ಆರ್ಡರ್ ಮೀರಿದ ಆಟಗಾರ ರಾಹುಲ್ ದ್ರಾವಿಡ್: ಎಲ್ಲಕ್ಕೂ ಬೇಕು, ಯಾವತ್ತೂ ಬೇಕು!
ಆಗುವುದಿಲ್ಲ ಎಂಬ ಪದ ದ್ರಾವಿಡ್ ಶಬ್ದಕೋಶದಲ್ಲೇ ಇಲ್ಲ. ಬೇಕು ಬೇಕಾದಂತೆ ತಂಡಕ್ಕೆ ಒದಗಿಬಂದ ವಾಲ್, ಹಸನ್ಮುಖಿಯಾಗಿ, ತಾಳ್ಮೆಯ ಪ್ರತಿರೂಪವಾಗಿ, ಸೌಜನ್ಯ ಸಿಂಧುವಾಗಿ ಅಂಕಣದೊಳಗೂ ಹೊರಭಾಗದಲ್ಲೂ ಕಂಡವರು. ದ್ರಾವಿಡ್, ತಾವು ಆಡುತ್ತಿದ್ದಾಗ ಮಾತ್ರ ತಂಡಕ್ಕೆ ಆಸರೆಯಾದವರು ಎಂದರೆ ಅದು ನಮ್ಮ ದಡ್ಡತನ. ರಾಹುಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯಾಗಿದ್ದಾರೆ ಎಂಬ ಸುದ್ದಿಯೇ ಸುಳ್ಳು.
ಓಪನಿಂಗ್, ಒನ್ ಡೌನ್, ಟು ಡೌನ್, ಮಿಡಲ್ ಆರ್ಡರ್.. ಜೊತೆಗೆ ಏಳು, ಎಂಟನೇ ಕ್ರಮಾಂಕಕ್ಕೆ ದಾಂಡಿಗ ಬೇಕು. ದ್ರಾವಿಡ್ ಮಾಡುತ್ತಾರೆ. ಕೀಪರ್ ಇಲ್ಲ. ಸರಿ, ದ್ರಾವಿಡ್ ಇದ್ದಾರೆ. ಸ್ಲಿಪ್ನಲ್ಲಿ ಫೀಲ್ಡರ್ ಬೇಕು. ದ್ರಾವಿಡ್ ಬಿಟ್ಟರೆ ಮತ್ತೊಂದು ಆಯ್ಕೆ ಕಷ್ಟ. ಕ್ಯಾಪ್ಟನ್ ಬೇಕು. ದ್ರಾವಿಡ್ ಆಗಬಲ್ಲರು. ಬೌಲರ್ ಬೇಕೋ ಒಂದೆರಡು ಓವರ್ ಬೌಲಿಂಗ್ ಮಾಡಲೂ ದ್ರಾವಿಡ್ ಸಿದ್ಧ. ರಾಹುಲ್ ದ್ರಾವಿಡ್ ಎಂಬ ದೈತ್ಯ ಪ್ರತಿಭೆ ತಂಡಕ್ಕೆ ಸಿಕ್ಕಿದ, ದಕ್ಕಿದ ಬಗೆ ಇದು.
ಆಗುವುದಿಲ್ಲ ಎಂಬ ಪದ ದ್ರಾವಿಡ್ ಶಬ್ದಕೋಶದಲ್ಲೇ ಇಲ್ಲ. ಬೇಕು ಬೇಕಾದಂತೆ ತಂಡಕ್ಕೆ ಒದಗಿಬಂದ ವಾಲ್, ಹಸನ್ಮುಖಿಯಾಗಿ, ತಾಳ್ಮೆಯ ಪ್ರತಿರೂಪವಾಗಿ, ಸೌಜನ್ಯ ಸಿಂಧುವಾಗಿ ಅಂಕಣದೊಳಗೂ ಹೊರಭಾಗದಲ್ಲೂ ಕಂಡವರು. ದ್ರಾವಿಡ್, ತಾವು ಆಡುತ್ತಿದ್ದಾಗ ಮಾತ್ರ ತಂಡಕ್ಕೆ ಆಸರೆಯಾದವರು ಎಂದರೆ ಅದು ನಮ್ಮ ದಡ್ಡತನ. ರಾಹುಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯಾಗಿದ್ದಾರೆ ಎಂಬ ಸುದ್ದಿಯೇ ಸುಳ್ಳು.
