India vs Australia Test Series | ಆಶ್ವಿನ್ ಮತ್ತು ವಿಹಾರಿ ಉತ್ತಮ ಆಟ, ನೆನಪಾಯ್ತು 1981ರ ಅಡಿಲೇಡ್ ಟೆಸ್ಟ್

ಪಂದ್ಯದ ಕೊನೆಯ ದಿನ ಭಾರತಕ್ಕೆ ಗೆಲ್ಲಲು 331 ರನ್​ಗಳ ಅವಶ್ಯಕತೆಯಿತ್ತು. ಪ್ರಮುಖ ಬ್ಯಾಟ್ಸ್​ಮನ್​​ಳಾಗಿದ್ದ ಸುನಿಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್, ದಿಲಿಪ್ ವೆಂಗ್​ಸರ್ಕಾರ್ ಮತ್ತು ಸಂದೀಪ್ ಪಾಟೀಲ್ ಭಾರತ ಮೊತ್ತ 90 ರನ್​ಗಳಾಗುವಷ್ಟರಲ್ಲಿ ಔಟಾಗಿ ಬಿಟ್ಟಿದ್ದರು. ಅತಿಥೇಯರು ಗೆಲುವಿನ ಹೊಸ್ತಿಲಲ್ಲಿದ್ದರು.

India vs Australia Test Series | ಆಶ್ವಿನ್ ಮತ್ತು ವಿಹಾರಿ ಉತ್ತಮ ಆಟ, ನೆನಪಾಯ್ತು 1981ರ ಅಡಿಲೇಡ್ ಟೆಸ್ಟ್
ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 11, 2021 | 7:07 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿಂದು ಡ್ರಾನಲ್ಲಿ ಕೊನೆಗೊಂಡ ಮೂರನೆ ಟೆಸ್ಟ್​ ಪಂದ್ಯ ನಿಸ್ಸಂದೇಹವಾಗಿಯೂ ರೋಚಕವಾಗಿತ್ತು. ಕೊನೆಯ ದಿನದಾಟದಲ್ಲಿ ರಿಷಭ್ ಪಂತ್ ಔಟಾದ ನಂತರ ಪಂದ್ಯ ಉಳಿಸಿಕೊಳ್ಳುವತ್ತ ಗಮನ ನೀಡಿದ ಭಾರತೀಯ ಆಟಗಾರರು ರನ್ ಗಳಿಸುವ ಪ್ರಯತ್ನ ಮಾಡದಿದ್ದುದರಿಂದ ಸೀಮಿತ ಓವರ್​ಗಳ ಪಂದ್ಯಗಳನ್ನು ನೋಡಿ ಫಲಿತಾಂಶವನ್ನು ಎದುರು ನೋಡುವ ಪರಿಪಾಠ ಬೆಳೆಸಿಕೊಂಡಿರುವ ಯುವ ಕ್ರಿಕೆಟ್​ ಪ್ರೇಮಿಗಳಿಗೆ ಆಟದ ಗತಿ ಬೋರು ಹೊಡಿಸಿರಬಹುದು. ಬ್ಯಾಟ್ ಮತ್ತು ಬಾಲ್ ನಡುವೆ ಇವತ್ತು ನಡೆದ ತೀವ್ರ ಸ್ವರೂಪದ ಹಣಾಹಣಿ ಬಹಳ ದಿನಗಳವರೆಗೆ ನೆನಪಿನಲ್ಲಿ ಉಳಿಯಲಿದೆ.

ಆದರೆ ಹಳಬರಿಗೆ, ಅಂದರೆ, 70 ಮತ್ತು 80 ರ ದಶಕದಿಂದ ಕ್ರಿಕೆಟ್ ಫಾಲೊ ಮಾಡಿಕೊಂಡು ಬಂದಿರುವವರಿಗೆ ಇವತ್ತಿನ ಟೆಸ್ಟ್​ ಇದೇ ತಂಡಗಳ ನಡುವೆ 1981 ರ ಸರಣಿಯ ಅಡಿಲೇಡ್ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿರಬಹುದು. ಆದನ್ನು ಈ ಸಂದರ್ಭದಲ್ಲಿ ಮೆಲುಕು ಹಾಕುವುದು ಅತ್ಯಂತ ಪ್ರಸ್ತುತವಾಗಿದೆ.

