಗಳನ್ನು (ಪಟಾಕಿ) ಬಿಟ್ಟು ಮತ್ತು ಬಾಟಲಿಗಳನ್ನು ಎಸೆದು ಅರ್ಜೆಂಟೀನಾ ಆಟಗಾರರನ್ನು ಗುರಿಯಾಗಿಸಿಕೊಂಡರು.

ಪಂದ್ಯ ಸ್ಥಗಿತ:

ಮುಕ್ತಾಯಕ್ಕೆ ಕೇವಲ 3 ನಿಮಿಷಗಳಿರುವಾಗ ಕಂಡು ಬಂದ ಈ ದಾಂಧಲೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಅಲ್ಲದೆ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರಹೋಗುವಂತೆ ವಿಡಿಯೋ ಬೋರ್ಡ್‌ಗಳಲ್ಲಿ ಪ್ರಕಟಿಸಲಾಯಿತು. ಅಲ್ಲಿಗೆ ಅರ್ಜೆಂಟೀನಾ ಹಾಗೂ ಮೊರಾಕ್ಕೊ ಪಂದ್ಯವು ವಿವಾದದೊಂದಿಗೆ ಕೊನೆಗೊಂಡಿತು ಎಂದು ಎಲ್ಲರೂ ಭಾವಿಸಿದ್ದರು.

ಗೆದ್ದ ಮೊರಾಕ್ಕೊ:

ಪಂದ್ಯ ಸ್ಥಗಿತದ 2 ಗಂಟೆಯ ಬಳಿಕ ಉಭಯ ತಂಡಗಳ ಆಟಗಾರರು ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡರು. ಈ ವೇಳೆ 105ನೇ ನಿಮಿಷದಲ್ಲಿ ಬಾರಿಸಲಾದ ಗೋಲಿನ VAR ಪರಿಶೀಲಿಸಲಾಗಿದೆ. ಇದೇ ವೇಳೆ ಅರ್ಜೆಂಟೀನಾ ಆಟಗಾರ ಆಫ್ ಸೈಡ್ ಆಗಿರುವುದು ಕಂಡು ಬಂದಿದೆ. ಹೀಗಾಗಿ ಅರ್ಜೆಂಟೀನಾ ಆಟಗಾರ ಬಾರಿಸಿದ 2ನೇ ಗೋಲನ್ನು ಅಸಿಂಧು ಗೊಳಿಸಲಾಯಿತು. ಆ ಬಳಿಕ ಮೂರು ನಿಮಿಷಗಳ ಆಟವನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಅರ್ಜೆಂಟೀನಾ ವಿರುದ್ಧ ಮೊರಾಕ್ಕೊ ತಂಡವು 1-2 ಅಂತರದಿಂದ ಗೆಲುವು ದಾಖಲಿಸಿದೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?

ಮುಗಿಯದ ವಿವಾದ:

ಮೊದಲ ಪಂದ್ಯವು ಮುಗಿದರೂ ವಿವಾದ ಮಾತ್ರ ಮುಗಿದಿಲ್ಲ. ಪಂದ್ಯ ಸ್ಥಗಿತಗೊಳಿಸಿ 2 ಗಂಟೆಗಳ ಬಳಿಕ VAR ಪರಿಶೀಲಿಸಿ ತೀರ್ಪು ನೀಡಿರುವ ಮ್ಯಾಚ್ ರೆಫರಿಯ ನಿರ್ಧಾರದ ಬಗ್ಗೆ ಅರ್ಜೆಂಟೀನಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅತ್ತ ಅರ್ಜೆಂಟೀನಾ ತಂಡಕ್ಕೆ ಹೆಚ್ಚುವರಿ ನಿಮಿಷಗಳ ಮೂಲಕ ರೆಫರಿ ಪಂದ್ಯ ಗೆಲ್ಲಿಸಿಕೊಡಲು ಅನುಕೂಲ ಮಾಡಿಕೊಟ್ಟಿದ್ದರು ಎಂಬ ವಾದವನ್ನು ಮೊರಾಕ್ಕೊ ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ನ ಮೊದಲ ಪಂದ್ಯ ವಿವಾದಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

Published On - 10:59 am, Thu, 25 July 24