ಪ್ರಸ್ತುತ ನಡೆಯುತ್ತಿರುವ ಆಸಿಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲುಂಡಿತು. ತಂಡದ ಒಟ್ಟು ಮೊತ್ತ ಐವತ್ತೂ ದಾಟದೆ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಆ ಕ್ಷಣಕ್ಕೆ ನೆನಪಾದದ್ದು ಯಾವ ದೇವರೂ ಅಲ್ಲ. ಬದಲಾಗಿ, ಆಗ ಕೇಳಿಬಂದದ್ದು ದ್ರಾವಿಡ್ ಹೆಸರು. ಭಾರತದ ಹಿರಿಯ ಕ್ರಿಕೆಟಿಗೆ ದಿಲೀಪ್ ವೆಂಗ್ ಸರ್ಕಾರ್, ರಾಹುಲ್ ದ್ರಾವಿಡ್ ಹೆಸರನ್ನು ಸೂಚಿಸಿ, ದ್ರಾವಿಡ್ರನ್ನು ಆಸ್ಟ್ರೇಲಿಯಾಗೆ ಕಳುಹಿಸಿ. ಅವರು ಭಾರತೀಯ ಬ್ಯಾಟಿಂಗ್ ಗುಣಮಟ್ಟ ಹೆಚ್ಚಿಸಲು ನೆರವಾಗಬಲ್ಲರು ಎಂದು ಹೇಳಿದರು. ಕ್ರಿಕೆಟ್ ಅಭಿಮಾನಿಗಳು ಕೂಡ ಅದಕ್ಕೆ ದನಿಗೂಡಿಸುತ್ತಾರೆ ಹೊರತು ವಿರೋಧಿಸುವುದಿಲ್ಲ. ದ್ರಾವಿಡ್ ಯಾಕಪ್ಪಾ ಎಂದು ಕೇಳುವುದಿಲ್ಲ.
ವಿದೇಶಿ ಅಂಗಳದಲ್ಲಿಯೂ ಸಮರ್ಥವಾಗಿ ಬ್ಯಾಟ್ ಬೀಸಬಲ್ಲ ದ್ರಾವಿಡ್, ಯಾವ ಬೌನ್ಸರ್, ಯಾರ್ಕರ್ಗಳನ್ನೂ ತಮ್ಮ ಬ್ಯಾಟ್ ನಿಂದ ಪಳಗಿಸಬಲ್ಲರು. ಎಸೆತಗಾರನ ಸಾಮರ್ಥ್ಯವನ್ನು ಕುಟ್ಟಿಯೇ ಪುಡಿಮಾಡಬಲ್ಲರು. ಆ ಕಲಾತ್ಮಕ ಆಟಕ್ಕೆ ಎಸೆತಗಾರನೂ ನಕ್ಕು ಹಿಂದೆ ತೆರಳುವಂತೆ.
ಈ ಬಗ್ಗೆ ಪಾಕ್ ಆಕ್ರಮಣಕಾರಿ ಎಸೆತಗಾರ ಶೋಯೆಬ್ ಅಖ್ತರ್, ದ್ರಾವಿಡ್ ನನ್ನ ದುಃಸ್ವಪ್ನವಾಗಿದ್ದರು ಎಂದು ಹೇಳಿದ್ದರು. ಮೊದಲ ಹದಿನೈದು ನಿಮಿಷಗಳ ಕಾಲ ದ್ರಾವಿಡ್ ವಿಕೆಟ್ ತೆಗೆಯಲು ಪ್ರಯತ್ನಿಸಿ. ಆಗಿಲ್ಲವಾದರೆ ಉಳಿದವರನ್ನು ಔಟ್ ಮಾಡುವ ಕಡೆ ಗಮನ ಕೊಡಿ ಎಂದು ಆಸಿಸ್ ಮಾಜಿ ನಾಯಕ ಸ್ಟೀವ್ ವಾ ತಿಳಿಸಿದ್ದರು.
