Neeraj Chopra Classic: 2 ಸಾವಿರ ರೂ. ಹಣ ಕೇಳಿದ ಅಭಿಮಾನಿಗೆ ನೀರಜ್ ಚೋಪ್ರಾ ಹೇಳಿದ್ದೇನು ಗೊತ್ತಾ?
Neeraj Chopra Classic: ಬೆಂಗಳೂರಿನಲ್ಲಿ ಜುಲೈ 5 ರಿಂದ ನೀರಜ್ ಚೋಪ್ರಾ ಕ್ಲಾಸಿಕ್ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆ ಆರಂಭವಾಗಲಿದೆ. ವಿಶ್ವದ ಪ್ರಮುಖ ಜಾವೆಲಿನ್ ಎಸೆತಗಾರರು ಮತ್ತು ಐದು ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. ಒಬ್ಬ ಅಭಿಮಾನಿ ಸ್ಪರ್ಧೆ ವೀಕ್ಷಿಸಲು ಹಣದ ಅವಶ್ಯಕತೆ ಇರುವುದಾಗಿ ಟ್ವೀಟ್ ಮಾಡಿದ್ದು, ನೀರಜ್ ಚೋಪ್ರಾ ಅವರು ಅವರ ಪ್ರಯಾಣದ ವೆಚ್ಚವನ್ನು ಭರಿಸುವುದಾಗಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜುಲೈ 5 ರಿಂದ ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ (Neeraj Chopra Classic 2025) ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ವಿಶ್ವದ ಅನೇಕ ಸ್ಟಾರ್ ಜಾವೆಲಿನ್ ಎಸೆತಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದಲ್ಲದೆ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ ಐವರು ಭಾರತೀಯ ಆಟಗಾರರು ಸಹ ಇದರಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅನುಮೋದನೆ ನೀಡಿದೆ. ಹೀಗಾಗಿ ಈ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದ್ದು, ಇದೀಗ ಈ ಸ್ಪರ್ಧೆಯನ್ನು ವೀಕ್ಷಿಸಲು ಅಭಿಮಾನಿಯೊಬ್ಬರು 2000 ರೂ. ಸಹಾಯ ಕೇಳಿ ಟ್ವೀಟ್ ಮಾಡಿದ್ದು. ಈ ಟ್ವೀಟ್‌ಗೆ ನೀರಜ್ ಚೋಪ್ರಾ ನೀಡಿರುವ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಶೇಷ ಉಡುಗೊರೆ ನೀಡಿದ ನೀರಜ್ ಚೋಪ್ರಾ
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 12 ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಯನ್ನು ವೀಕ್ಷಿಸಲು, ಕೊಯಮತ್ತೂರಿನ ರಂಜಿತ್ ಎಂಬ ಅಭಿಮಾನಿ ಸಾಮಾಜಿಕ ಮಾಧ್ಯಮ ‘X’ ನಲ್ಲಿ ‘ಯಾರಾದರೂ ನನಗೆ 2000 ರೂಪಾಯಿ ನೀಡಿದರೆ, ನಾನು ಕೊಯಮತ್ತೂರಿನಿಂದ ಈ ಸ್ಪರ್ಧೆಯನ್ನು ವೀಕ್ಷಿಸಲು ಬೆಂಗಳೂರಿಗೆ ಹೋಗಬಹುದು’ ಎಂದು ಟ್ವೀಟ್ ಮಾಡಿದ್ದಾರೆ.
If anyone sponsor me 2000 rupees, I can go to watch this from Coimbatore🙂🙂🙂 https://t.co/2nMt7lAUrs
— Ranjith (@iam_rrt) June 25, 2025
ಈ ಟ್ವೀಟ್ ನೋಡಿದ ನೀರಜ್ ಚೋಪ್ರಾ, ಆ ಅಭಿಮಾನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಆ ಅಭಿಮಾನಿಯ ಟ್ವೀಟ್‌ಗೆ ರೀ ಟ್ವೀಟ್ ಮಾಡಿರುವ ನೀರಜ್, ‘ನಮಸ್ತೆ, ರಂಜಿತ್. ಬೆಂಗಳೂರಿನಲ್ಲಿ ನಿಮಗೆ ವಿವಿಐಪಿ ಅನುಭವ ಕಾಯುತ್ತಿದೆ. ಏಕೆಂದರೆ ನಿಮ್ಮ ಪ್ರವಾಸದ ಖರ್ಚನ್ನು ನಾನು ಬರಿಸಲಿದ್ದೇನೆ. ನೀವು ನನ್ನಿಂದ ಸುಮಾರು 90 ಮೀಟರ್ ದೂರದಲ್ಲಿದ್ದೀರಿ. ಶೀಘ್ರದಲ್ಲೇ ಭೇಟಿಯಾಗುತ್ತೇನೆ! ಎಂದು ಬರೆದುಕೊಂಡಿದ್ದಾರೆ. ಇದೀಗ ನೀರಜ್ ಅವರ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಯ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಎಲ್ಲರೂ ನೀರಜ್ ಚೋಪ್ರಾ ಅವರನ್ನು ಹೊಗಳುತ್ತಿದ್ದಾರೆ.
Hi, Ranjith. You’ve got a full VVIP experience waiting for you in Bengaluru because your trip to the @nc_classic is on me! 😊
And thanks to @RadissonHotels, you’ll be staying about 90 metres away from me. See you soon! 😉 https://t.co/aQvkNEnLry
— Neeraj Chopra (@Neeraj_chopra1) June 27, 2025
ಯಾರ್ಯಾರು ಭಾಗವಹಿಸುತ್ತಿದ್ದಾರೆ?
ಇನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ, ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್, 2016 ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಜರ್ಮನಿಯ ಥಾಮಸ್ ರೋಹ್ಲರ್, 2015 ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಂಪ್ಸನ್, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಜಪಾನ್‌ನ ಜೆಂಕಿ ಡೀನ್, ಶ್ರೀಲಂಕಾದ ರುಮೇಶ್ ಪತಿರಾಜ್ ಮತ್ತು ಬ್ರೆಜಿಲ್‌ನ ಲೂಯಿಜ್ ಮೌರಿಸಿಯೊ ಡಾ ಸಿಲ್ವಾ ಭಾಗವಹಿಸುತ್ತಿದ್ದಾರೆ. ನೀರಜ್ ಚೋಪ್ರಾ ಅವರಲ್ಲದೆ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್ ಯಾದವ್, ಕಿಶೋರ್ ಜೆನಾ, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಭಾರತದಿಂದ ಭಾಗವಹಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