ಭಾರತೀರು ಈ ಟೆಸ್ಟ್​ ಅನ್ನು ಎರಡು ಕಾರಣಗಳಿಗೆ ನೆನಪಿಟ್ಟುಕೊಂಡಿದ್ದಾರೆ. ಒಂದು, ಭಾರತದ ಮೊದಲ ಇನ್ನಿಂಗ್ಸ್​ನಲ್ಲಿ ಸಂದೀಪ್ ಪಾಟೀಲ್, ಅಸ್ರೇಲಿಯಾದ ಸರ್ವಕಾಲಿಕ ಶ್ರೇಷ್ಠ ಬೌಲರ್ ಡೆನಿಸ್ ಲಿಲ್ಲೀ, ಲೆನ್ ಪಾಸ್ಕೋ, ರಾಡ್ನಿ ಹಾಗ್ ಆಗ ವಿಶ್ವದ ಅತ್ಯತ್ತುಮ ಸ್ಪಿನ್ನರಗಳಲ್ಲಿ ಒಬ್ಬರಾಗಿದ್ದ ಬ್ರೂಸ್ ಯಾರ್ಡ್ಲೀ ಮುಂತಾದವರನ್ನು ಮನಸಾರೆ ದಂಡಿಸಿ, ಮಿಂಚಿನ ಗತಿಯಲ್ಲಿ 174 ರನ್​ಗಳನ್ನು ಬಾರಿಸಿದ್ದು (22 ಫೋರ್ ಮತ್ತು 1 ಸಿಕ್ಸ್) ಮತ್ತು ಎರಡನೆಯದ್ದು, ಭಾರತದ ಎರಡನೇ ಇನ್ನಿಂಗ್ಸ್​ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಯಶಪಾಲ್ ಶರ್ಮ ಅವರೊಂದಿಗೆ, ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಸಯ್ಯದ್ ಕಿರ್ಮಾನಿ, ಆಫ್​ಸ್ಪಿನ್ನರ್ ಶಿವಲಾಲ್ ಯಾದವ್ ಮತ್ತು ಎಡಗೈ ವೇಗದ ಬೌಲರ್ ಕರ್ಸನ್ ಘಾವ್ರಿ ಅವರೆಲ್ಲ ಇಂದು ಸಿಡ್ನಿಯಲ್ಲಿ ರವಿಚಂದ್ರನ್ ಆಶ್ವಿನ್ ಮತ್ತು ಹನುಮ ವಿಹಾರಿಯಂತೆ ವೀರೋಚಿತ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದು.

ಡೆನಿಸ್​ ಲಿಲ್ಲೀ ಎಸೆತವನ್ನು ಬೌಂಡರಿಗಟ್ಟುತ್ತಿರುವ ಸಂದೀಪ್ ಪಾಟೀಲ್

ಪಂದ್ಯದ ಕೊನೆಯ ದಿನ ಭಾರತಕ್ಕೆ ಗೆಲ್ಲಲು 331 ರನ್​ಗಳ ಅವಶ್ಯಕತೆಯಿತ್ತು. ಆದರೆ, ಭಾರತದ ಘಟಾನುಘಟಿ ಬ್ಯಾಟ್ಸ್​ಮ್​ಳಾಗಿದ್ದ ಸುನಿಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್, ದಿಲೀಪ್ ವೆಂಗ್​ಸರ್ಕಾರ್ ಮತ್ತು ಪಾಟೀಲ್ ಮೊದಲಾದವರೆಲ್ಲ ಭಾರತ ಮೊತ್ತ 90 ರನ್​ಗಳಾಗುವಷ್ಟರಲ್ಲಿ ಔಟಾಗಿ ಬಿಟ್ಟಿದ್ದರು. ಅತಿಥೇಯರು ಗೆಲುವಿನ ಹೊಸ್ತಿಲಲ್ಲಿದ್ದರು, ಕೇವಲ ಔಪಚಾರಿಕತೆ ಮಾತ್ರ ಬಾಕಿಯಿತ್ತು.