ದ್ರಾವಿಡ್ ತಮ್ಮ ನಿವೃತ್ತಿ ಬಳಿಕ ಸುಮ್ಮನುಳಿಯಲಿಲ್ಲ. ಕ್ರಿಕೆಟ್ ಆಟಕ್ಕಾಗಿ ಮತ್ತೂ ಮತ್ತೂ ದುಡಿದರು. ಯುವ ಆಟಗಾರರನ್ನು ತಯಾರು ಮಾಡಿದರು. ಐಪಿಎಲ್ ಎಂಬ ಫ್ಯಾನ್ಸಿ ಸರಣಿಯಲ್ಲೂ ಅತಿ ಹಿರಿಯರನ್ನು ಹಾಗೂ ಕಿರಿಯರನ್ನು ಹೊಂದಿದ್ದ ತಮ್ಮ ತಂಡದಿಂದ ಪ್ರತಿಭೆಗಳನ್ನು ಹೊರಗೆಳೆದು, ಪ್ರದರ್ಶನ ತೆಗೆಸಿ, ಅಂತಿಮ ಹಂತದವರೆಗೆ ಕೊಂಡೊಯ್ದದ್ದು ಅದಕ್ಕೊಂದು ಸಾಕ್ಷಿ. ಕೆ.ಎಲ್.ರಾಹುಲ್, ಅಜಿಂಕ್ಯ ರಹಾನೆ, ಸಂಜು ಸಾಮ್ಸನ್, ಕರುಣ್ ನಾಯರ್ರಂತಹ ಪ್ರತಿಭಾವಂತ ಆಟಗಾರರು ದ್ರಾವಿಡ್ ಜೊತೆ ಪಳಗಿದವರು.
ಸೋಲಿನ ಸುಳಿಯಲ್ಲಿ ಸಿಲುಕಿದ್ದ ಅದೆಷ್ಟೋ ಪಂದ್ಯಗಳನ್ನು, ಫಾಲೊ ಆನ್ ಆಗುತ್ತಿದ್ದ ಬಹಳಷ್ಟು ಇನ್ನಿಂಗ್ಸ್ಗಳನ್ನು ಹಿಡಿದು ಮೇಲೆತ್ತಿದವರು ದ್ರಾವಿಡ್. ಹೀನಾಯ ಸೋಲನ್ನು ಸಾಧಾರಣ ಸೋಲಾಗಿಯೂ, ಸಾಧಾರಣ ಸೋಲನ್ನು ಗೆಲುವಾಗಿಯೂ ಅದಾಗದಿದ್ದರೆ ಡ್ರಾ ಆಗಿಯೂ ಪರಿವರ್ತಿಸಿ ತಂಡದ ಮಾನ ಉಳಿಸುವ ಆಟ ದ್ರಾವಿಡ್ ಕಡೆಯಿಂದ ಮಾತ್ರ ಸಾಧ್ಯವಿತ್ತು. ಅದಕ್ಕಾಗಿ ಭದ್ರಗೋಡೆ, ವಾಲ್ ಎಂಬ ಬಿರುದು ಸೂಕ್ತವಾಗಿತ್ತು.
ತಂಡಕ್ಕೆ ನೆರವಾಗುವ ದ್ರಾವಿಡ್ ಶೈಲಿಯ ಬಗ್ಗೆ ವಿಶ್ವ ಕ್ರಿಕೆಟಿಗರು ಹಲವು ಮಾತುಗಳಿಂದ ಅಭಿನಂದಿಸಿದ್ದಾರೆ. ಜ್ಯಾಮಿ ಬಗೆಗಿನ ಹೆಮ್ಮೆಯ ಸಂಗತಿ ಎಂದರೆ, ಅವನು ಯಾವುದಕ್ಕೂ No ಎಂದು ಹೇಳಿಲ್ಲ. ಹೀಗೆಂದು ಕ್ರಿಕೆಟ್ ದಾದಾ ಗಂಗೂಲಿ ಹೇಳಿದ್ದರು. ತಂಡಕ್ಕಾಗಿ ನೀರಿನ ಮೇಲೆ ನಡೆಯಲು ತಿಳಿಸಿ. ಎಷ್ಟು ಕಿಲೋಮೀಟರ್ ಎಂದು ದ್ರಾವಿಡ್ ಕೇಳುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಮಾತನಾಡಿದ್ದರು.
ಹಾಗೆಂದು ದ್ರಾವಿಡ್ ಟೆಸ್ಟ್ಗೆ ಸೀಮಿತವಾದ ಆಟಗಾರನಲ್ಲ. ಏಕದಿನ, ಟ್ವೆಂಟಿ ಟ್ವೆಂಟಿ ವಿಭಾಗದಲ್ಲಿ ಕೂಡ ದ್ರಾವಿಡ್ ಸಮರ್ಥರು. ಅವರ ಆಟದ ಅಂಕಿ ಅಂಶಗಳೇ ಅದನ್ನು ಸಾರಿ ಹೇಳುತ್ತವೆ. ಆದರೆ, ಹಲವರ ಕಣ್ಣಿಗೆ ದ್ರಾವಿಡ್, ಕೇವಲ ಟೆಸ್ಟ್ ಆಟಗಾರನಾಗಿ ಕಂಡದ್ದು ವಿಷಾದನೀಯ.
ದ್ರಾವಿಡ್ ಪಕ್ಕಾ ಕ್ರಿಕೆಟಿಗ. ಮೊಣಕಾಲೂರಿ, ಚೆಂಡನ್ನು ತಮ್ಮ ಬಲಕ್ಕೆ ಅಟ್ಟಿ, ಬ್ಯಾಟನ್ನು ಎತ್ತಿ ಹಿಡಿದಂತೆಯೇ ಹಿಡಿದು ನಿಲ್ಲುವ, ಓಡುವ ದ್ರಾವಿಡ್ ಕವರ್ ಡ್ರೈವ್ಗೆ ಮನಸೋಲದವರು ಇರಲಾರರು. ಬೌನ್ಸರ್ ಎಸೆತವನ್ನು ಎರಡಂಗುಲ ಹಾರಿ ತಡೆದು, ಬ್ಯಾಟ್ ಮೂಲಕ ಚೆಂಡನ್ನು ನೆಲದ ಮೇಲೆ ಪುಟುಪುಟು ಪಿಚ್ ಆಗಿಸಿ ನಿಲ್ಲಿಸುವ ಆಟವೂ ದ್ರಾವಿಡ್ ಬ್ಯಾಟಿಂದ ಸಿಗಬೇಕಷ್ಟೆ. ರಾಹುಲ್ ಗಾರ್ಡ್ ತೆಗೆದುಕೊಳ್ಳುವುಕ್ಕಿಂತ ಶಾಂತಿಯುತವಾದ ನೋಟ ಮತ್ತೊಂದಿದೆಯೇ? ಎಂದು ದ್ರಾವಿಡ್ ಕ್ರೀಸಿಗಿಳಿದು ಗಾರ್ಡ್ ತೆಗೆದುಕೊಳ್ಳುವ ಸೌಂದರ್ಯದ ಬಗ್ಗೆ ಹರ್ಷ ಭೋಗ್ಲೆ ಕಮೆಂಟರಿಯಲ್ಲಿ ಹೇಳಿದ್ದರು. ದ್ರಾವಿಡ್ ಬ್ಯಾಟಿಂಗ್- ಕಲಾತ್ಮಕ ಕುಸುರಿ.
ಇಂತಹ ಆಟಗಾರ ತಂಡಕ್ಕೆ ಒದಗಿಬಂದ ಮತ್ತೊಂದು ಸನ್ನಿವೇಶ ನೆನಪಿಸಿಕೊಳ್ಳಲೇಬೇಕು. ಅದು ಭಾರತ ತಂಡದ 2011 ರ ಇಂಗ್ಲೆಂಡ್ ಪ್ರವಾಸ. ನಾಲ್ಕು ಟೆಸ್ಟ್ಗಳ ಸರಣಿಯ ಕೊನೆಯ ಟೆಸ್ಟ್ ಪಂದ್ಯಾಟ. ಮೊದಲ ಮೂರು ಟೆಸ್ಟ್ನಲ್ಲೂ ಸೋತು ಬರೆ ಹಾಕಿಸಿಕೊಂಡಿದ್ದ ತಂಡಕ್ಕೆ, ವೈಟ್ ವಾಶ್ ತಪ್ಪಿಸಿಕೊಳ್ಳಲು ಗೆಲ್ಲುವ ಒತ್ತಡವಿತ್ತು.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೆಹವಾಗ್ ಜೊತೆ, ಓಪನಿಂಗ್ ಆಟಗಾರನಾಗಿ ದ್ರಾವಿಡ್ ಕ್ರೀಸಿಗಿಳಿದರು. ಒಂದೆಡೆ ತಂಡದ ವಿಕೆಟ್ ಸಾಲು ಸಾಲಾಗಿ ಉರುಳುತ್ತಿದ್ದರೆ ಮತ್ತೊಂದೆಡೆ ದ್ರಾವಿಡ್ ಕ್ರೀಸ್ ಕಚ್ಚಿ ನಿಂತರು. ಎಲ್ಲಾ ಆಟಗಾರರು ಒಂದಂಕಿ, ಎರಡಂಕಿ ದಾಟಲು ಪರದಾಡುವಾಗ, ದ್ರಾವಿಡ್ ಶತಕ ಬಾರಿಸಿದರು. ಇಂಗ್ಲೆಂಡ್ ವಿರುದ್ಧ 591 ರನ್ ಗುರಿ ಬೆನ್ನತ್ತಿದ ಭಾರತವನ್ನು ಫಾಲೊ ಆನ್ನಿಂದ ತಪ್ಪಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವೇ ಇರಲಿಲ್ಲ. ಭಾರತ ಫಾಲೊ ಆನ್ ಎದುರಿಸಿಲೇಬೇಕಾಯಿತು.