ಆಸ್ಸೀಗಳ ದಾಳಿಯನ್ನು ಆದರೆ ಶರ್ಮ, ಕಿರ್ಮಾನಿ ಕೆಚ್ಚೆದೆಯಿಂದ ಎದುರಿಸಿ ವಿಕೆಟ್ ಮೇಲೆ ಭದ್ರವಾಗಿ ತಳವೂರಿ ನಿಂತರು. ಶರ್ಮ 157 ಎಸೆತಗಳನ್ನಾಡಿ 13 ರನ್ ಗಳಿಸಿದರು. ಕಿರ್ಮಾನಿ ತಮ್ಮ 14 ರನ್​ಗಳಿಗೆ 81 ಎಸೆತಗಳನ್ನಾಡಿದರು. ಅವರಿಬ್ಬರು ಔಟಾದಾಗ ಪಂದ್ಯ ಕೊನೆಗೊಳ್ಳಲು ಇನ್ನೂ 11 ಓವರ್​ಗಳು ಬಾಕಿಯಿದ್ದವು. ಭಾರತದ ಸ್ಕೋರ್ 128/8 ಅಗಿತ್ತು. 9ನೇ ವಿಕೆಟ್​ಗೆ ಶಿವಲಾಲ್ ಮತ್ತು ಘಾವ್ರಿ ಜೋಡಿಯು ಲಿಲ್ಲಿ, ಪಾಸ್ಕೋ ಮತ್ತು ಹಾಗ್ ಅವರ ವೇಗದ ದಾಳಿಯನ್ನು ಕೆಚ್ಚೆದೆಯಿಂದ ಎದುರಿಸಿ ಪಂದ್ಯವನ್ನು ಉಳಿಸಿದ್ದರು. ಶಿವಲಾಲ್ 28 ಎಸೆತಗಳನ್ನೆದುರಿಸಿ ತಮ್ಮ ಖಾತೆಯನ್ನೂ ಓಪನ್ ಮಾಡದೆ ಆಜೇಯರಾಗುಳಿದರು, 36 ಎಸೆತಗಳನ್ನಾಡಿದ ಘಾವ್ರಿ 7 ರನ್​ಗಳೊಂದಿಗೆ ಔಟಾಗದೆ ಉಳಿದರು.

ಅವರ ಧೀರೋದಾತ್ತ ಬ್ಯಾಟಿಂಗನ್ನು ಆಸ್ಸೀ ನಾಯಕ ಕಿಮ್ ಹ್ಯೂಸ್ ಮತ್ತು ವಿಖ್ಯಾತ ಬ್ಯಾಟ್ಸ್​ಮನ್​ ಗ್ರೆಗ್ ಚಾಪೆಲ್ ಮುಕ್ತವಾಗಿ ಕೊಂಡಾಡಿದ್ದರು.

ಕರ್ಸನ್ ಘಾವ್ರಿ

ಎಷ್ಟೋ ವರ್ಷಗಳ ನಂತರ ಆ ಟೆಸ್ಟ್ ಕುರಿತು ಶಿವಾಲಾಲ್ ಹೀಗೆ ಪ್ರತಿಕ್ರಿಯಿಸಿದ್ದರು.

‘ಅಡಿಲೇಡ್​ ಟೆಸ್ಟ್​ಗೆ ಮೊದಲು ನಡೆದ 4-ದಿಗನಳಒಂದು ಪಂದ್ಯವನ್ನು ನಾವು ಸೋತಿದ್ದೆವು. ಆ ಟೂರ್ ಗೇಮ್​ನಲ್ಲಿ ನಾನು ಎಡಗೈ ಸ್ಪಿನ್ನರ್ ದಿಲಿಪ್ ದೋಷಿ ಆವರನ್ನು ಉಳಿಸುವ ಪ್ರಯತ್ನದಲ್ಲಿ ಔಟಾಗಿದ್ದರಿಂದ ನಾಯಕ ಗಾವಸ್ಕರ್ ಅವರಿಂದ ತೀವ್ರ ತರಾಟೆಗೊಳಗಾಗಿದ್ದೆ. ಒಬ್ಬ ವೃತ್ತಿಪರ ಆಟಗಾರನಾಗಿ ನಿನ್ನನ್ನು ನೀನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಟೀಮಿನ ಶ್ರೇಯಸ್ಸಿಗಾಗಿ ಶ್ರಮಿಸಬೇಕಿಬೇಕು ಅಂತ ಸನ್ನಿ ಹೇಳಿದ್ದರು. ಅದಾದ ಮೇಲೆ ನಡೆದ ಅಡಿಲೇಡ್​ ಟೆಸ್ಟ್​ನಲ್ಲಿ ನಾನು ಮತ್ತು ಘಾವ್ರಿ ಕ್ರಮವಾಗಿ 28 ಮತ್ತು 36 ಎಸೆತಗಳನ್ನಾಡಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಸಫಲರಾದಾಗ ಸನ್ನಿ ನಾವು ತೋರಿದ ಧೈರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದ್ದರು’ ಎಂದು ಶಿವಲಾಲ್ ಹೇಳಿದ್ದರು.

ಶಿವಲಾಲ್ ಯಾದವ್

India vs Australia Test Series​ | ಟೀಂ ಇಂಡಿಯಾ-ಆಸಿಸ್​ ಜಿದ್ದಾಜಿದ್ದಿ ರೋಚಕ ಕ್ಷಣಗಳ ಚಿತ್ರನೋಟ

Published On - 6:26 pm, Mon, 11 January 21