ಭಾರತ ಒಂದೆಡೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕಂಗೆಟ್ಟರೆ ಮತ್ತೊಂದೆಡೆ, ಓಪನಿಂಗ್ ಬಂದಿದ್ದ ದ್ರಾವಿಡ್ ಇನ್ನೂ ಕ್ರೀಸ್ನಲ್ಲಿದ್ದರು. ಫಾಲೊ ಆನ್ ಬಳಿಕ ಮತ್ತೆ ಎರಡನೇ ಇನಿಂಗ್ಸ್ ಕಟ್ಟಲು ದ್ರಾವಿಡ್ ಆಡಬೇಕಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ನಾಟೌಟ್ ಆಗಿಯೇ ಉಳಿದಿದ್ದ ವಾಲ್ ಮತ್ತೆ ಬ್ಯಾಟಿಂಗ್ಗೆ ಇಳಿದಾಗ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
ಆ ಇಡೀ ಸರಣಿಯು ಭಾರತ vs ಇಂಗ್ಲೆಂಡ್ ಆಗಿರಲಿಲ್ಲ. ಅದು ದ್ರಾವಿಡ್ vs ಇಂಗ್ಲೆಂಡ್ ಎಂಬಂತಾಗಿತ್ತು. ಇಡೀ ಸರಣಿಯಲ್ಲಿ ದ್ರಾವಿಡ್ ಹೊರತಾಗಿ ಇತರರು ಉತ್ತಮ ಪ್ರದರ್ಶನ ತೋರಲಿಲ್ಲ. ಭಾರತಕ್ಕೆ ದ್ರಾವಿಡ್ ಆಟ ಅನಿವಾರ್ಯವಾಯಿತು.
ಇಂಗ್ಲೆಂಡ್ ವಿರುದ್ಧದ ಅದೇ ಸರಣಿಯ, ಏಕದಿನ ಹಾಗೂ 20-20 ಪಂದ್ಯ ಆಡಲು ಬಿಸಿಸಿಐಗೆ ದ್ರಾವಿಡ್ ಬೇಕಾಯಿತು. ಎರಡು ವರ್ಷಗಳ ಬಳಿಕ, ಭಾರತದ ಏಕದಿನ ತಂಡಕ್ಕೆ ದ್ರಾವಿಡ್ ಆಯ್ಕೆಯಾದರು. ಆ ಸರಣಿಯಲ್ಲಿ ದ್ರಾವಿಡ್, ಒಂದೇ ಒಂದು ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನೂ ಆಡಿದರು. ಇಂಗ್ಲೆಂಡ್ ಸ್ಪಿನ್ನರ್ ಸ್ವಾನ್ ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ತಂಡಕ್ಕೆ ಬೇಕು ಬೇಕಾದಂತೆ ಆಗಿಬಂದ ರಾಹುಲ್, ತಂಡ ಬಯಸಿದಂತೆ ಆಡಿದರು.
ದ್ರಾವಿಡ್ ನೀಲಿ ಅಂಗಿ ತೊಟ್ಟದ್ದು ಅದೇ ಕೊನೆ. ಅದೇ ಸರಣಿಯಲ್ಲಿ ಏಕದಿನ ಹಾಗೂ ಟಿ-20 ವಿಭಾಗಕ್ಕೆ ದ್ರಾವಿಡ್ ವಿದಾಯ ಘೋಷಿಸಿದರು. ಬಳಿಕ, 2012ರಲ್ಲಿ ಟೆಸ್ಟ್ ಕ್ರಿಕೆಟ್ ಗೂ ವಿದಾಯ ಹೇಳಿದರು. ಎರಡೂ ವಿದಾಯಗಳು ಮಿಸ್ಟರ್ ಡಿಪಂಡೇಬಲ್, ಇಂಡಿಯನ್ ವಾಲ್ ರಾಹುಲ್ ದ್ರಾವಿಡ್ಗೆ ತಕ್ಕುದಾದ ಫೇರ್ವೆಲ್ಗಳಾಗಿರಲಿಲ್ಲ ಎಂಬುದು ದ್ರಾವಿಡ್ ಅಭಿಮಾನಿಗಳ ಬೇಸರವಾಗಿತ್ತು.
ವಿಶ್ವಕಪ್ ಟ್ರೋಫಿ ಪಡೆದ ಭಾರತದ ಯಾವ ತಂಡದಲ್ಲೂ ದ್ರಾವಿಡ್ ಇರಲಿಲ್ಲ ಎಂಬ ಬೇಸರವೂ ವಾಲ್ ಅಭಿಮಾನಿಗಳಿಗಿತ್ತು. ಆದರೆ, 2018ರಲ್ಲಿ ಭಾರತೀಯ ಅಂಡರ್-19 ಕ್ರಿಕೆಟ್ ತಂಡ ವಿಶ್ವಕಪ್ ಗೆಲುವು ದಾಖಲಿಸಿತು. ಆ ತಂಡಕ್ಕೆ ದ್ರಾವಿಡ್ ಕೋಚ್ ಆಗಿದ್ದರು. ತಾವು ಪಡೆದ ಟ್ರೋಫಿಯನ್ನು ಯುವ ಕ್ರಿಕೆಟಿಗರು ದ್ರಾವಿಡ್ ಕಡೆಗೆ ಓಡೋಡಿ ತಂದು ಕೊಟ್ಟರು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆ ಗೆಲುವಿನಲ್ಲಿ, ಕೋಚ್ ದ್ರಾವಿಡ್ ಪಾತ್ರವನ್ನು ಸ್ಪಷ್ಟವಾಗಿ ಗುರುತಿಸಿ, ಗೌರವಿಸಿದರು. ವಿಶ್ವಕಪ್ ಟ್ರೋಫಿ ಪಡೆದ ಭಾರತದ ಯಾವ ತಂಡದಲ್ಲೂ ದ್ರಾವಿಡ್ ಇರಲಿಲ್ಲ ಎಂಬ ಬಗ್ಗೆ ಅಭಿಮಾನಿಗಳ ಬೇಸರಕ್ಕೆ ಈ ದಿನವೊಂದು ಸುಂದರವಾಗಿ ಕಂಡಿತು.
ರಾಹುಲ್ ದ್ರಾವಿಡ್ ತಮ್ಮ ನಿವೃತ್ತಿ ಬಳಿಕ, ನಿನ್ನೆ ಮೊನ್ನೆಯವರೆಗೂ ಕ್ರಿಕೆಟ್ ಗೆ ಬೇಕು ಎಂದು ಅನಿಸಿದ್ದು ಇಂಥದ್ದೇ ಕಾರಣಗಳಿಂದ. ದಾಖಲೆ, ಪ್ರಶಸ್ತಿ, ಪ್ರಶಂಸೆ ಯಾವುದರ ಹಂಗಿಗೂ ಬೀಳದ ದ್ರಾವಿಡ್ನಂಥಾ ಆಟಗಾರರಿಗೆ ನಿವೃತ್ತಿ ಎಂಬುದು ಇಲ್ಲ. ರಾಹುಲ್ ದ್ರಾವಿಡ್ 1997ರಿಂದ ತೊಡಗಿ 2011-12 ರ ವರೆಗೆ ಇದ್ದಂತೆ ಇಂದೂ ಕೂಡ. ಎಲ್ಲಕ್ಕೂ ಬೇಕು. ಯಾವತ್ತೂ ಬೇಕು.
ಅಡಿಲೇಡ್ ಟೆಸ್ಟ್ ಹೀನಾಯ ಸೋಲಿನ ನಂತರ ರಾಹುಲ್ ದ್ರಾವಿಡ್ ಸೇವೆ ಭಾರತಕ್ಕೆ ಅಗತ್ಯವಿದೆ ಎಂಬ ಕೂಗು ಕೇಳಿಬಂದಿದೆ
Published On - 9:35 pm, Mon, 11 January 21